

ಸುಂಟಿಕೊಪ್ಪ, NEWS DESK ಸೆ.30: ಮೈಸೂರು ದಸರಾ ಉತ್ಸವದಲ್ಲಿ ಅಂಬಾರಿ ಹೊರುತ್ತಿದ್ದ ನೆಚ್ಚಿನ ಆನೆ **‘ಅರ್ಜುನ’**ನ ಸ್ಮರಣಾರ್ಥ ಸುಂಟಿಕೊಪ್ಪದ 22 ಉತ್ಸಾಹಿ ಯುವಕರು ಸೇರಿ ರಚಿಸಿರುವ ‘ಟೀಂ ಅರ್ಜುನ’ ವತಿಯಿಂದ ಜಿಲ್ಲಾ ಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಅ.16ರಿಂದ 18ರವರೆಗೆ ಸುಂಟಿಕೊಪ್ಪದ ಸರ್ಕಾರಿ ಶಾಲಾ ಮೈದಾನದಲ್ಲಿ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಟೀಂ ಅರ್ಜುನದ ಅಧ್ಯಕ್ಷ ಮಹಮ್ಮದ್ ಆಲಿ ಕೆ.ಎ., ಅರ್ಜುನನ ನೆನಪನ್ನು ಶಾಶ್ವತವಾಗಿಸುವ ಉದ್ದೇಶದಿಂದ ತಂಡವನ್ನು ರಚಿಸಲಾಗಿದ್ದು, ಕ್ರೀಡೆ ಹಾಗೂ ಸಮಾಜ ಸೇವಾ ಚಟುವಟಿಕೆಗಳಲ್ಲಿ ನಿರಂತರವಾಗಿ ತೊಡಗಿಸಿಕೊಳ್ಳುವುದು ತಂಡದ ಉದ್ದೇಶವಾಗಿದೆ ಎಂದು ತಿಳಿಸಿದರು.
ಪಂದ್ಯಾವಳಿಯಲ್ಲಿ ಜಿಲ್ಲೆಯ ಮೊದಲು ನೋಂದಾಯಿಸಿಕೊಳ್ಳುವ 16 ತಂಡಗಳಿಗೆ ಮಾತ್ರ ಅವಕಾಶವಿದ್ದು, ಪಂದ್ಯಗಳು ಲೀಗ್ ಮಾದರಿಯಲ್ಲಿ ತಲಾ 4 ಓವರ್‌ಗಳಿಗೆ ಸೀಮಿತವಾಗಿರಲಿವೆ. ಆಸಕ್ತ ತಂಡಗಳು ನೋಂದಣಿಗಾಗಿ ಟೀಂ ಅರ್ಜುನದ ಕ್ರೀಡಾ ಕಾರ್ಯದರ್ಶಿ ಸಂಶಾದ್ ಪಿ.ಎಸ್. (ಮೊ. 8123302760) ಅವರನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.
ಪಂದ್ಯಾವಳಿಯ ಪ್ರಥಮ ಬಹುಮಾನವಾಗಿ ₹33,333 ನಗದು ಹಾಗೂ ಆಕರ್ಷಕ ಅರ್ಜುನ ಟ್ರೋಫಿ, ದ್ವಿತೀಯ ಬಹುಮಾನವಾಗಿ ₹22,222 ನಗದು ಹಾಗೂ ಅರ್ಜುನ ಟ್ರೋಫಿ ನೀಡಲಾಗುವುದು. ಇದಲ್ಲದೆ ವೈಯಕ್ತಿಕ ಸಾಧನೆಗಾಗಿ ವಿವಿಧ ಬಹುಮಾನಗಳು ಸೇರಿದಂತೆ 100ಕ್ಕೂ ಅಧಿಕ ಬಹುಮಾನಗಳನ್ನು ಕ್ರೀಡಾಪಟುಗಳಿಗೆ ನೀಡಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.
ಲಾಂಛನ ಬಿಡುಗಡೆ
ಇದೇ ಸಂದರ್ಭ ‘ಟೀಂ ಅರ್ಜುನ’ದ ಲಾಂಛನವನ್ನು ಬಿಡುಗಡೆ ಮಾಡಲಾಯಿತು.
ಗೋಷ್ಠಿಯಲ್ಲಿ ಟೀಂ ಅರ್ಜುನದ ಕ್ರೀಡಾ ಕಾರ್ಯದರ್ಶಿ ಸಂಶಾದ್ ಪಿ.ಎಸ್. ಹಾಗೂ ಸಮಿತಿ ಸದಸ್ಯರಾದ ಆರಿಫ್, ಹರ್ಷತ್, ಜಗತ್ ಮತ್ತು ಇಬ್ರಾಹಿಂ ಉಪಸ್ಥಿತರಿದ್ದರು.








