
ವಿರಾಜಪೇಟೆ, NEWS DESK ಸೆ.30: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್, ವಿರಾಜಪೇಟೆ ತಾಲೂಕು ಗೋಣಿಕೊಪ್ಪ ವಲಯದ ವತಿಯಿಂದ ಗೋಣಿಕೊಪ್ಪದ ಸಮುದಾಯ ಭವನದಲ್ಲಿ ಸ್ವಉದ್ಯೋಗ ಮಾಹಿತಿ ಕಾರ್ಯಕ್ರಮ ಹಾಗೂ ರೈತ ಕ್ಷೇತ್ರ ಪಾಠಶಾಲೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಗ್ರಾಮೀಣ ಸ್ವಉದ್ಯೋಗ ತರಬೇತಿ ಸಹಾಯಕಿ ನವ್ಯ ಅವರು ಸ್ವಉದ್ಯೋಗದ ವಿವಿಧ ಅವಕಾಶಗಳ ಕುರಿತು ಮಾಹಿತಿ ನೀಡಿದರು. ನಿರುದ್ಯೋಗ ಸಮಸ್ಯೆಯಲ್ಲ, ಉದ್ಯೋಗ ಮಾಡಲು ಆಸಕ್ತಿ ಇರುವವರಿಗೆ ಹಲವು ಮಾರ್ಗಗಳಿವೆ ಎಂದು ತಿಳಿಸಿದರು.
ಫಾಸ್ಟ್ ಫುಡ್ ತಯಾರಿಕೆ, ಮಹಿಳೆಯರಿಗೆ ಟೈಲರಿಂಗ್, ಅಣಬೆ ಕೃಷಿ, ಜೂಟ್ ಬ್ಯಾಗ್, ಪೇಪರ್ ಬ್ಯಾಗ್ ಹಾಗೂ ಬಟ್ಟೆ ಬ್ಯಾಗ್ ತಯಾರಿಕೆ, ಅಗರಬತ್ತಿ ತಯಾರಿಕೆ ಸೇರಿದಂತೆ ವಿವಿಧ ಸ್ವಉದ್ಯೋಗಗಳನ್ನು ಕೈಗೊಳ್ಳುವ ಮೂಲಕ ಸ್ವಾವಲಂಬಿ ಜೀವನ ನಡೆಸಬಹುದು ಎಂದು ಅವರು ವಿವರಿಸಿದರು.
ಗೋಣಿಕೊಪ್ಪ ಒಕ್ಕೂಟದ ಅಧ್ಯಕ್ಷೆ ಮಂಜುಳಾ ಮಾತನಾಡಿ, ಗ್ರಾಮೀಣ ಭಾಗದ ಜನರಿಗೆ ಉದ್ಯೋಗ ಮಾಡಲು ನೂರಾರು ಅವಕಾಶಗಳಿದ್ದು, ಅವುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ನೀಡಲಾಗುವ ವಿವಿಧ ತರಬೇತಿಗಳು ಗ್ರಾಮೀಣ ಜನರಿಗೆ ಬಹಳಷ್ಟು ಉಪಯುಕ್ತವಾಗಿವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕೃಷಿ ಮೇಲ್ವಿಚಾರಕ ವಸಂತ್, ಉಪಾಧ್ಯಕ್ಷೆ ಪುಷ್ಪ ಮನೋಜ್, ಸೇವಾ ಪ್ರತಿನಿಧಿ ವಿಮಲ, ಸಂಘದ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.








