
ಮಡಿಕೇರಿ, NEWS DESK ಅ.1: ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಕಡ್ಲೇರ ತುಳಸಿ ಮೋಹನ್ ಅವರು ಮೂರು ರಾಷ್ಟ್ರೀಯ ಹಾಗೂ ಒಂದು ರಾಜ್ಯಮಟ್ಟದ ಪ್ರಶಸ್ತಿಗಳಿಗೆ ಭಾಜನರಾಗಿರುವ ಹಿನ್ನೆಲೆಯಲ್ಲಿ ಅವರನ್ನು ಮಡಿಕೇರಿಯ ಕನ್ನಡ ಸಾಹಿತ್ಯ ಪರಿಷತ್ತಿನ ಕಚೇರಿಯಲ್ಲಿ ನಡೆದ ಜಿಲ್ಲಾ ಕಾರ್ಯಕಾರಿ ಸಮಿತಿ ಸಭೆಯ ಸಂದರ್ಭದಲ್ಲಿ ಸರಳವಾಗಿ ಸನ್ಮಾನಿಸಲಾಯಿತು.
ಕಡ್ಲೇರ ತುಳಸಿ ಮೋಹನ್ ಅವರಿಗೆ ‘ಸ್ಟಾರ್ ಆಫ್ ಕರ್ನಾಟಕ’ ರಾಜ್ಯ ಪ್ರಶಸ್ತಿ, ನಾಲ್ವಡಿ ಕೃಷ್ಣರಾಜ ಒಡೆಯರ್ ರಾಷ್ಟ್ರೀಯ ಪ್ರಶಸ್ತಿ ಹಾಗೂ ರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರಶಸ್ತಿ ಸೇರಿದಂತೆ ವಿವಿಧ ಗೌರವಗಳು ಲಭಿಸಿವೆ.
ಸ್ಟಾರ್ ಆಫ್ ಕರ್ನಾಟಕ ರಾಜ್ಯ ಪ್ರಶಸ್ತಿಯನ್ನು ಇಂಡಿಯನ್ ಸೋಶಿಯಲ್ ವರ್ಕರ್ಸ್ ಅಸೋಸಿಯೇಷನ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕರ್ನಾಟಕ ಸಾಧಕರ ಅಭಿವೃದ್ಧಿ ಮಂಡಳಿ ಟ್ರಸ್ಟ್ ಸಹಭಾಗಿತ್ವದಲ್ಲಿ ಕುಂದಾಪುರದಲ್ಲಿ ನಡೆದ ‘ಸಂಸ್ಕೃತ ಉತ್ಸವ ಮತ್ತು ಪ್ರಶಸ್ತಿ ಪ್ರಧಾನ ಸಮಾರಂಭ’ದಲ್ಲಿ ಪ್ರದಾನ ಮಾಡಲಾಯಿತು.
ನಾಲ್ವಡಿ ಕೃಷ್ಣರಾಜ ಒಡೆಯರ್ ರಾಷ್ಟ್ರೀಯ ಪ್ರಶಸ್ತಿಯನ್ನು ಜನಸೇವಾ ಫೌಂಡೇಶನ್ ಕರ್ನಾಟಕ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮೈಸೂರು ಹಾಗೂ ಅಲಿಯನ್ಸ್ ಇಂಟರ್‌ನ್ಯಾಷನಲ್ ಸಂಸ್ಥೆ ಮೈಸೂರು ಇವರ ಸಹಯೋಗದಲ್ಲಿ ನಡೆದ ‘ಸಾಂಸ್ಕೃತಿಕ ಸಂಭ್ರಮ’ ಕಾರ್ಯಕ್ರಮದಲ್ಲಿ ನೀಡಲಾಯಿತು.
ಅದೇ ರೀತಿ, ರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರಶಸ್ತಿಗೆ ಸತ್ವ ಫೌಂಡೇಶನ್ ಕರ್ನಾಟಕ ಹಾಗೂ ಚಿರಾಯು ಕನ್ನಡ ವಾಹಿನಿ ಸಹಯೋಗದಲ್ಲಿ ಬೆಂಗಳೂರಿನಲ್ಲಿ ನಡೆದ ‘ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ’ ಕಾರ್ಯಕ್ರಮದಲ್ಲಿ ಅವರನ್ನು ಆಯ್ಕೆ ಮಾಡಲಾಗಿತ್ತು.
ಈ ಸಂದರ್ಭದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು ಉಪಸ್ಥಿತರಿದ್ದು, ತುಳಸಿ ಮೋಹನ್ ಅವರನ್ನು ಅಭಿನಂದಿಸಿದರು.
— ದುಗ್ಗಳ ಸದಾನಂದ









