ವಿರಾಜಪೇಟೆ, NEWS DESK ಅ.03 : ಬ್ರಹ್ಮಕುಮಾರಿಸ್ ಮಡಿಕೇರಿ ಶಾಖೆಯ ವತಿಯಿಂದ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿಯ ಅಂಗವಾಗಿ ಅರಮೇರಿ ಶ್ರೀ ಅರಮೇರಿ ಕಳಂಚೇರಿ ಮಠದ ಎಸ್‌ಎಂಎಸ್ ಅಕಾಡೆಮಿ ಫಾರ್ ಸೆಂಟ್ರಲ್ ಎಜುಕೇಶನ್‌ನಲ್ಲಿ ‘ನಶಾ ಮುಕ್ತ ಭಾರತ’ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಯಿತು.
ಮಡಿಕೇರಿ ಶಾಖೆಯ ಹಿರಿಯ ರಾಜಯೋಗ ಶಿಕ್ಷಕಿ ಬ್ರಹ್ಮಕುಮಾರಿ ಧನಲಕ್ಷ್ಮಿ ಅಕ್ಕನವರು ವಿದ್ಯಾರ್ಥಿಗಳಿಗೆ ವಿದ್ಯೆಯ ಪ್ರಾಮುಖ್ಯತೆ, ಜೀವನ ಮೌಲ್ಯಗಳು ಹಾಗೂ ಧ್ಯಾನದ ಮೂಲಕ ಮನಸ್ಸಿನ ಏಕಾಗ್ರತೆಯ ಮಹತ್ವದ ಕುರಿತು ಅರಿವು ಮೂಡಿಸಿದರು. ಸಮಾಜದಲ್ಲಿ ಹೆಚ್ಚುತ್ತಿರುವ ದುಶ್ಚಟಗಳಿಂದ ದೂರವಿದ್ದು, ನಶೆ ಹಾಗೂ ಇತರ ದುಶ್ಚಟಗಳಿಗೆ ಬಲಿಯಾಗದಂತೆ ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಿದರು. ಇದೇ ಸಂದರ್ಭದಲ್ಲಿ ರಾಜಯೋಗ ಧ್ಯಾನದ ಮೂಲಕ ವಿದ್ಯಾರ್ಥಿಗಳಿಗೆ ಶಾಂತಿಯ ಅನುಭೂತಿ ಮಾಡಿಸಲಾಯಿತು.
ದೇಶ ಹಾಗೂ ಸಮಾಜಕ್ಕೆ ಉತ್ತಮ ಕೊಡುಗೆ ನೀಡುವ ಸಂಕಲ್ಪದೊಂದಿಗೆ ‘ನಶಾ ಮುಕ್ತ ಭಾರತ’ ನಿರ್ಮಾಣಕ್ಕೆ ಕೈಜೋಡಿಸುವಂತೆ ವಿದ್ಯಾರ್ಥಿಗಳಿಂದ ಪ್ರತಿಜ್ಞೆ ಮಾಡಿಸಲಾಯಿತು.
ವಿರಾಜಪೇಟೆ ಸಂಚಾಲಕಿ ಬ್ರಹ್ಮಕುಮಾರಿ ಕೋಮಲ ಅವರು ಬ್ರಹ್ಮಕುಮಾರಿಸ್ ಸಂಸ್ಥೆಯ ಕಿರುಪರಿಚಯ ನೀಡುವುದರ ಜೊತೆಗೆ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಆದರ್ಶ ಮತ್ತು ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಶಾಲೆಯ ಪ್ರಾಂಶುಪಾಲರಾದ ಕುಸುಮ್ ಟಿಟು ಅವರು ಗಾಂಧೀಜಿ ಜಯಂತಿಯ ಅಂಗವಾಗಿ ಸ್ವಚ್ಛತೆಯ ಮಹತ್ವದ ಕುರಿತು ಅರಿವು ಮೂಡಿಸಿದರು. ಧ್ಯಾನದಿಂದ ಪ್ರಭಾವಿತರಾದ ಅವರು, ಇನ್ನು ಮುಂದೆ ಶಾಲೆಯಲ್ಲಿ ಪ್ರತಿನಿತ್ಯ ಧ್ಯಾನದ ಬಳಿಕ ತರಗತಿಗಳನ್ನು ಆರಂಭಿಸುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ರೇವತಿ ಪಾಲಾಕ್ಷ ಹಾಗೂ ಸುರೇಶ್ ಕಾರಂತ್ ಉಪಸ್ಥಿತರಿದ್ದರು. ನಶಾಮುಕ್ತಿಯ ಕುರಿತು ಚಾರ್ಟ್ ಪ್ರದರ್ಶನದ ಮೂಲಕವೂ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಲಾಯಿತು. ಶಾಲೆಯ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಸುಂದರ ಸಮವಸ್ತ್ರದಲ್ಲಿ ಗಮನ ಸೆಳೆದರು.
ಕಾರ್ಯಕ್ರಮದಿಂದ ಸುಮಾರು 350 ವಿದ್ಯಾರ್ಥಿಗಳು ಹಾಗೂ 40 ಶಿಕ್ಷಕರು ಪ್ರಯೋಜನ ಪಡೆದರು. ಕಾರ್ಯಕ್ರಮದ ಬಳಿಕ ಎಲ್ಲರಿಗೂ ಪ್ರಸಾದ ವಿತರಿಸಲಾಯಿತು.








