
ಮಡಿಕೇರಿ NEWS DESK ಅ.4 : ದಸರಾ ಸುವರ್ಣ ಮಹೋತ್ಸವದ ಸಂಭ್ರಮದ ಹಿನ್ನೆಲೆಯಲ್ಲಿ ಹಲವಾರು ಸಾಮಾಜಿಕ ಕಾರ್ಯಚಟುವಟಿಕೆಗಳನ್ನು ಕೈಗೊಂಡಿರುವ ಶ್ರೀ ಕೋಟೆ ಮಹಾಗಣಪತಿ ದಸರಾ ಮಂಟಪ ಸಮಿತಿ ಇಂದು ಸ್ವಚ್ಛತಾ ಶ್ರಮದಾನ ನಡೆಸಿತು. ಶ್ರೀ ಕೋಟೆ ಮಹಾಗಣಪತಿ ದೇವಸ್ಥಾನ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಹಾಗೂ ಸ್ವಯಂಸೇವಕರು ಸ್ವಚ್ಛತಾ ಕಾರ್ಯ ನಡೆಸಿದರು. ದಸರಾ ಸಂದರ್ಭದಲ್ಲಿ ನಗರವನ್ನು ಸ್ವಚ್ಛವಾಗಿಡುವುದರ ಜೊತೆಗೆ ಸಾರ್ವಜನಿಕರಲ್ಲಿ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಪದಾಧಿಕಾರಿಗಳು ತಿಳಿಸಿದರು. *ಬಟ್ಟೆ ವಿತರಣೆ* ಇದೇ ಸಂದರ್ಭ ಶ್ರಮಿಕ ಜೀವಿಗಳಾದ ಮಡಿಕೇರಿ ನಗರಸಭೆಯ ಪೌರ ಕಾರ್ಮಿಕರಿಗೆ ಶ್ರೀ ಕೋಟೆ ಮಹಾಗಣಪತಿ ದಸರಾ ಮಂಟಪ ಸಮಿತಿ ಬಟ್ಟೆಗಳನ್ನು ವಿತರಿಸಿ ಗೌರವಿಸಿತು. ನಗರದ ಸ್ವಚ್ಛತೆಯನ್ನು ಕಾಪಾಡುವಲ್ಲಿ ಪೌರ ಕಾರ್ಮಿಕರು ನಿಸ್ವಾರ್ಥದಿಂದ ಶ್ರಮಿಸುತ್ತಿರುವ ಕುರಿತು ಪದಾಧಿಕಾರಿಗಳು ಶ್ಲಾಘಿಸಿದರು. ಇಂದಿನ ಕಾರ್ಯಕ್ರಮಕ್ಕೆ ನಗರದ ಜ್ಞಾನದೀಪ ಮಹಿಳಾ ಸಂಘ ಹಾಗೂ ನಗರಸಭೆ ಸಹಕಾರ ನೀಡಿತು. ಇದಕ್ಕೂ ಮೊದಲು ಶ್ರೀ ಕೋಟೆ ಮಹಾಗಣಪತಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಶ್ರೀ ಕೋಟೆ ಮಹಾಗಣಪತಿ ದಸರಾ ಮಂಟಪ ಸಮಿತಿ 50ನೇ ವರ್ಷದ ಸಂಭ್ರಮದಲ್ಲಿರುವ ಕಾರಣ ವರ್ಷವಿಡೀ ವಿವಿಧ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಸಮಿತಿ ತಿಳಿಸಿದೆ.









