ಮಡಿಕೇರಿ, NEWS DESK ಅ.6: ಹಚ್ಚಹಸಿರಿನ ಬೆಟ್ಟಗುಡ್ಡಗಳ ಸೌಂದರ್ಯದ ನಡುವೆ 2ನೇ ಮೊಣ್ಣಂಗೇರಿಯ ಮರಾಟಿ ಸೋಮಪ್ಪ ಅವರ ಗದ್ದೆಯಲ್ಲಿ ಆಯೋಜಿಸಿದ್ದ ಎರಡನೇ ವರ್ಷದ ಕೆಸರುಗದ್ದೆ ಕ್ರೀಡಾಕೂಟದಲ್ಲಿ ಮರಾಟಿ ಸಮುದಾಯದ ಬಾಂಧವರು ಸಂಭ್ರಮದಿಂದ ಪಾಲ್ಗೊಂಡರು.
ಜಿಲ್ಲಾ ಮರಾಠ/ಮರಾಟಿ ಸಮಾಜ ಸೇವಾ ಸಂಘ, ಮಹಿಳಾ ವೇದಿಕೆ, ಅಂಬಾಭವಾನಿ ಯುವಕ-ಯುವತಿ ಕ್ರೀಡಾ ಮತ್ತು ಮನೋರಂಜನಾ ಸಂಘ ಹಾಗೂ ವಿವಿಧ ಉಪಸಮಿತಿಗಳ ಸಂಯುಕ್ತ ಆಶ್ರಯದಲ್ಲಿ ಕ್ರೀಡಾಕೂಟ ನಡೆಯಿತು.
ಮೊಣಕಾಲುವರೆಗೆ ನೀರು ತುಂಬಿದ್ದ ಕೆಸರುಗದ್ದೆಯಲ್ಲಿ ಓಟ, ವೇಗದ ನಡಿಗೆ, ಕಂಬ ಸುತ್ತಿ ಓಡುವುದು, ಮಡಿಕೆ ಹೊಡೆಯುವುದು, ಜೋಡಿ ಓಟ, ಹಗ್ಗಜಗ್ಗಾಟ, ಕೆಸರಿನಲ್ಲಿ ಅಡಿಕೆ ಹಾಳೆ ಎಳೆಯುವುದು, ಹಿಮ್ಮುಖ ಓಟ, ಉಪ್ಪುಮೂಟೆ ಓಟ ಹಾಗೂ ಬೊಗಸೆಯಿಂದ ಕೆಸರು ತುಂಬಿಸುವುದು ಸೇರಿದಂತೆ 14 ಬಗೆಯ ಸ್ಪರ್ಧೆಗಳು ನಡೆದವು. ಕ್ರೀಡಾಪಟುಗಳ ಉತ್ಸಾಹಭರಿತ ಪ್ರದರ್ಶನ ಪ್ರೇಕ್ಷಕರಿಗೆ ಮನರಂಜನೆಯ ರಸದೌತಣ ನೀಡಿತು.
ಕ್ರೀಡಾಕೂಟ ಉದ್ಘಾಟನೆ
ಜಿಲ್ಲಾ ಮರಾಠ/ಮರಾಟಿ ಸಮಾಜ ಸೇವಾ ಸಂಘದ ಮಡಿಕೇರಿ ತಾಲೂಕು ಸಂಘಟನಾ ಕಾರ್ಯದರ್ಶಿ ಎಂ.ಟಿ. ದೇವಪ್ಪ ಕಟ್ಟೆಮಾಡು ಕ್ರೀಡಾಕೂಟವನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಸಂಘದ ಅಧ್ಯಕ್ಷ ಎಂ.ಎಂ. ಪರಮೇಶ್ವರ್, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳು ಮತ್ತು ಯುವಕರು ಮಣ್ಣಿನಿಂದ ದೂರವಾಗುತ್ತಿದ್ದಾರೆ. ಇಂತಹ ಕೆಸರುಗದ್ದೆ ಕ್ರೀಡೆಗಳು ಜನರನ್ನು ಮತ್ತೆ ಪ್ರಕೃತಿಯೊಂದಿಗೆ ಬೆಸೆಯುತ್ತವೆ. ದೈಹಿಕ ಶ್ರಮದ ಜೊತೆಗೆ ಮಾನಸಿಕ ನೆಮ್ಮದಿಯನ್ನೂ ನೀಡುತ್ತವೆ. ಆದ್ದರಿಂದ ನಮ್ಮ ಸಂಸ್ಕೃತಿ ಹಾಗೂ ಗ್ರಾಮೀಣ ಕ್ರೀಡೆಗಳನ್ನು ಉಳಿಸಿ ಬೆಳೆಸಬೇಕಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಂಬಾಭವಾನಿ ಯುವಕ-ಯುವತಿ ಕ್ರೀಡಾ ಮತ್ತು ಮನೋರಂಜನಾ ಸಂಘದ ಅಧ್ಯಕ್ಷ ಎಂ.ಕೆ. ಸಂತೋಷ್ ವಹಿಸಿದ್ದರು. ಮಹಿಳಾ ವೇದಿಕೆ ಅಧ್ಯಕ್ಷೆ ಜಲಜಾನವೀನ, ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ಎ.ಎಂ. ನರಸಿಂಹ, ಕಾರ್ಯದರ್ಶಿ ಹೂವಮ್ಮ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸಮಾರೋಪ ಸಮಾರಂಭ
ಸಮಾರೋಪ ಸಮಾರಂಭವನ್ನು ಸಮಾಜದ ಹಿರಿಯರಾದ ಮರಾಟಿ ಸೋಮಪ್ಪ ಉದ್ಘಾಟಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಕರ್ನಾಟಕ ಮರಾಟಿ ಒಕ್ಕೂಟ ಮೂಡಬಿದ್ರೆ ಕಾರ್ಯಾಧ್ಯಕ್ಷ ರಾಮಚಂದ್ರ ಕೆಂಬಾರೆ, ಕೆಸರುಗದ್ದೆ ಕ್ರೀಡಾಕೂಟವನ್ನು ವಿಶಿಷ್ಟವಾಗಿ ಆಯೋಜಿಸಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ, ಮರಾಟಿ ಸಭಾಭವನ ಕಾಮಗಾರಿಗೆ ₹1 ಲಕ್ಷ ದೇಣಿಗೆ ನೀಡಿದರು. ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸುವಂತೆ ಸಲಹೆ ನೀಡಿದರು.
ಕರ್ನಾಟಕ ಮರಾಟಿ ಒಕ್ಕೂಟ ಬೆಂಗಳೂರು ಅಧ್ಯಕ್ಷ ಕೆ. ಸುಂದರ ನಾಯ್ಕ ಸಂಘದ ಚಟುವಟಿಕೆಗಳ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಸಂಘದ ನಿವೇಶನದಲ್ಲಿ ನಡೆಯುತ್ತಿರುವ ಕಟ್ಟಡ ಕಾಮಗಾರಿಗೆ ಸರ್ಕಾರದಿಂದ ಬರಬೇಕಿರುವ ಅನುದಾನದ ಬಾಕಿ ಕಂತನ್ನು ಬಿಡುಗಡೆಗೊಳಿಸುವಂತೆ ಪರಿಶಿಷ್ಟ ಪಂಗಡಗಳ ಸಚಿವರನ್ನು ಭೇಟಿ ಮಾಡಿ ಒತ್ತಾಯಿಸಿರುವುದಾಗಿ ತಿಳಿಸಿದರು.
ಜಿಲ್ಲಾ ಸಂಘದ ಅಧ್ಯಕ್ಷ ಎಂ.ಎಂ. ಪರಮೇಶ್ವರ್ ಮಾತನಾಡಿ, ಕೆಸರುಗದ್ದೆ ಗ್ರಾಮೀಣ ಕ್ರೀಡಾಕೂಟವು ಜನಾಂಗ ಬಾಂಧವರಿಗೆ ಮನರಂಜನೆ ನೀಡುವುದರ ಜೊತೆಗೆ ಪರಸ್ಪರ ಬಾಂಧವ್ಯ ಬೆಸೆಯುವ ವೇದಿಕೆಯಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜ ಬಾಂಧವರು ಸಂಘದ ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿಸಿ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ಇಂತಹ ಗ್ರಾಮೀಣ ಕ್ರೀಡಾಕೂಟಗಳಿಗೆ ಸರ್ಕಾರ ಪ್ರೋತ್ಸಾಹಧನ ನೀಡಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಸಂಘದ ಉಪಾಧ್ಯಕ್ಷರಾದ ದೇವಕಿ ಜಿ.ಆರ್. ನಾಯ್ಕ, ಪಿ.ಕೆ. ಗಂಗಾಧರ, ಮಹಿಳಾ ವೇದಿಕೆ ಅಧ್ಯಕ್ಷೆ ಜಲಜಾನವೀನ, ಯುವಕ ಸಂಘದ ಅಧ್ಯಕ್ಷ ಎಂ.ಕೆ. ಸಂತೋಷ್, ಎರಡನೇ ಮೊಣ್ಣಂಗೇರಿ ಉಪಸಮಿತಿ ಅಧ್ಯಕ್ಷ ಎಂ.ಎಸ್. ವೆಂಕಪ್ಪ, ಕುಂಡಾಡು ಉಪಸಮಿತಿ ಅಧ್ಯಕ್ಷ ಸಿ.ಎಚ್. ಶ್ರೀಧರ್, ಕುದ್ರೆಪಾಯ ಉಪಸಮಿತಿ ಅಧ್ಯಕ್ಷ ಕೆ.ಜೆ. ಶಶಿಕಾಂತ್, ಕರಿಕೆ ಉಪಸಮಿತಿ ಅಧ್ಯಕ್ಷ ಕೆ.ಜಿ. ಹೊನ್ನಪ್ಪ, ಕಾನೂರು ಉಪಸಮಿತಿ ಅಧ್ಯಕ್ಷ ನಿರಲ್ ಕುಮಾರ್ ಸೇರಿದಂತೆ ಸಂಘದ ಪ್ರಮುಖರು ಉಪಸ್ಥಿತರಿದ್ದರು.
ವಿವಿಧ ಸ್ಪರ್ಧೆಗಳ ವಿಜೇತರು
ಪುರುಷರ ಹಗ್ಗಜಗ್ಗಾಟದಲ್ಲಿ ಮೊಣ್ಣಂಗೇರಿ ‘ಎ’ ತಂಡ ಪ್ರಥಮ ಹಾಗೂ ಕರಿಕೆ ‘ಎ’ ತಂಡ ದ್ವಿತೀಯ ಸ್ಥಾನ ಪಡೆದರೆ, ಮಹಿಳೆಯರ ವಿಭಾಗದಲ್ಲಿ ಕರಿಕೆ ‘ಎ’ ತಂಡ ಪ್ರಥಮ ಹಾಗೂ ಜಲಜಾಕ್ಷಿ ತಂಡ ಕಾನೂರು ದ್ವಿತೀಯ ಸ್ಥಾನ ಪಡೆಯಿತು.
1ರಿಂದ 5ನೇ ತರಗತಿ ಬಾಲಕರ ಓಟದಲ್ಲಿ ರವಿತ್ ಪ್ರಥಮ, ಸಮರ್ಥ್ ದ್ವಿತೀಯ ಹಾಗೂ ಬಾಲಕಿಯರ ವಿಭಾಗದಲ್ಲಿ ಅನ್ವಿತ ಪ್ರಥಮ, ಮೌಲ್ಯ ದ್ವಿತೀಯ ಸ್ಥಾನ ಪಡೆದರು.
6ರಿಂದ 8ನೇ ತರಗತಿ ಬಾಲಕರ ವಿಭಾಗದಲ್ಲಿ ಯುವರಾಜ್ ಪ್ರಥಮ, ಮನ್ವಿತ್ ದ್ವಿತೀಯ ಹಾಗೂ ಬಾಲಕಿಯರ ವಿಭಾಗದಲ್ಲಿ ಲಿಖಿತ ಪ್ರಥಮ, ಕೆ.ಪಿ. ಯಕ್ಷಿತ್ ದ್ವಿತೀಯ ಸ್ಥಾನ ಪಡೆದರು.
16ರಿಂದ 20 ವರ್ಷದ ಯುವಕರ ವಿಭಾಗದಲ್ಲಿ ರಕ್ಷಿತ್ ಪ್ರಥಮ, ಜತಿನ್ ದ್ವಿತೀಯ ಹಾಗೂ ಯುವತಿಯರ ವಿಭಾಗದಲ್ಲಿ ಡಿಂಪಲ್ ಪ್ರಥಮ, ಚಶ್ಮಿತಾ ದ್ವಿತೀಯ ಸ್ಥಾನ ಪಡೆದರು.
25ರಿಂದ 35 ವರ್ಷದ ಪುರುಷರ ವಿಭಾಗದಲ್ಲಿ ಮೋಹನ್ ಪ್ರಥಮ, ಅಶ್ವತ್ ದ್ವಿತೀಯ ಹಾಗೂ ಮಹಿಳೆಯರ ವಿಭಾಗದಲ್ಲಿ ಪವಿತ್ರ ಪ್ರಥಮ, ಚಂದನ ದ್ವಿತೀಯ ಸ್ಥಾನ ಪಡೆದರು.
35ರಿಂದ 49 ವರ್ಷದ ಪುರುಷರ ವಿಭಾಗದಲ್ಲಿ ಉತೀಶ್ ಪ್ರಥಮ, ನವೀನ್ ದ್ವಿತೀಯ ಹಾಗೂ ಮಹಿಳೆಯರ ವಿಭಾಗದಲ್ಲಿ ಹರಿಣಿ ಪ್ರಥಮ, ವಾರಿಜ ದ್ವಿತೀಯ ಸ್ಥಾನ ಪಡೆದರು.
50 ವರ್ಷ ಮೇಲ್ಪಟ್ಟವರ ವೇಗದ ನಡಿಗೆ ಸ್ಪರ್ಧೆಯಲ್ಲಿ ಪುರುಷರ ವಿಭಾಗದಲ್ಲಿ ವೆಂಕಪ್ಪ ನಾಯ್ಕ ಪ್ರಥಮ, ವಿಠಲ ದ್ವಿತೀಯ ಹಾಗೂ ಮಹಿಳೆಯರ ವಿಭಾಗದಲ್ಲಿ ಹೂವಮ್ಮ ಪ್ರಥಮ, ಸರಸ್ವತಿ ದ್ವಿತೀಯ ಸ್ಥಾನ ಪಡೆದರು.
ಕಂಬ ಸುತ್ತಿ ಓಟದ ಪುರುಷರ ವಿಭಾಗದಲ್ಲಿ ಯುವರಾಜ್ ಪ್ರಥಮ, ಕೆ.ಎಸ್. ಸತೀಶ್ ದ್ವಿತೀಯ ಹಾಗೂ ಮಹಿಳೆಯರ ವಿಭಾಗದಲ್ಲಿ ಡಿಂಪಲ್ ಪ್ರಥಮ, ಹೂವಮ್ಮ ದ್ವಿತೀಯ ಸ್ಥಾನ ಪಡೆದರು.
ಜೋಡಿ ಓಟದ ಪುರುಷರ ವಿಭಾಗದಲ್ಲಿ ಕೆ.ಎನ್. ಸಂತೋಷ್-ಮೋಹನ್ ಜೋಡಿ ಪ್ರಥಮ, ಯುವರಾಜ್-ಜತಿನ್ ಜೋಡಿ ದ್ವಿತೀಯ ಹಾಗೂ ಮಹಿಳೆಯರ ವಿಭಾಗದಲ್ಲಿ ಪವಿತ್ರ-ಚಂದನ ಜೋಡಿ ಪ್ರಥಮ, ಶ್ಯಾಮಲ-ಲೀಲಾವತಿ ಜೋಡಿ ದ್ವಿತೀಯ ಸ್ಥಾನ ಪಡೆದರು.
ಅಡಿಕೆ ಹಾಳೆ ಎಳೆಯುವ ಸ್ಪರ್ಧೆಯ ಪುರುಷರ ವಿಭಾಗದಲ್ಲಿ ಮೋನಿಶ್-ಮನ್ವಿತ್ ಜೋಡಿ ಪ್ರಥಮ, ಚರಣ್-ಅಶ್ವತ್ ಜೋಡಿ ದ್ವಿತೀಯ ಹಾಗೂ ಮಹಿಳೆಯರ ವಿಭಾಗದಲ್ಲಿ ಹರಿಣಿ-ಜಯಂತಿ ಜೋಡಿ ಪ್ರಥಮ, ವನಿತಾ-ವಿನಿತಾ ಜೋಡಿ ದ್ವಿತೀಯ ಸ್ಥಾನ ಪಡೆದರು.
ಹಿಮ್ಮುಖ ಓಟದ ಪುರುಷರ ವಿಭಾಗದಲ್ಲಿ ಕೆ.ಎಸ್. ಸಂತೋಷ್ ಪ್ರಥಮ, ಯುವರಾಜ್ ದ್ವಿತೀಯ ಹಾಗೂ ಮಹಿಳೆಯರ ವಿಭಾಗದಲ್ಲಿ ಡಿಂಪಲ್ ಪ್ರಥಮ, ಶ್ಯಾಮಲ ದ್ವಿತೀಯ ಸ್ಥಾನ ಪಡೆದರು.
ಉಪ್ಪುಮೂಟೆ ಓಟದ ಪುರುಷರ ವಿಭಾಗದಲ್ಲಿ ಜತಿನ್-ಯುವರಾಜ್ ಜೋಡಿ ಪ್ರಥಮ, ಗೌತಮ್-ರಕ್ಷಿತ್ ಜೋಡಿ ದ್ವಿತೀಯ ಹಾಗೂ ಮಹಿಳೆಯರ ವಿಭಾಗದಲ್ಲಿ ಜಯಂತಿ-ಹರಿಣಿ ಜೋಡಿ ಪ್ರಥಮ, ಅನ್ವಿತ-ಸಿಂಚನ ಜೋಡಿ ದ್ವಿತೀಯ ಸ್ಥಾನ ಪಡೆದರು.
ಬೊಗಸೆಯಿಂದ ಕೆಸರು ತುಂಬಿಸುವ ಸ್ಪರ್ಧೆಯ ಪುರುಷರ ವಿಭಾಗದಲ್ಲಿ ಯತೀಶ್ ಕರಿಕೆ ಮತ್ತು ತಂಡ ಪ್ರಥಮ, ದಿನೇಶ್ ಕುಂಡಾಡು ಮತ್ತು ತಂಡ ದ್ವಿತೀಯ ಹಾಗೂ ಮಹಿಳೆಯರ ವಿಭಾಗದಲ್ಲಿ ಕುದುರೆಪಾಯ ತಂಡ ಪ್ರಥಮ, 2ನೇ ಮೊಣ್ಣಂಗೇರಿ ತಂಡ ದ್ವಿತೀಯ ಸ್ಥಾನ ಪಡೆದವು.
ವಿಜೇತರಿಗೆ ಸಮಾರೋಪ ಸಮಾರಂಭದಲ್ಲಿ ಬಹುಮಾನ ನೀಡಿ ಗೌರವಿಸಲಾಯಿತು.








