ನಾಪೋಕ್ಲು, NEWS DESK ಅ.08: ದೇಶದ ಸುರಕ್ಷತೆಗೆ ಸವಾಲಾಗಿರುವ ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಜನಜಾಗೃತಿ ಮೂಡಿಸುವ ಉದ್ದೇಶದಿಂದ ಕೊಡಗು ಸುರಕ್ಷಾ ಆಂದೋಲನ ಸಮಿತಿ ನೇತೃತ್ವದಲ್ಲಿ ಕೊಡಗಿನಾದ್ಯಂತ ಹಮ್ಮಿಕೊಳ್ಳಲಾಗಿರುವ 12 ದಿನಗಳ ಜನಜಾಗೃತಿ ವಾಹನ ಜಾಥಾ ಬುಧವಾರ ನಾಪೋಕ್ಲು ಬಸ್ ನಿಲ್ದಾಣಕ್ಕೆ ಆಗಮಿಸಿತು. ಈ ಹಿನ್ನೆಲೆಯಲ್ಲಿ ಬೃಹತ್ ಜನಜಾಗೃತಿ ಸಭೆ ನಡೆಯಿತು.
ಸಭೆಯಲ್ಲಿ ವಿವಿಧ ಸಂಘಟನೆಗಳ ಪ್ರಮುಖ ಮುಖಂಡರು ಭಾಗವಹಿಸಿ, ದೇಶದ ಆಂತರಿಕ ಸುರಕ್ಷತೆಗೆ ಎದುರಾಗಿರುವ ಸವಾಲುಗಳು ಹಾಗೂ ಅಕ್ರಮ ವಲಸೆಯಿಂದ ಉಂಟಾಗಬಹುದಾದ ಅಪಾಯಗಳ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಿದರು.
ಸ್ಥಳೀಯ ಹಕ್ಕುಗಳ ರಕ್ಷಣೆಗೆ ಒಗ್ಗಟ್ಟಾಗಲು ಕರೆ
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಶ್ರೀ ಸೋಮನಾಥನಂದ ಪುರಿ ಸ್ವಾಮೀಜಿ, ಕೊಡಗಿನ ಜನರು ತಮ್ಮ ಮೂಲ ಅಸ್ತಿತ್ವ ಹಾಗೂ ಹಕ್ಕುಗಳ ಬಗ್ಗೆ ಎಚ್ಚರ ತಪ್ಪಿದರೆ ಶೋಷಣೆಗೆ ಒಳಗಾಗುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು.
ತಮ್ಮತನ ಹಾಗೂ ಜಾಗೃತಿಯ ಕೊರತೆಯಿಂದಾಗಿ ಜಿಲ್ಲೆಯ ಸಾರ್ವಜನಿಕರು ಮತ್ತು ರೈತರು ಎದುರಿಸುತ್ತಿರುವ ಸಮಸ್ಯೆಗಳನ್ನು ಪ್ರಸ್ತಾಪಿಸಿದ ಅವರು, ಸ್ಥಳೀಯ ಸಂಸ್ಕೃತಿ, ಪರಂಪರೆ ಹಾಗೂ ಹಕ್ಕುಗಳ ರಕ್ಷಣೆಗೆ ಪ್ರತಿಯೊಬ್ಬರೂ ಒಗ್ಗಟ್ಟಿನಿಂದ ಶ್ರಮಿಸಬೇಕೆಂದು ಕರೆ ನೀಡಿದರು.
ಜಾತಿ, ಮತ ಭೇದವಿಲ್ಲದೆ ಒಗ್ಗಟ್ಟಾಗಲು ಕರೆ
ಸಭೆಯಲ್ಲಿ ಮಾತನಾಡಿದ ನಾಪೋಕ್ಲು ಮಾಜಿ ಸೈನಿಕರ ಸಂಘದ ಅಧ್ಯಕ್ಷ ಕೊಂಡಿರ ಗಣೇಶ್, ಭವಿಷ್ಯದಲ್ಲಿ ಎದುರಾಗಬಹುದಾದ ಸವಾಲುಗಳು ದೂರವಿಲ್ಲ, ಅವು ಖಂಡಿತವಾಗಿಯೂ ಎದುರಾಗಲಿವೆ ಎಂದು ಎಚ್ಚರಿಸಿದರು.
ಈ ಹೋರಾಟದಲ್ಲಿ ಯಾವುದೇ ಜಾತಿ ಅಥವಾ ಮತವನ್ನು ಪರಿಗಣಿಸದೆ ಎಲ್ಲರೂ ಒಗ್ಗಟ್ಟಿನಿಂದ ಸಾಗಬೇಕಾಗಿದೆ. ಸ್ವಾತಂತ್ರ್ಯ, ಕೊಡಗಿನ ಹಿತಾಸಕ್ತಿ, ಕರ್ನಾಟಕ ರಾಜ್ಯ ಹಾಗೂ ರಾಷ್ಟ್ರದ ಸುರಕ್ಷತೆಯನ್ನು ಕಾಪಾಡುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ ಎಂದು ಅವರು ಹೇಳಿದರು.
ಸ್ಥಳೀಯ ಕಾರ್ಮಿಕರ ವಿರುದ್ಧ ಹೋರಾಟವಲ್ಲ
ಬಿಜೆಪಿ ಸ್ಥಾನೀಯ ಸಮಿತಿ ಸಂಚಾಲಕ ಶಿವಚಳಿಯಂಡ ಅಂಬಿ ಕಾರ್ಯಪ್ಪ, ಅಕ್ರಮ ಬಾಂಗ್ಲಾದೇಶಿ ವಲಸಿಗರ ವಿರುದ್ಧದ ಹೋರಾಟದ ಕುರಿತು ಮಾತನಾಡಿ, ಈ ಹೋರಾಟವು ಅಕ್ರಮವಾಗಿ ನೆಲೆಸಿರುವ ಬಾಂಗ್ಲಾದೇಶಿ ವಲಸಿಗರ ವಿರುದ್ಧ ಮಾತ್ರವಾಗಿದ್ದು, ಸ್ಥಳೀಯ ಕಾರ್ಮಿಕರ ವಿರುದ್ಧವಲ್ಲ ಎಂದು ಸ್ಪಷ್ಟಪಡಿಸಿದರು.
ಅಕ್ರಮ ವಲಸೆಯಿಂದ ಉಂಟಾಗಬಹುದಾದ ಸಮಸ್ಯೆಗಳ ಬಗ್ಗೆ ಸಾರ್ವಜನಿಕರು ಹಾಗೂ ಪೊಲೀಸ್ ಇಲಾಖೆ ಹೆಚ್ಚಿನ ಜಾಗ್ರತೆ ವಹಿಸಬೇಕೆಂದು ಅವರು ಒತ್ತಾಯಿಸಿದರು.
ಅಕ್ರಮವಾಗಿ ನೆಲೆಸಿರುವವರನ್ನು ಜಿಲ್ಲಾಡಳಿತ ತಕ್ಷಣ ಪತ್ತೆಹಚ್ಚಿ, ಅವರ ಗುರುತಿನ ಚೀಟಿ ಹಾಗೂ ಇತರ ದಾಖಲಾತಿಗಳನ್ನು ಪರಿಶೀಲಿಸಬೇಕು. ಸೂಕ್ತ ದಾಖಲೆಗಳಿಲ್ಲದ ಅಕ್ರಮ ನಿವಾಸಿಗಳ ವಿರುದ್ಧ ಕಾನೂನುಬದ್ಧ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ಭಾರತಾಂಬೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ
ಸಭೆಗೂ ಮುನ್ನ ಜನಜಾಗೃತಿ ವಾಹನ ಜಾಥಾವನ್ನು ಸ್ವಾಗತಿಸಲಾಯಿತು. ಬಳಿಕ ಭಾರತಾಂಬೆಯ ಭಾವಚಿತ್ರಕ್ಕೆ ಗಣ್ಯರು ಹಾಗೂ ಸಾರ್ವಜನಿಕರು ಪುಷ್ಪಾರ್ಚನೆ ಸಲ್ಲಿಸಿದರು.
ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಪ್ರಮುಖ್ ಸುನಿಲ್ ಮಾದಾಪುರ ಕಾರ್ಯಕ್ರಮ ನಿರೂಪಿಸಿದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಮುಖರಾದ ಕಂಗಂಡ ಜಾಲಿ ಪೂವಪ್ಪ ವಾಸ್ತವಿಕ ನುಡಿಗಳನ್ನಾಡಿದರು. ಕಾರ್ಯಕ್ರಮದ ಅಂತ್ಯದಲ್ಲಿ ವಂದೇ ಮಾತರಂ ಹಾಗೂ ರಾಷ್ಟ್ರಗೀತೆಯನ್ನು ಹಾಡಲಾಯಿತು.
ಸಭೆಯಲ್ಲಿ ಬಿ.ಎಂ. ಪ್ರತೀಪ, ಶಿವಚಳಿಯಂಡ ಜಗದೀಶ್, ಪಿ.ಎಂ. ನಿರನ್ ಕಾರ್ಯಪ್ಪ, ಅರೆಯಡ ರತ್ನ ಪೆಮ್ಮಯ್ಯ, ವಿಹೆಚ್ಪಿ ರಾಧಾಕೃಷ್ಣ ರೈ, ಪಟ್ಟು ಪೆಮ್ಮಯ್ಯ, ಸೂರ್ಯಕುಮಾರ್, ಕೇಟೋಳಿರ ಗಣಪತಿ, ಡಾಲಿ ಅಚ್ಚಪ್ಪ, ರಮ್ಮಿ, ಪ್ರದೀಪ್, ಪ್ರಕಾಶ್, ಮೇದಪ್ಪ, ಟಿಎ ಮಿಟ್ಟು, ಗಿರಿ ಪೆಮ್ಮಯ್ಯ, ಜೀವನ್ ಸೇರಿದಂತೆ ಸಮಿತಿಯ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ವರದಿ: ದುಗ್ಗಳ ಸದಾನಂದ

















