ವಿರಾಜಪೇಟೆ, NEWS DESK ಅ.9: ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ (ಸಂಪುಟ ದರ್ಜೆ) ಹಾಗೂ ಶಾಸಕ ಎ.ಎಸ್. ಪೊನ್ನಣ್ಣ ಅವರು ಅಕ್ಟೋಬರ್ 10ರಂದು ವಿರಾಜಪೇಟೆ ಮತ್ತು ಪೊನ್ನಂಪೇಟೆ ತಾಲ್ಲೂಕು ವ್ಯಾಪ್ತಿಯಲ್ಲಿ ನಡೆಯಲಿರುವ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.
ಶನಿವಾರ ಬೆಳಿಗ್ಗೆ 10 ಗಂಟೆಗೆ ವಿರಾಜಪೇಟೆಯ ಚಿಕ್ಕಪೇಟೆಯಲ್ಲಿ ನಡೆಯಲಿರುವ ಅಂತರ್‌ಕೇರಿ ಬ್ಯಾಡ್ಮಿಂಟನ್ ಟೂರ್ನಮೆಂಟ್‌ನಲ್ಲಿ ಪಾಲ್ಗೊಳ್ಳಲಿರುವ ಅವರು, ಬೆಳಿಗ್ಗೆ 11 ಗಂಟೆಗೆ ಪೊನ್ನಂಪೇಟೆಯ ಕೆಪಿಎಸ್ ಶಾಲೆಯಲ್ಲಿ ಆಲೆಮಾಡ ಕುಟುಂಬಸ್ಥರು ಆಯೋಜಿಸಿರುವ ತೋಕ್ ನಮ್ಮೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಮಧ್ಯಾಹ್ನ 2 ಗಂಟೆಗೆ ಪೊನ್ನಂಪೇಟೆ ತಾಲ್ಲೂಕಿನ ನಲ್ಲೂರು–ಬೆಸಗೂರು–ಬೆಕ್ಕೆಸೊಣ್ಣೂರು ರಸ್ತೆಯ ಕಿ.ಮೀ. 4.70ರಿಂದ 6.25ರವರೆಗೆ ಭಾರಿ ಮಳೆಯಿಂದ ಹಾನಿಗೊಳಗಾದ ರಸ್ತೆಯ ಅಭಿವೃದ್ಧಿ ಕಾಮಗಾರಿಗೆ ಬೆಸಗೂರು ಸೇತುವೆಯಿಂದ ಬೆಕ್ಕೆಸೊಣ್ಣೂರುವರೆಗಿನ ಮಾರ್ಗದಲ್ಲಿ ಗುದ್ದಲಿಪೂಜೆ ನೆರವೇರಿಸಲಿದ್ದಾರೆ.
ಮಧ್ಯಾಹ್ನ 3 ಗಂಟೆಗೆ ನಾಕ್ಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೊಮ್ಮಡು ಗಿರಿಜನ ಹಾಡಿಯಲ್ಲಿ ನೂತನವಾಗಿ ನಿರ್ಮಿಸಿರುವ ಅಂಗನವಾಡಿ ಕೇಂದ್ರವನ್ನು ಉದ್ಘಾಟಿಸಲಿದ್ದಾರೆ. ಸಂಜೆ 4.30ಕ್ಕೆ ಪೊನ್ನಂಪೇಟೆಯ ಕುಂದ ರಸ್ತೆಯಲ್ಲಿ ಕಾವೇರಿ ಕೊಡವ ಕೂಟದ ರಸ್ತೆಯನ್ನು ಉದ್ಘಾಟಿಸಲಿದ್ದಾರೆ.
ಸಂಜೆ 5.30ಕ್ಕೆ ಚೀನಿ ಹಡ್ಲು ಹಾಡಿಯಲ್ಲಿ ಜಂಗಲ್ ಹಾಡಿ, ಆಯುರ್ ಸುರುಳಿ ಹಾಡಿ, ಚೀನಿ ಹಡ್ಲು ಹಾಡಿ ಹಾಗೂ ಬೊಂಬು ಕಾಡು ಹಾಡಿಗಳಲ್ಲಿ ವಾಸವಿರುವ 190 ಕುಟುಂಬಗಳ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಕಾಮಗಾರಿಗೆ ಚಾಲನೆ ನೀಡಲಿದ್ದಾರೆ.
ಶಾಸಕರ ಮುಂದಿನ ಪ್ರವಾಸ ಕಾರ್ಯಕ್ರಮವನ್ನು ನಂತರ ತಿಳಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
















