ಮಡಿಕೇರಿ ಅ.9 NEWS DESK : ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್) ಘಟಕಗಳ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನಾ ಸಮಾರಂಭ ಕಡಗದಾಳು ಪ್ರೌಢಶಾಲೆಯಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಬೊಳ್ಳಜಿರ ಬಿ. ಅಯ್ಯಪ್ಪ ಮಾತನಾಡಿ, ರಾಷ್ಟ್ರ ನಿರ್ಮಾಣದಲ್ಲಿ ಎನ್‌ಎಸ್‌ಎಸ್ ಮಹತ್ವದ ಪಾತ್ರ ವಹಿಸುತ್ತದೆ. ವ್ಯಕ್ತಿತ್ವ ರೂಪಿಸಿಕೊಳ್ಳುವಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಪ್ರಮುಖ ಪಾತ್ರ ವಹಿಸುತ್ತದೆ. ‘ನನಗಲ್ಲ, ನಿನಗೆ’ ಎಂಬ ಸಂದೇಶವನ್ನು ಬದುಕಿನಲ್ಲಿ ಅಳವಡಿಸಿಕೊಂಡರೆ ಇತರರಿಗೆ ಆದರ್ಶಪ್ರಾಯ ವ್ಯಕ್ತಿಗಳಾಗಲು ಸಾಧ್ಯ ಎಂದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಉದ್ಯಮಿ ಹಾಗೂ ಕ್ಯಾಪಿಟಲ್ ವಿಲೇಜ್ ಮಾಲೀಕ ಬೊಟ್ಟೋಳಂಡ ದೇವಯ್ಯ ಮಾತನಾಡಿ, ಎನ್‌ಎಸ್‌ಎಸ್ ಶಿಸ್ತು ಮತ್ತು ಸ್ವಚ್ಛತೆಗೆ ಹೆಸರುವಾಸಿಯಾಗಿದೆ. ಎನ್‌ಎಸ್‌ಎಸ್ ಸ್ವಯಂಸೇವಕರು ಸದಾ ಸಾರ್ವಜನಿಕ ಸೇವೆಗೆ ಸಿದ್ಧರಾಗಿರುತ್ತಾರೆ ಎಂದು ಹೇಳಿದರು. ಅತಿಥಿ ಪ್ರಮೀಳಾ ಶೆಟ್ಟಿ ಮಾತನಾಡಿ, ಯುವಜನತೆ ಸಮಾಜದ ವಾಸ್ತವಿಕತೆಗೆ ಅನುಗುಣವಾಗಿ ಬದಲಾಗಬೇಕು. ಸಾರ್ವಜನಿಕ ಸೇವೆಗೆ ತಮ್ಮ ಬದುಕನ್ನು ಮುಡಿಪಾಗಿಡಬೇಕು. ಯುವಜನರನ್ನು ವಿನೂತನ ಚಟುವಟಿಕೆಗಳಲ್ಲಿ ತೊಡಗಿಸುವ ಮೂಲಕ ಅವರಲ್ಲಿ ಸೇವಾ ಮನೋಭಾವ ಬೆಳೆಸಬೇಕು ಎಂದರು. ಮತ್ತೋರ್ವ ಅತಿಥಿ ಸ್ಮಿತಾ ಚೆಂಗಪ್ಪ ಅವರು ವಿದ್ಯಾರ್ಥಿಗಳಿಗೆ ಎನ್‌ಎಸ್‌ಎಸ್‌ನ ಇತಿಹಾಸವನ್ನು ಪರಿಚಯಿಸಿದರು. ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುವುದರ ಜೊತೆಗೆ ಸಾರ್ವಜನಿಕರಲ್ಲಿ ಸ್ವಚ್ಛತೆಯ ಕುರಿತು ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಹೇಳಿದರು. ಪ್ರೊಫೆಸರ್ ತಿಪ್ಪೇಸ್ವಾಮಿ ಮಾತನಾಡಿ, ಯುವಜನರ ಸಬಲೀಕರಣದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಮಹತ್ವದ ಪಾತ್ರ ವಹಿಸಿದೆ. ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದರು.
ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ಚಂದನ್ ನಂದರಬೆಟ್ಟು ಮಾತನಾಡಿ, ಸಮಾಜದಲ್ಲಿ ಎನ್‌ಎಸ್‌ಎಸ್‌ನ ಪ್ರಾಮುಖ್ಯತೆ ಅಪಾರವಾಗಿದೆ. ಈ ಯೋಜನೆಯು ವಿದ್ಯಾರ್ಥಿಗಳಿಗೆ ಜೀವನದ ಮೌಲ್ಯಯುತ ಪಾಠಗಳನ್ನು ಕಲಿಸುತ್ತದೆ. ಸಮಾಜದಲ್ಲಿನ ಅಸಹಾಯಕರಿಗೆ ನೆರವಾಗುವುದರ ಜೊತೆಗೆ ಸ್ವಚ್ಛ ಸಮಾಜ ನಿರ್ಮಾಣದಲ್ಲಿ ವಿದ್ಯಾರ್ಥಿಗಳು ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಮೇಜರ್ ಪ್ರೊಫೆಸರ್ ರಾಘವ ಬಿ. ಮಾತನಾಡಿ, ಸಮಾಜಸೇವೆ ಮಾಡಲು ಅಗತ್ಯವಾದ ನೈತಿಕ ಸ್ಥೈರ್ಯವನ್ನು ಎನ್‌ಎಸ್‌ಎಸ್ ನೀಡುತ್ತದೆ. ‘ನನಗಲ್ಲ, ನಿನಗೆ’ ಎಂಬ ತತ್ವವು ವೈಯಕ್ತಿಕ ಪ್ರಗತಿಯ ಜೊತೆಗೆ ಸಾಮಾಜಿಕ ಪ್ರಗತಿಗೂ ಅವಕಾಶ ಕಲ್ಪಿಸುತ್ತದೆ. ನಾಯಕತ್ವದ ಗುಣಗಳನ್ನು ಬೆಳೆಸುವಲ್ಲಿ ಎನ್‌ಎಸ್‌ಎಸ್‌ನ ಪಾತ್ರ ಮಹತ್ವದ್ದಾಗಿದೆ. ತರಗತಿಯಲ್ಲಿ ಶಿಕ್ಷಣ ಮತ್ತು ಜ್ಞಾನ ದೊರೆತರೆ, ಸಾಮಾಜಿಕ ಜೀವನದ ಪಾಠಗಳನ್ನು ರಾಷ್ಟ್ರೀಯ ಸೇವಾ ಯೋಜನೆ ಕಲಿಸುತ್ತದೆ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು. ಕಾರ್ಯಕ್ರಮದಲ್ಲಿ ಎನ್‌ಎಸ್‌ಎಸ್ ಯೋಜನಾಧಿಕಾರಿಗಳಾದ ಡಾ. ಶೈಲಶ್ರೀ ಮತ್ತು ಅಲೋಕ್ ಬಿಜೈ, ಶಿಬಿರಾಧಿಕಾರಿಗಳಾದ ಡಾ. ಪ್ರದೀಪ್ ಭಂಡಾರಿ, ಡಾ. ರೇಣುಶ್ರೀ, ಡಾ. ಸೌಮ್ಯ, ಶರತ್ ಪಿ.ಜಿ. ಹಾಗೂ ಮೋನಿಶಾ ಉಪಸ್ಥಿತರಿದ್ದರು. ಅಶ್ವಿತಾ ಸ್ವಾಗತಿಸಿದರು. ಸುಶ್ಮಿತಾ ವಂದಿಸಿದರು. ಶೃಂಗಾರ್ ಕಾರ್ಯಕ್ರಮ ನಿರೂಪಿಸಿದರು.


















