ಮಡಿಕೇರಿ, NEWS DESK ಅ.11: ಐತಿಹಾಸಿಕ ಮಡಿಕೇರಿ ದಸರಾ ಮಹೋತ್ಸವಕ್ಕೆ ಸಾಂಪ್ರದಾಯಿಕ ನಾಲ್ಕು ಶಕ್ತಿ ದೇವತೆಗಳ ಕರಗೋತ್ಸವದ ಮೂಲಕ ಭಾನುವಾರ ಚಾಲನೆ ನೀಡಲಾಯಿತು. ನಗರದ ಪಂಪಿನ ಕೆರೆಯ ಬನ್ನಿಮಂಟಪದಲ್ಲಿ ಸಾಂಪ್ರದಾಯಿಕ ಪೂಜಾ ವಿಧಿವಿಧಾನಗಳೊಂದಿಗೆ ಕರಗೋತ್ಸವ ಆರಂಭಗೊಂಡಿದ್ದು, ನವರಾತ್ರಿ ಸಂಭ್ರಮಕ್ಕೆ ಅಧಿಕೃತವಾಗಿ ಚಾಲನೆ ದೊರೆಯಿತು.
ನಗರದ ರಾಜಾಸೀಟು ಸಮೀಪದ ಶ್ರೀ ಕುಂದುರುಮೊಟ್ಟೆ ಚೌಟಿ ಮಾರಿಯಮ್ಮ ದೇವಾಲಯದ ಕರಗವನ್ನು ಪಿ.ಪಿ. ಚಾಮಿ, ಗೌಳಿಬೀದಿಯ ಶ್ರೀ ಕಂಚಿ ಕಾಮಾಕ್ಷಿಯಮ್ಮ ದೇವಾಲಯದ ಕರಗವನ್ನು ಜಿ.ಆರ್. ಗಿರೀಶ್, ಶ್ರೀ ದಂಡಿನ ಮಾರಿಯಮ್ಮ ದೇವಾಲಯದ ಕರಗವನ್ನು ಜಿ.ಜೆ. ಜಿಜೇಶ್ ಹಾಗೂ ಶ್ರೀ ಕೋಟೆ ಮಾರಿಯಮ್ಮ ದೇವಾಲಯದ ಕರಗವನ್ನು ಎಂ.ಎಸ್. ಪ್ರಜ್ವಲ್ ಹೊತ್ತು ಮೆರವಣಿಗೆಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ನರೇಂದ್ರ ಸ್ವಾಮಿ, ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ, ಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್. ಬಿಂದುಮಣಿ, ಮಡಿಕೇರಿ ದಸರಾ ಸಮಿತಿ ಅಧ್ಯಕ್ಷೆ ಹಾಗೂ ನಗರಸಭಾ ಅಧ್ಯಕ್ಷೆ ಪಿ. ಕಲಾವತಿ, ಉಪಾಧ್ಯಕ್ಷ ಮಹೇಶ್ ಜೈನಿ, ದಸರಾ ಸಮಿತಿ ಕಾರ್ಯಾಧ್ಯಕ್ಷ ಬಿ.ಕೆ. ಅರುಣ್ ಕುಮಾರ್, ಪ್ರಧಾನ ಕಾರ್ಯದರ್ಶಿ ಅರುಣ್ ಶೆಟ್ಟಿ, ಖಜಾಂಚಿ ಸಬಿತಾ, ಮಾಜಿ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ ಸೇರಿದಂತೆ ಹಲವು ಗಣ್ಯರು ಮತ್ತು ಭಕ್ತರು ಪಾಲ್ಗೊಂಡು ಶಕ್ತಿ ದೇವತೆಗಳಿಗೆ ಪೂಜೆ ಸಲ್ಲಿಸಿದರು.
ಸಾಂಪ್ರದಾಯಿಕ ವಿಧಿವಿಧಾನಗಳೊಂದಿಗೆ ಕರಗ ಸಿದ್ಧತೆ
ನವರಾತ್ರಿಯ ಮೊದಲ ದಿನವಾದ ಭಾನುವಾರ ಮಧ್ಯಾಹ್ನದ ಬಳಿಕ ನಾಲ್ಕು ಶಕ್ತಿ ದೇವತೆಗಳ ಕರಗಗಳನ್ನು ಹೊರುವ ವ್ರತಧಾರಿಗಳು ತಮ್ಮ ತಮ್ಮ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಸಾಂಪ್ರದಾಯಿಕ ವಾದ್ಯಗಳೊಂದಿಗೆ ಶಕ್ತಿ ದೇವತೆಗಳ ಬೆಳ್ಳಿಯ ಮುಖವಾಡಗಳು, ಮಲ್ಲಿಗೆ, ಸೇವಂತಿಗೆ, ಕನಕಾಂಬರ ಹೂವುಗಳು, ದೇವಿಯ ಪವಿತ್ರ ಆಯುಧಗಳು ಹಾಗೂ ಇತರ ಪೂಜಾ ಪರಿಕರಗಳನ್ನು ಹೊತ್ತು ಮೆರವಣಿಗೆಯ ಮೂಲಕ ಪಂಪಿನ ಕೆರೆಗೆ ಆಗಮಿಸಿದರು.
ಅಲ್ಲಿ ಶ್ರದ್ಧಾಭಕ್ತಿಯಿಂದ ಪ್ರಾರ್ಥನೆ ಸಲ್ಲಿಸಿ ಕರಗ ಕಟ್ಟುವ ಕಾರ್ಯ ಆರಂಭಿಸಲಾಯಿತು. ಕರಗಗಳ ಶೃಂಗಾರ ಪೂರ್ಣಗೊಂಡ ಬಳಿಕ ನಾಲ್ಕು ಶಕ್ತಿ ದೇವತೆಗಳನ್ನು ಆಹ್ವಾನಿಸಿ ವಿಶೇಷ ಪೂಜೆ ನೆರವೇರಿಸಲಾಯಿತು.
ನಂತರ ಕರಗಗಳನ್ನು ಶಿರದ ಮೇಲೆ ಹೊತ್ತ ವ್ರತಧಾರಿಗಳು ಶ್ರೀ ಚೌಡೇಶ್ವರಿ ದೇವಾಲಯ ಹಾಗೂ ಶ್ರೀ ಪೇಟೆ ರಾಮಮಂದಿರಕ್ಕೆ ತೆರಳಿ ಪೂಜೆ ಸ್ವೀಕರಿಸಿದರು. ಬಳಿಕ ಕರಗಗಳು ತಮ್ಮ ತಮ್ಮ ದೇವಾಲಯಗಳ ನೆಲೆಗಳಿಗೆ ಮರಳಿದವು.
225 ವರ್ಷಗಳ ಇತಿಹಾಸ ಹೊಂದಿರುವ ಕರಗೋತ್ಸವ
ಮಡಿಕೇರಿ ದಸರಾ ಮಹೋತ್ಸವವು ನಾಲ್ಕು ಶಕ್ತಿ ದೇವತೆಗಳ ಕರಗಗಳನ್ನು ಹೊರಡಿಸುವ ಮೂಲಕ ಆರಂಭಗೊಳ್ಳುವುದು ವಿಶೇಷವಾಗಿದೆ. ಈ ಆಚರಣೆಗೆ ಸುಮಾರು 225 ವರ್ಷಗಳ ಇತಿಹಾಸವಿದೆ ಎಂದು ಹೇಳಲಾಗುತ್ತದೆ.
ಕೊಡಗಿನ ಅರಸರ ಆಳ್ವಿಕೆಯ ಕಾಲದಲ್ಲಿ ಮಡಿಕೇರಿ ನಾಡಿನಲ್ಲಿ ಮಾರಕ ಸಾಂಕ್ರಾಮಿಕ ಕಾಯಿಲೆಗಳು ಕಾಣಿಸಿಕೊಂಡು, ಅಪಾರ ಸಾವು-ನೋವು ಸಂಭವಿಸಿತ್ತು. ಜನರು ನಾಡು ತೊರೆದು ಗುಳೆ ಹೋಗುವ ಪರಿಸ್ಥಿತಿಯೂ ನಿರ್ಮಾಣವಾಗಿತ್ತು. ಈ ಸಂದರ್ಭದಲ್ಲಿ ಚಿಂತಿತರಾದ ಅರಸರು ನಾಡಿನಲ್ಲಿ ನೆಲೆಸಿದ್ದ ನಾಲ್ಕು ಶಕ್ತಿ ದೇವತೆಗಳ ಮೊರೆ ಹೋಗಿ ಜನರನ್ನು ರಕ್ಷಿಸುವಂತೆ ಪ್ರಾರ್ಥಿಸಿದರು.
ಅಲ್ಲದೆ, ನಾಲ್ಕು ಶಕ್ತಿ ದೇವತೆಗಳ ಕರಗಗಳನ್ನು ಮಡಿಕೇರಿ ದೊಡ್ಡಪೇಟೆಗೆ ಕರೆತಂದು ನಗರ ಪ್ರದಕ್ಷಿಣೆ ನಡೆಸುವ ಸಂಪ್ರದಾಯವನ್ನು ಆರಂಭಿಸಿದರು ಎಂಬ ಐತಿಹ್ಯವಿದೆ. ಅಂದು ಅರಸರ ಕಾಲದಲ್ಲಿ ಆರಂಭವಾದ ಈ ಆಚರಣೆ ಇಂದು ನಾಲ್ಕು ದೇವಾಲಯಗಳ ಸಮಿತಿಗಳ ನೇತೃತ್ವದಲ್ಲಿ ಉತ್ಸವದ ರೂಪದಲ್ಲಿ ಮುಂದುವರಿದಿದೆ.
ಭಕ್ತಿ, ಸಂಪ್ರದಾಯ ಮತ್ತು ಐತಿಹಾಸಿಕ ಪರಂಪರೆಯ ಸಂಗಮವಾಗಿರುವ ಕರಗೋತ್ಸವದೊಂದಿಗೆ ಮಡಿಕೇರಿಯಲ್ಲಿ ನವರಾತ್ರಿ ಹಾಗೂ ದಸರಾ ಸಂಭ್ರಮ ಕಳೆಗಟ್ಟಿದೆ.


















