ಮಡಿಕೇರಿ NEWS DESK ಅ.11 : ಕೊಡಗಿನ ಜನತೆಗೆ ಅತ್ಯಾಧುನಿಕ ಹೃದ್ರೋಗ ಚಿಕಿತ್ಸೆಯನ್ನು ಮಡಿಕೇರಿಯಲ್ಲಿಯೇ ಒದಗಿಸುವ ಉದ್ದೇಶದಿಂದ, ಸುಮಾರು ರೂ.10 ಕೋಟಿ ಅಂದಾಜು ವೆಚ್ಚದಲ್ಲಿ 360° ಮಲ್ಟಿ-ಆಕ್ಸಿಸ್ ಕ್ಯಾಥ್ ಲ್ಯಾಬ್ ಘಟಕವನ್ನು ಮಡಿಕೇರಿ ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ ಅಳವಡಿಸಲಾಗುತ್ತಿದೆ. ಈ ಘಟಕದ ಅಳವಡಿಕೆ ಮತ್ತು ಸಿದ್ಧತೆಗಳನ್ನು ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಅವರು ಖುದ್ದಾಗಿ ಪರಿಶೀಲಿಸಿ, ಅಗತ್ಯ ವ್ಯವಸ್ಥೆಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ಈ ಅತ್ಯಾಧುನಿಕ ಚಿಕಿತ್ಸಾ ಸೌಲಭ್ಯ ಆರಂಭವಾದರೆ, ಹೃದ್ರೋಗ ಚಿಕಿತ್ಸೆಗೆ ದೂರದ ನಗರಗಳನ್ನು ಅವಲಂಬಿಸಬೇಕಾದ ಕೊಡಗಿನ ಜನರ ಸಂಕಷ್ಟ ಗಣನೀಯವಾಗಿ ಕಡಿಮೆಯಾಗಲಿದೆ. ವಿಶೇಷವಾಗಿ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಗುಣಮಟ್ಟದ ಹೃದ್ರೋಗ ಚಿಕಿತ್ಸೆಯನ್ನು ಸ್ಥಳೀಯವಾಗಿಯೇ ಪಡೆಯಲು ಅನುಕೂಲವಾಗಲಿದೆ. ನವೆಂಬರ್ ತಿಂಗಳಲ್ಲಿ ಈ ಘಟಕದ ಸೇವೆ ಆರಂಭಿಸುವ ಗುರಿ ಹೊಂದಲಾಗಿದ್ದು, ಈ ನಿಟ್ಟಿನಲ್ಲಿ ಅಗತ್ಯ ಸಿದ್ಧತೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಶಾಸಕ ಡಾ. ಮಂತರ್ ಗೌಡ ತಿಳಿಸಿದ್ದಾರೆ. ಹಣಕಾಸಿನ ತೊಂದರೆಯಿಂದ ಯಾರೂ ಸೂಕ್ತ ಹೃದ್ರೋಗ ಚಿಕಿತ್ಸೆಯಿಂದ ವಂಚಿತರಾಗಬಾರದು ಎಂಬುದು ತಮ್ಮ ಉದ್ದೇಶವಾಗಿದೆ. ಕೊಡಗಿನ ಜನತೆಗೆ ಉತ್ತಮ ಆರೋಗ್ಯ ಸೇವೆಗಳು ಜಿಲ್ಲೆಯಲ್ಲಿಯೇ ದೊರೆಯಬೇಕು. ಜಿಲ್ಲೆಯ ಆರೋಗ್ಯ ಕ್ಷೇತ್ರವನ್ನು ಮತ್ತಷ್ಟು ಬಲಪಡಿಸುವುದು ತಮ್ಮ ಆದ್ಯತೆಯಾಗಿದ್ದು, ಜನರ ಆರೋಗ್ಯ ಮತ್ತು ಜೀವ ರಕ್ಷಣೆಗೆ ಪೂರಕವಾದ ಅಭಿವೃದ್ಧಿ ಕಾರ್ಯಗಳಿಗೆ ಸದಾ ಬದ್ಧರಾಗಿರುವುದಾಗಿ ಅವರು ಹೇಳಿದರು.
















