ಮಡಿಕೇರಿ ಅ.13 NEWS DESK : ಮಡಿಕೇರಿ ನಗರ ಮತ್ತು ಗೋಣಿಕೊಪ್ಪ ಪಟ್ಟಣದಲ್ಲಿ ನಡೆಯಲಿರುವ ನಾಡಹಬ್ಬ ದಸರಾ ಸಂಬಂಧ ವಾಹನ ದಟ್ಟಣೆ ನಿಯಂತ್ರಿಸಿ, ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸುವ ದೃಷ್ಟಿಯಿಂದ ಮೋಟಾರು ವಾಹನಗಳ ಕಾಯ್ದೆ 1988 ರ ಕಲಂ 115 ಹಾಗೂ ಕರ್ನಾಟಕ ಮೋಟಾರು ವಾಹನಗಳ ನಿಯಮ 1989ರ (ತಿದ್ದುಪಡಿ ನಿಯಮಾವಳಿ 1990) ನಿಯಮ 221ಎ (5) ರಲ್ಲಿ ದತ್ತವಾದ ಅಧಿಕಾರದಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ಅಕ್ಟೋಬರ್, 21 ರಂದು ಸಂಜೆ 04 ಗಂಟೆಯಿಂದ ಅಕ್ಟೋಬರ್, 22 ರ ಬೆಳಗ್ಗೆ 10 ಗಂಟೆಯವರೆಗೆ ಮಡಿಕೇರಿ ನಗರ ಮತ್ತು ಗೋಣಿಕೊಪ್ಪ ಪಟ್ಟಣದಲ್ಲಿ ವಾಹನ ಸಂಚಾರ ವ್ಯವಸ್ಥೆಯನ್ನು ನಿರ್ವಹಿಸಲು ಪೊಲೀಸ್ ಅಧೀಕ್ಷಕರು ಹಾಗೂ ಪಾದೇಶಿಕ ಸಾರಿಗೆ ಅಧಿಕಾರಿ ಅವರಿಗೆ ಅನುಮತಿಸಿ ಜಿಲ್ಲಾಧಿಕಾರಿ ಅವರು ಆದೇಶಿಸಿದ್ದಾರೆ. ವಾಹನ ಸಂಚಾರದ ವಿವರದ ಆದೇಶದ ಇಂತಿದೆ: ಅಕ್ಟೋಬರ್, 21 ರಂದು ಮಧ್ಯಾಹ್ನ 01 ಗಂಟೆಯಿಂದ ಅಕ್ಟೋಬರ್, 22 ರ ಬೆಳಗ್ಗೆ 10 ಗಂಟೆಯವರೆಗೆ ಮಂಗಳೂರು ಕಡೆಯಿಂದ ಮಡಿಕೇರಿ ಮುಖಾಂತರ ಮೈಸೂರು ಕಡೆಗೆ ತೆರಳುವ ಭಾರಿ ವಾಹನಗಳು (ಟ್ಯಾಂಕರ್, ಕ್ಯಾಂಟರ್, ಸರಕು ಲಾರಿಗಳು) ದಕ್ಷಿಣ ಕನ್ನಡ ಜಿಲ್ಲೆಯ ಮಾಣಿ, ಸಕಲೇಶಪುರ, ಮೈಸೂರು ಮಾರ್ಗವಾಗಿ ಸಂಚರಿಸುವುದು. ಅಕ್ಟೋಬರ್, 21 ರಂದು ಮಧ್ಯಾಹ್ನ 01 ಗಂಟೆಯಿಂದ ಅಕ್ಟೋಬರ್, 22 ರ ಬೆಳಗ್ಗೆ 10 ಗಂಟೆಯವರೆಗೆ ಮೈಸೂರು ಕಡೆಯಿಂದ ಮಂಗಳೂರು ಕಡೆಗೆ ತೆರಳುವ ಭಾರಿ ವಾಹನಗಳು (ಟ್ಯಾಂಕರ್, ಕ್ಯಾಂಟರ್, ಸರಕು ಲಾರಿಗಳು) ಬಿಳಿಕೆರೆ, ಕೆ.ಆರ್.ನಗರ, ಹೊಳೆನರಸೀಪುರ, ಹಾಸನ ಸಕಲೇಶಪುರ ಮಾರ್ಗವಾಗಿ ಸಂಚರಿಸುವುದು. ಅಕ್ಟೋಬರ್, 21 ರಂದು ಸಂಜೆ 4 ಗಂಟೆಯಿಂದ ಅಕ್ಟೋಬರ್, 22 ರ ಬೆಳಗ್ಗೆ 10 ಗಂಟೆಯವರೆಗೆ ಮಡಿಕೇರಿ ನಗರದೊಳಗೆ ಯಾವುದೇ ವಾಹನಗಳಿಗೆ ಪ್ರವೇಶ ಇರುವುದಿಲ್ಲ. ಮಡಿಕೇರಿ ನಗರ ವಾಹನ ಸಂಚಾರದ ತಾತ್ಕಾಲಿಕವಾಗಿ ಮಾರ್ಗ ಬದಲಾವಣೆ ಮತ್ತು ಪಾಕಿರ್ಂಗ್ ವ್ಯವಸ್ಥೆಯ ವಿವರ: ಸೋಮವಾರಪೇಟೆ ಕಡೆಯಿಂದ ಬರುವ ವಾಹನಗಳು ಸಂಪಿಗೆ ಕಟ್ಟೆ ಕಡೆಯಿಂದ ಎ.ವಿ.ಶಾಲೆ, ಮುತ್ತಪ್ಪ ದೇವಸ್ಥಾನ ಮುಂದೆ ಸೆಂಟ್ ಜೋಸೆಫ್ ಕಾನ್ವೆಂಟ್ ಮೈದಾನದಲ್ಲಿ ವಾಹನ ನಿಲುಗಡೆಗೊಳಿಸುವುದು. ಎಸ್.ಪಿ ಕಚೇರಿ ಜಂಕ್ಷನ್, ಮುಂದೆ ಐಟಿಐ ಜಂಕ್ಷನ್ ಕಡೆಯಿಂದ ಎಫ್.ಎಂ.ಸಿ ಕಾಲೇಜು ಮೈದಾನದಲ್ಲಿ ವಾಹನಗಳನ್ನು ನಿಲುಗಡೆಗೊಳಿಸುವುದು. ಮೈಸೂರು ರಸ್ತೆ ಮತ್ತು ಸಿದ್ದಾಪುರ ಕಡೆಯಿಂದ ದಸರಾಕ್ಕೆ ಬರುವ ವಾಹನಗಳು ಚೈನ್‍ಗೇಟ್ ಮುಖಾಂತರ ತೆರಳಿ ಮ್ಯಾನ್ಸ್ ಕಾಂಪೌಂಡ್ ಮೈದಾನದಲ್ಲಿ ನಿಲುಗಡೆಗೊಳಿಸುವುದು. ವಿರಾಜಪೇಟೆ, ಮೂರ್ನಾಡು ಕಡೆಯಿಂದ ದಸರಾಕ್ಕೆ ಬರುವ ವಾಹನಗಳು ಮೇಕೇರಿ ಶಾಲಾ ಮೈದಾನದಲ್ಲಿ ನಿಲುಗಡೆಗೊಳಿಸುವುದು. ಮಂಗಳೂರು ಕಡೆಯಿಂದ ದಸರಾಕ್ಕೆ ಬರುವ ವಾಹನಗಳು ತಾಳತ್‍ಮನೆ ನೇತಾಜಿ ಮೈದಾನ ಮತ್ತು ದುರ್ಗ ಭಗವತಿ ದೇವಸ್ಥಾನ ಮೈದಾನದಲ್ಲಿ ನಿಲುಗಡೆಗೊಳಿಸುವುದು. ಗಾಳಿಬೀಡು ಅಬ್ಬಿಪಾಲ್ಸ್, ಕಾಲೂರು ಕಡೆಯಿಂದ ಬರುವ ವಾಹನಗಳು ಎಫ್.ಎಂ.ಸಿ ಕಾಲೇಜು ಮೈದಾನದಲ್ಲಿ ನಿಲುಗಡೆಗೊಳಿಸುವುದು. ಭಾಗಮಂಡಲ ಕಡೆಯಿಂದ ದಸರಾಕ್ಕೆ ಬರುವ ವಾಹನಗಳು ತಾಳತ್‍ಮನೆ ಪಪ್ಪೀಸ್ ಗ್ಲಾಸ್ ಹೌಸ್ ಮೈದಾನದಲ್ಲಿ ನಿಲುಗಡೆಗೊಳಿಸುವುದು. ಮೈಸೂರು, ಸಿದ್ದಾಪುರ, ಕಡೆಯಿಂದ ಬರುವ ದ್ವಿಚಕ್ರ ವಾಹನಗಳ ನಿಲುಗಡೆಗೆ ಮೈಸೂರು ರಸ್ತೆಯ ಈಸ್ಟ್ ಎಂಡ್ ಹೋಟೆಲ್ ಮುಂಭಾಗದಲ್ಲಿರುವ ಶಾಂತಿ ಚರ್ಚ್ ಮೈದಾನದಲ್ಲಿ ನಿಲುಗಡೆಗೊಳಿಸುವುದು
ನಗರದಲ್ಲಿರುವ ಗಣಪತಿ ಬೀದಿ, ಮಹದೇವಪೇಟೆ, ಕಾಲೇಜು ರಸ್ತೆ, ಕೊಹಿನೂರು ರಸ್ತೆ ಮತ್ತು ನಗರದ ಮಧ್ಯಭಾಗದಲ್ಲಿರುವ ಸಾರ್ವಜನಿಕರು ತಮ್ಮ ವಾಹನವನ್ನು ರಸ್ತೆಯಲ್ಲಿ ನಿಲ್ಲಿಸದೇ ಕ್ರೆಸೆಂಟ್ ಶಾಲೆ ಮೈದಾನ, ಹಿಂದೂಸ್ಥಾನ್ ಸ್ಕೂಲ್ ಮೈದಾನ, ಅಥವಾ ಕೆಎಸ್‍ಆರ್‍ಟಿಸಿ ಬಸ್ಸು ನಿಲ್ದಾಣದಲ್ಲಿ ನಿಲುಗಡೆಗೊಳಿಸುವುದು. ಇದೇ ಅಕ್ಟೋಬರ್ 21 ರಂದು ಸಂಜೆ 4 ಗಂಟೆಯಿಂದ ಅಕ್ಟೋಬರ್ 22 ರ ಬೆಳಗ್ಗೆ 10 ಗಂಟೆ ವರೆಗೆ ನಗರದೊಳಗೆ ವಾಹನ ಸಂಚಾರವನ್ನು ನಿರ್ಬಂಧಿಸುವುದು, ಮತ್ತು ನಗರದೊಳಗೆ ಇರುವ ಎಲ್ಲಾ ರಸ್ತೆಗಳನ್ನು ನಿಲುಗಡೆ ರಹಿತ ರಸ್ತೆಗಳೆಂದು ಪ್ರಕಟಿಸುವುದು, ಸಂಪಿಗೆ ಕಟ್ಟೆಯಿಂದ ಉಕ್ಕುಡ ಮಹದೇವಪೇಟೆ, ಎ.ವಿ.ಸ್ಕೂಲ್ ಜಂಕ್ಷನ್, ಕಾನ್ವೆಂಟ್ ಜಂಕ್ಷನ್ ವರೆಗಿನ ರಸ್ತೆಯನ್ನು ನಿಲುಗಡೆ ರಹಿತ ರಸ್ತೆ ಎಂದು ಮತ್ತು ಹೊಸ ಖಾಸಗಿ ಬಸ್ಸು ನಿಲ್ದಾಣದಿಂದ ರೇಸ್ ಕೋರ್ಸ ರಸ್ತೆಗಾಗಿ ರಾಜಸೀಟ್ ರಸ್ತೆಯ ಮುಖಾಂತರ ಮಂಗೇರಿರ ಮುತ್ತಣ ರಸ್ತೆಯವರೆಗೂ ನಿಲುಗಡೆ ರಹಿತ ರಸ್ತೆ ಎಂದು ನಿರ್ಬಂಧಿಸುವುದು. ಗಣಪತಿ ಬೀದಿ, ಮಹದೇವಪೇಟೆ, ಕಾಲೇಜು ರಸ್ತೆ, ಕೊಹಿನೂರು ರಸ್ತೆಯಲ್ಲಿ ಅಕ್ಟೋಬರ್ 22 ರ ಸಂಜೆ 4 ಗಂಟೆಯವರೆಗೂ ನಿಲುಗಡೆ ರಹಿತ ರಸ್ತೆಗಳೆಂದು ಪ್ರಕಟಿಸುವುದು. ಕೆಎಸ್‍ಆರ್‍ಟಿಸಿ ಬಸ್ಸುಗಳು ತಾತ್ಕಾಲಿಕವಾಗಿ ಕೆಎಸ್‍ಆರ್‍ಟಿಸಿ ಡಿಪೋ ಮತ್ತು ಆರ್‍ಎಂಸಿ ಯಾರ್ಡ್‍ನ್ನು ಬಸ್ಸು ನಿಲ್ದಾಣವಾಗಿ ಮಾರ್ಪಾಡಿಸಿಕೊಳ್ಳುವುದು ಮತ್ತು ನಗರದೊಳಗೆ ಸಂಚರಿಸದಂತೆ ವ್ಯವಸ್ಥೆ ಮಾಡಿಕೊಳ್ಳುವುದು. ಕೆಎಸ್‍ಆರ್‍ಟಿಸಿ ಬಸ್ಸು ನಿಲ್ದಾಣವನ್ನು ತಾತ್ಕಾಲಿಕವಾಗಿ ಸಾರ್ವಜನಿಕರಿಗೆ ವಾಹನ ನಿಲ್ಲಿಸಲು ಅನುವು ಮಾಡಿಕೊಡುವುದು. ಖಾಸಗಿ ಬಸ್ಸುಗಳು ನಗರದೊಳಗೆ ಆಗಮಿಸದೇ ಜಿಟಿ ವೃತ್ತದಲ್ಲಿಯೇ ಪ್ರಯಾಣಿಕರನ್ನು ಇಳಿಸಿ, ಹತ್ತಿಸಿ ತೆರಳುವುದು ಮತ್ತು ಖಾಸಗಿ ಬಸ್ಸು ನಿಲ್ದಾಣವನ್ನು ತಾತ್ಕಾಲಿಕವಾಗಿ ಸಾರ್ವಜನಿಕರಿಗೆ ವಾಹನ ನಿಲ್ಲಿಸಲು ಅನುವು ಮಾಡಿಕೊಡುವುದು. ಪಾರ್ಕಿಂಗ್ ವ್ಯವಸ್ಥೆ ಮಾಡಿರುವ ಸ್ಥಳಗಳು: ತಾಳತ್‍ಮನೆ ನೇತಾಜಿ ಯುವಕ ಸಂಘ ಮೈದಾನ, ಮೇಕೇರಿ ಶಾಲಾ ಮೈದಾನ, ದುರ್ಗ ಭಗವತಿ ದೇವಸ್ಥಾನದ ಮೈದಾನ, ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣ (ಮ್ಯಾನ್ಸ್ ಕಾಂಪೌಂಡ್ ಮೈದಾನ), ಜೂನಿಯರ್ ಕಾಲೇಜು ಮೈದಾನ, ಎಪಿಎಂಸಿ ಮೈದಾನ, ಸಂತ ಜೋಸೆಫ್ ಕಾನ್ವೆಂಟ್ ಮೈದಾನ, ಐಟಿಐ ಕಾಲೇಜು ಮೈದಾನ, ಎಫ್‍ಎಂಸಿ ಕಾಲೇಜು ಮೈದಾನ, ಶಾಂತಿ ಚರ್ಚ್ ಮೈದಾನ (ದ್ವಿ ಚಕ್ರ ಮೋಟಾರು ಸೈಕಲ್ ಮಾತ್ರ), ಕ್ರೆಸೆಂಟ್ ಶಾಲಾ ಮೈದಾನ, ಹಿಂದೂಸ್ಥಾನಿ ಶಾಲಾ ಮೈದಾನ, ಕೆಎಸ್‍ಆರ್‍ಟಿಸಿ ಬಸ್ಸು ನಿಲ್ದಾಣ, ಹೊಸ ಖಾಸಗಿ ಬಸ್ಸು ನಿಲ್ದಾಣ, ಪಂಪಿನಕರೆ ಮುಂಭಾಗದ ಸತೀಶ್ ರವರ ಖಾಲಿ ಜಾಗ, ಮೈಸೂರಿನಿಂದ ಬರುವಂತಹ ಲಘು ವಾಹನಗಳು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಚೇರಿಯ ಎದುರು ಭಾಗದಲ್ಲಿರುವಂತಹ ಕಾರ್ಯಪ್ಪರವರ ಖಾಲಿ ಜಾಗದಲ್ಲಿ) ಗೋಣಿಕೊಪ್ಪ ಪಟ್ಟಣ ದಸರಾ ಸಂದರ್ಭದಲ್ಲಿ ವಾಹನ ಸಂಚಾರಕ್ಕಾಗಿ ತಾತ್ಕಾಲಿಕ ಮಾರ್ಗ ಬದಲಾವಣೆ ಮಾಡಿರುವ ವಿವರ: ಗೋಣಿಕೊಪ್ಪಲು ಪಟ್ಟಣದ ಉಮಾಮಹೇಶ್ವರಿ ದೇವಸ್ಥಾನದಿಂದ ಹರಿಶ್ಚಂದ್ರಪುರದ ವರೆಗೆ, ಪೊನ್ನಂಪೇಟೆ ರಸ್ತೆ ಜಂಕ್ಷನ್‍ನಿಂದ ಕೆಪಿಟಿಸಿಎಲ್ ಕಚೇರಿಯವರೆಗೆ, ಪೊನ್ನಂಪೇಟೆ ರಸ್ತೆ, ಬೈಪಾಸ್ ರಸ್ತೆ ಜಂಕ್ಷನ್ನಿಂದ ಐಪಿ ಜಂಕ್ಷನ್‍ವರೆಗೆ, ಪಾಲಿಬೆಟ್ಟ ರಸ್ತೆಯಲ್ಲಿ ಗೋಣಿಕೊಪ್ಪದ ಕೂರ್ಗ್ ಪಬ್ಲಿಕ್ ಸ್ಕೂಲ್ ರಸ್ತೆಯವರೆಗೆ ಮುಖ್ಯ ಬೀದಿಯಲ್ಲಿ ರಸ್ತೆಯ ಬದಿಯಲ್ಲಿ ವಾಹನಗಳ ನಿಲುಗಡೆ ನಿಷೇಧಿಸಿದೆ. ಮೈಸೂರಿನಿಂದ ತಿತಿಮತಿ, ಗೋಣಿಕೊಪ್ಪ ಮಾರ್ಗವಾಗಿ ವಿರಾಜಪೇಟೆಗೆ ಬರುವ ವಾಹನಗಳು- ತಿತಿಮತಿ, ಪಾಲಿಬೆಟ್ಟ, ಅಮ್ಮತ್ತಿ ಮಾರ್ಗವಾಗಿ ವಿರಾಜಪೇಟೆಗೆ ಹೋಗುವುದು. ವಿರಾಜಪೇಟೆಯಿಂದ ಗೋಣಿಕೊಪ್ಪ-ತಿತಿಮತಿ ಮಾರ್ಗವಾಗಿ ಮೈಸೂರಿಗೆ ಹೋಗುವ ವಾಹನಗಳು- ಕೈಕೇರಿ ಗ್ರಾಮದ ಕಳತ್ಮಾಡ್-ಅತ್ತೂರು ಶಾಲೆ ಜಂಕ್ಷನ್- ಪಾಲಿಬೆಟ್ಟದ ಟಾಟಾ ಸ್ಟೋರ್ ಜಂಕ್ಷನ್-ತಿತಿಮತಿ ಮಾರ್ಗವಾಗಿ ಮೈಸೂರಿಗೆ ಹೋಗುವುದು.
ಕೇರಳದಿಂದ ಪೆರುಂಬಾಡಿ-ಗೋಣಿಕೊಪ್ಪ ಮಾರ್ಗವಾಗಿ ಮೈಸೂರಿಗೆ ಹೋಗುವ ವಾಹನಗಳು- ಪೆರುಂಬಾಡಿ-ವಿರಾಜಪೇಟೆ-ಅಮೃತ್ತಿ-ಸಿದ್ದಾಪುರ-ಪಿರಿಯಾಪಟ್ಟಣ-ಮೈಸೂರು ಮೂಲಕ ಹೋಗುವುದು. ವಿರಾಜಪೇಟೆಯಿಂದ ಗೋಣಿಕೊಪ್ಪ ಮಾರ್ಗವಾಗಿ-ಕಾನೂರು-ಶ್ರೀಮಂಗಲ-ಕುಟ್ಟ ಕಡೆಗಳಿಗೆ ಹೋಗುವ ವಾಹನಗಳು-ವಿರಾಜಪೇಟೆ-ಹಾತೂರು-ಕುಂದಾ-ಪೊನ್ನಂಪೇಟೆ ಮಾರ್ಗವಾಗಿ ಸಂಚರಿಸುವುದು. ಬಾಳಲೆಯಿಂದ ಗೋಣಿಕೊಪ್ಪ ಮಾರ್ಗವಾಗಿ ವಿರಾಜಪೇಟೆಗೆ ಹೋಗುವ ವಾಹನಗಳು-ಬಾಳಲೆ-ಪೊನ್ನಂಪೇಟೆ-ಕುಂದಾ-ಹಾತೂರು ಮಾರ್ಗವಾಗಿ ವಿರಾಜಪೇಟೆಗೆ ಸಂಚರಿಸುವುದು.
ಕುಟ್ಟ, ಶ್ರೀಮಂಗಲ, ಕಾನೂರು ಕಡೆಯಿಂದ ಗೋಣಿಕೊಪ್ಪ ಮಾರ್ಗವಾಗಿ ವಿರಾಜಪೇಟೆಗೆ ಹೋಗುವ ವಾಹನಗಳು ಪೊನ್ನಂಪೇಟೆ-ಕುಂದಾ-ಹಾತೂರು ಮಾರ್ಗವಾಗಿ ವಿರಾಜಪೇಟೆಗೆ ಸಂಚರಿಸುವುದು. ಮೈಸೂರು-ತಿತಿಮತಿ-ಗೋಣಿಕೊಪ್ಪ-ಶ್ರೀಮಂಗಲ-ಕುಟ್ಟ ಕಡೆಗಳಿಗೆ ಹೋಗುವ ವಾಹನಗಳು ತಿತಿಮತಿ-ಕೋಣನಕಟ್ಟೆ-ಪೊನ್ನಪ್ಪಸಂತೆ -ನಲ್ಲೂರು-ಪೊನ್ನಂಪೇಟೆ ಮಾರ್ಗವಾಗಿ ಸಂಚರಿಸುವುದು. ಕುಟ್ಟ-ಶ್ರೀಮಂಗಲ-ಪೊನ್ನಂಪೇಟೆ-ಗೋಣಿಕೊಪ್ಪ-ಮೈಸೂರು ಕಡೆಗೆ ಹೋಗುವ ವಾಹನಗಳು, ಕುಟ್ಟ-ಶ್ರೀಮಂಗಲ, ಪೊನ್ನಂಪೇಟೆ, ನಲ್ಲೂರು, ಪೆÇನ್ನಪ್ಪಸಂತೆ, ಕೋಣನಕಟ್ಟೆ, ತಿತಿಮತಿ ಮಾರ್ಗವಾಗಿ ಸಂಚರಿಸುವುದು.
ವಿರಾಜಪೇಟೆಯಿಂದ ಗೋಣಿಕೊಪ್ಪ ಮಾರ್ಗವಾಗಿ ಬಾಳಲೆ ಕಡೆಗೆ ಹೋಗುವ ವಾಹನಗಳು ವಿರಾಜಪೇಟೆ-ಹಾತೂರು-ಕುಂದಾ-ಪೊನ್ನಂಪೇಟೆ ಮಾರ್ಗವಾಗಿ ಸಂಚರಿಸುವುದು. ದಸರಾ ವೀಕ್ಷಿಸಲು ಬರುವ ಸಾರ್ವಜನಿಕ ವಾಹನಗಳ ನಿಲುಗಡೆ ಸ್ಥಳಗಳು: ದಸರಾ ವೀಕ್ಷಣೆಗೆ ಗೋಣಿಕೊಪ್ಪಕ್ಕೆ ವಿರಾಜಪೇಟೆ ಕಡೆಯಿಂದ ಬರುವ ವಾಹನಗಳಿಗೆ – ಗೋಣಿಕೊಪ್ಪ ಕಾವೇರಿ ಕಾಲೇಜು ಮೈದಾನದಲ್ಲಿ ನಿಲುಗಡೆಗೊಳಿಸುವುದು. ಪೊನ್ನಂಪೇಟೆ ಕಡೆಯಿಂದ ಬರುವ ವಾಹನಗಳಿಗೆ-ಗೋಣಿಕೊಪ್ಪ-ಪೊನ್ನಂಪೇಟೆ ರಸ್ತೆಯಲ್ಲಿರುವ ರುದ್ರಭೂಮಿಯ ಹಿಂದಕ್ಕೆ ಪೊನ್ನಂಪೇಟೆ ರಸ್ತೆಯ ಬದಿಯಲ್ಲಿ ನಿಲುಗಡೆಗೊಳಿಸುವುದು. ತಿತಿಮತಿ ಮತ್ತು ಬಾಳೆಲೆ ಕಡೆಯಿಂದ ಬರುವ ವಾಹನಗಳಿಗೆ-ಗೋಣಿಕೊಪ್ಪಲು ಆರ್.ಎಂ.ಸಿ. ಆವರಣದಲ್ಲಿ ನಿಲುಗಡೆಗೊಳಿಸುವುದು. ಪಾಲಿಬೆಟ್ಟ ಕಡೆಯಿಂದ ಬರುವ ವಾಹನಗಳಿಗೆ-ಪಾಲಿಬೆಟ್ಟ ರಸ್ತೆಯಲ್ಲಿ ಶಾಸ್ತಾ ಇಂಡಸ್ಟ್ರೀಸ್ ನಿಂದ ಅತ್ತೂರು ಕಡೆಗೆ ರಸ್ತೆಯ ಒಂದು ಬದಿಯಲ್ಲಿ ವಾಹನ ನಿಲುಗಡೆಗೊಳಿಸುವುದು.
ಈ ಬಗ್ಗೆ ಮೋಟಾರ್ ವಾಹನ ಕಾಯ್ದೆ 1988 ರ ಸೆಕ್ಷನ್ 116 ಹಾಗೂ ಕರ್ನಾಟಕ ಮೋಟಾರ್ ವಾಹನ ನಿಯಮ 1989ರ (ತಿದ್ದುಪಡಿ ನಿಯಮ 1990) ನಿಯಮ 221ಎ(2)ರಂತೆ ಅವಶ್ಯವಿರುವ ಸಂಜ್ಞೆ ಸೂಚನಾ ಫಲಕವನ್ನು ಅಳವಡಿಸಲು ಪೆÇಲೀಸ್ ಅಧೀಕ್ಷಕರು, ಕೊಡಗು ಜಿಲ್ಲೆ, ಮಡಿಕೇರಿ ಇವರಿಗೆ ಅಧಿಕಾರ ನೀಡಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ತಿಳಿಸಿದ್ದಾರೆ.

















