ಮಡಿಕೇರಿ, NEWS DESK ಅ.13: ಕೇಂದ್ರದ ಬಿಜೆಪಿ ಸರ್ಕಾರವು ಜಾರಿ ನಿರ್ದೇಶನಾಲಯ (ಇಡಿ), ಆದಾಯ ತೆರಿಗೆ ಇಲಾಖೆ (ಐಟಿ) ಮತ್ತು ಕೇಂದ್ರ ತನಿಖಾ ದಳವನ್ನು (ಸಿಬಿಐ) ರಾಜಕೀಯ ಸ್ವಾರ್ಥಕ್ಕಾಗಿ ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಲಕ್ಷ್ಮೀನಾರಾಯಣ ನಾಗವಾರ ಬಣ) ವತಿಯಿಂದ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.
ರಾಜ್ಯಾದ್ಯಂತ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು, ಇದರ ಭಾಗವಾಗಿ ಮಡಿಕೇರಿಯಲ್ಲಿಯೂ ಮನವಿ ಸಲ್ಲಿಸಲಾಯಿತು ಎಂದು ಸಮಿತಿಯ ಪ್ರಮುಖರು ತಿಳಿಸಿದರು.
ಸಾಂವಿಧಾನಿಕ ಸಂಸ್ಥೆಗಳ ಸ್ವಾಯತ್ತತೆಯನ್ನು ರಕ್ಷಿಸುವುದರ ಜೊತೆಗೆ ಸರ್ಕಾರದ ಆಡಳಿತದಲ್ಲಿ ಪಾರದರ್ಶಕತೆಯನ್ನು ಖಾತರಿಪಡಿಸಬೇಕು ಎಂದು ಸಮಿತಿ ಆಗ್ರಹಿಸಿತು. ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಲ್ಲಿ ಪ್ರಜಾಪ್ರಭುತ್ವ ವಿರೋಧಿ ಧೋರಣೆ ಅನುಸರಿಸಲಾಗುತ್ತಿದೆ ಎಂದು ಆರೋಪಿಸಿದ ಸಮಿತಿಯ ಮುಖಂಡರು, ಕೇಂದ್ರ ಚುನಾವಣಾ ಆಯೋಗದ ಮುಖ್ಯಸ್ಥ ಜ್ಞಾನೇಶ್ ಕುಮಾರ್ ಅವರು ತಕ್ಷಣ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಚುನಾವಣಾ ಆಯೋಗ, ಇಡಿ, ಆದಾಯ ತೆರಿಗೆ ಇಲಾಖೆ ಮತ್ತು ಸಿಬಿಐ ಸ್ವತಂತ್ರವಾಗಿ ಕಾರ್ಯನಿರ್ವಹಿಸಬೇಕಾದ ಸಾಂವಿಧಾನಿಕ ಹಾಗೂ ಕಾನೂನುಬದ್ಧ ಸಂಸ್ಥೆಗಳಾಗಿವೆ. ರಾಜಕೀಯ ಪಕ್ಷಗಳು ತಮ್ಮ ಸ್ವಾರ್ಥ ಮತ್ತು ಹಿತಾಸಕ್ತಿಗಳಿಗಾಗಿ ಈ ಸಂಸ್ಥೆಗಳ ಕಾರ್ಯನಿರ್ವಹಣೆಯಲ್ಲಿ ಹಸ್ತಕ್ಷೇಪ ಮಾಡುವುದು ಜನವಿರೋಧಿ ಕೃತ್ಯವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸ್ವತಂತ್ರ ಸಂಸ್ಥೆಗಳ ರಾಜಕೀಯ ದುರ್ಬಳಕೆಯನ್ನು ತಡೆಯಲು ನ್ಯಾಯಾಂಗ ಮಧ್ಯಪ್ರವೇಶಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ ಸಮಿತಿಯ ಮುಖಂಡರು, ಕೇಂದ್ರ ಸರ್ಕಾರದ ಜನವಿರೋಧಿ ನೀತಿ ಮತ್ತು ಧೋರಣೆಗಳನ್ನು ಖಂಡಿಸಿದರು.
ಈ ಸಂದರ್ಭದಲ್ಲಿ ಸಮಿತಿಯ ಜಿಲ್ಲಾ ಸಂಚಾಲಕರಾದ ಜೆ.ಎಲ್. ಜನಾರ್ಧನ್, ಎಂ.ಎಸ್. ವೀರೇಂದ್ರ, ಸಂಘಟನಾ ಸಂಚಾಲಕ ಡಿ.ಎಸ್. ಕಾಂತರಾಜ್, ಮಹಿಳಾ ಒಕ್ಕೂಟದ ಸಂಚಾಲಕಿ ಪ್ರಮೀಳಾ, ಮಡಿಕೇರಿ ತಾಲೂಕು ಸಂಚಾಲಕ ಹರೀಶ್, ಸೋಮವಾರಪೇಟೆ ತಾಲೂಕು ಸಂಚಾಲಕ ಯತೀಶ್ ಬಿದರೂರು, ಮಂಜುನಾಥ್ ಮಾದ್ರೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.

















