ಸುಂಟಿಕೊಪ್ಪ, NEWS DESK ಅ. 15: ಹಿಂದೂ ಮಲಯಾಳಿ ಸಮಾಜದವರು ತಮ್ಮ ಸಾಂಪ್ರದಾಯಿಕ ಹಬ್ಬವಾದ ಓಣಂ ಅನ್ನು ಎಲ್ಲರೊಂದಿಗೆ ಬೆರೆತು ಸಂಭ್ರಮದಿಂದ ಆಚರಿಸುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದು ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಹೇಳಿದರು.
ಗದ್ದೆಹಳ್ಳದ ಎಸ್.ಎಸ್. ಇಂಟರ್ನ್ಯಾಷನಲ್ ಸಭಾಂಗಣದಲ್ಲಿ ಗುರುವಾರ ಆಯೋಜಿಸಲಾಗಿದ್ದ ಸುಂಟಿಕೊಪ್ಪ ಮಲಯಾಳಿ ಸಮಾಜದ 19ನೇ ವರ್ಷದ ಓಣಂ ಆಚರಣೆಯನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲೆ ಹಾಗೂ ತಾಲೂಕು ಮಟ್ಟದಲ್ಲಿ ಮಲಯಾಳಿ ಸಮಾಜದವರಿಗೆ ನಿವೇಶನ ಒದಗಿಸಬೇಕೆಂಬ ಬೇಡಿಕೆಯಿದೆ. ಜಿಲ್ಲಾ ಮಟ್ಟದಲ್ಲಿ ನಿವೇಶನ ಗುರುತಿಸುವ ಕಾರ್ಯ ನಡೆಯುತ್ತಿದ್ದು, ಇದಕ್ಕೆ ಶಾಸಕರ ಅನುದಾನ ನೀಡಲಾಗುವುದು ಎಂದು ಭರವಸೆ ನೀಡಿದರು. ಸುಂಟಿಕೊಪ್ಪ ಮಲಯಾಳಿ ಸಮಾಜದವರು ಸೂಕ್ತ ಜಾಗ ಗುರುತಿಸಿದಲ್ಲಿ ಕಟ್ಟಡ ನಿರ್ಮಾಣಕ್ಕೂ ಸಹಕಾರ ನೀಡುವುದಾಗಿ ತಿಳಿಸಿದರು.
ಮುಖ್ಯ ಅತಿಥಿಯಾಗಿದ್ದ ಕೊಡಗು ಜಿಲ್ಲಾ ಪಂಚಾಯಿತಿಯ ಮಾಜಿ ಅಧ್ಯಕ್ಷ ಹಾಗೂ ಜಿಲ್ಲಾ ಹಿಂದೂ ಮಲಯಾಳಿ ಸಮಾಜದ ಅಧ್ಯಕ್ಷ ವಿ.ಎಂ. ವಿಜಯನ್ ಮಾತನಾಡಿ, ಮಕ್ಕಳಿಗೆ ಉನ್ನತ ಶಿಕ್ಷಣ ನೀಡುವುದರೊಂದಿಗೆ ಸಂಸ್ಕಾರಯುತ ಜೀವನವನ್ನು ರೂಢಿಸಿಕೊಳ್ಳುವಂತೆ ಬೆಳೆಸುವುದು ಪೋಷಕರ ಜವಾಬ್ದಾರಿಯಾಗಿದೆ. ಇಂದಿನ ಕಾಲಘಟ್ಟದಲ್ಲಿ ಮಕ್ಕಳ ಚಲನವಲನ ಹಾಗೂ ಚಟುವಟಿಕೆಗಳ ಮೇಲೂ ಪೋಷಕರು ನಿಗಾ ವಹಿಸಬೇಕು ಎಂದು ಸಲಹೆ ನೀಡಿದರು.
ಮತ್ತೋರ್ವ ಮುಖ್ಯ ಅತಿಥಿ, ಜಿಲ್ಲಾಡಳಿತದ ಕಾನೂನು ಸಲಹೆಗಾರ ಎ. ಲೋಕೇಶ್ ಕುಮಾರ್ ಮಾತನಾಡಿ, ಕಳೆದ 19 ವರ್ಷಗಳಿಂದ ಸುಂಟಿಕೊಪ್ಪ ಮಲಯಾಳಿ ಸಮಾಜದ ಓಣಂ ವಾರ್ಷಿಕೋತ್ಸವದಲ್ಲಿ ಭಾಗವಹಿಸುತ್ತಿದ್ದು, ಸಮಾಜವು ಹಂತ ಹಂತವಾಗಿ ಬೆಳವಣಿಗೆ ಸಾಧಿಸಿರುವುದನ್ನು ಕಂಡು ಸಂತೋಷವಾಗಿದೆ ಎಂದರು. ಸಂಘಟನೆಯ ಮೂಲಕ ಸಮಾಜದ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತರಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಹಿಂದೂ ಮಲಯಾಳಿ ಸಮಾಜ ಉತ್ತಮ ಸಾಧನೆ ಮಾಡಿದೆ. ಸಮಾಜದ ಪ್ರತಿಭೆಗಳು ಹೋಬಳಿ ಮಟ್ಟದಿಂದ ಹಿಡಿದು ದೇಶ-ವಿದೇಶಗಳಲ್ಲಿಯೂ ಸಾಧನೆ ಮಾಡುತ್ತಿರುವುದು ಹೆಮ್ಮೆಯ ವಿಚಾರ ಎಂದು ಶ್ಲಾಘಿಸಿದರು.
ಉದ್ಯಮಿ ಹಾಗೂ ಸಮಾಜ ಸೇವಕ ಎಡಿಕೇರಿ ಪ್ರಸನ್ನ ಮಾತನಾಡಿ, ಹಿಂದೂ ಮಲಯಾಳಿ ಸಮಾಜದ ಒಗ್ಗಟ್ಟು ಮತ್ತು ಸಂಘಟನೆ ಎಲ್ಲರಿಗೂ ಅನುಕರಣೀಯ ಮಾದರಿಯಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಂಟಿಕೊಪ್ಪ ಮಲಯಾಳಿ ಸಮಾಜದ ಅಧ್ಯಕ್ಷ ಕೆ.ಕೆ. ವಾಸುದೇವ ವಹಿಸಿದ್ದರು. ಸಮಾಜದ ಸ್ಥಾಪಕ ಅಧ್ಯಕ್ಷ ಪಿ.ಆರ್. ಸುಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ವೇದಿಕೆಯಲ್ಲಿ ಕೊಡಗು ಹಿಂದೂ ಮಲಯಾಳಿ ಸಮಾಜದ ಉಪಾಧ್ಯಕ್ಷ ಟಿ.ಕೆ. ಸುಧೀರ್, ಪ್ರಧಾನ ಕಾರ್ಯದರ್ಶಿ ಉಣ್ಣಿಕೃಷ್ಣನ್, ಕಾನೂನು ಸಲಹೆಗಾರ ಟಿ.ಆರ್. ವಾಸುದೇವ, ಸುಂಟಿಕೊಪ್ಪ ಮಲಯಾಳಿ ಸಮಾಜದ ಅಧ್ಯಕ್ಷರುಗಳಾದ ಪಿ.ಸಿ. ಮೋಹನ್, ವಿ.ಎ. ಸಂತೋಷ್, ರಮೇಶ್ ಪಿಳ್ಳೆ, ಮೂರ್ನಾಡು ಹಿಂದೂ ಮಲಯಾಳಿ ಸಮಾಜದ ಅಧ್ಯಕ್ಷ ಬಾಬು, ಸುಂಟಿಕೊಪ್ಪ ಮಲಯಾಳಿ ಸಮಾಜದ ಮಹಿಳಾ ವಿಭಾಗದ ಅಧ್ಯಕ್ಷೆ ಶೈಜಾ, ಸುಂಟಿಕೊಪ್ಪ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷ ಪಿ.ಆರ್. ಸುನಿಲ್ ಕುಮಾರ್ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿ.ಜಿ. ಲೋಕೇಶ್ ಉಪಸ್ಥಿತರಿದ್ದರು.
ಆಶ್ವಿಧಿ ಕಮಲಹಸಾನ್ ಪ್ರಾರ್ಥಿಸಿದರು. ಚಿತ್ರ ಸುರೇಶ್ ಸ್ವಾಗತಿಸಿದರು. ಜ್ಯೋತಿ ಕಾರ್ಯಕ್ರಮ ನಿರೂಪಿಸಿದರು.

















