ಮಡಿಕೇರಿ, NEWS DESK ಅ. 15: ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯನ್ನು ವಿರೋಧಿಸಿ ಕೊಡಗು ಜಿಲ್ಲೆಯಲ್ಲಿ ಪ್ರತಿಭಟನೆ ನಡೆಸುವ ಪ್ರಯತ್ನದ ಮೂಲಕ ಶಾಂತಿ ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಪೊಲೀಸ್ ಇಲಾಖೆ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು ಎಂದು ಬಿಜೆಪಿ ವಿರಾಜಪೇಟೆ ಮಂಡಲದ ವಕ್ತಾರ ಚೆಪ್ಪುಡಿರ ರಾಕೇಶ್ ದೇವಯ್ಯ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕೊಡಗಿನಲ್ಲಿ ಮತದಾರರಲ್ಲದ ಪ್ರಕಾಶ್ ರಾಜ್ ಅವರು ಜಿಲ್ಲೆಯಲ್ಲಿ ಪ್ರತಿಭಟನೆಗೆ ಕರೆ ನೀಡಿರುವುದರ ಔಚಿತ್ಯವನ್ನು ಪ್ರಶ್ನಿಸಿದ್ದಾರೆ. ಪ್ರತಿಭಟನೆಯ ಹಿಂದೆ ಜಿಲ್ಲೆಯ ಶಾಂತಿಯನ್ನು ಕದಡುವ ಉದ್ದೇಶವಿದೆಯೇ ಎಂಬುದನ್ನು ಪೊಲೀಸ್ ಇಲಾಖೆ ಪರಿಶೀಲಿಸಬೇಕು. ಅಲ್ಲದೆ, ಈ ಪ್ರತಿಭಟನೆಗೆ ಕೊಡಗು ಜಿಲ್ಲೆಯ ಶಾಸಕರ ಬೆಂಬಲವಿದೆಯೇ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ಎಸ್ಐಆರ್ ಹೊಸ ಪ್ರಕ್ರಿಯೆಯಲ್ಲ
ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಪ್ರಕ್ರಿಯೆ ಇದೇ ಮೊದಲ ಬಾರಿಗೆ ನಡೆಯುತ್ತಿರುವುದಲ್ಲ. 1952ರಲ್ಲಿ ಆರಂಭವಾದ ಈ ಪ್ರಕ್ರಿಯೆ ಕಾಂಗ್ರೆಸ್ ಆಡಳಿತದ ಅವಧಿಯಲ್ಲಿಯೂ ಹಲವು ಬಾರಿ ನಡೆದಿತ್ತು. ಆಗ ವಿರೋಧ ವ್ಯಕ್ತಪಡಿಸದ ಕಾಂಗ್ರೆಸ್ ನಾಯಕರು ಈಗ ಆಕ್ಷೇಪ ವ್ಯಕ್ತಪಡಿಸುತ್ತಿರುವುದೇಕೆ ಎಂದು ರಾಕೇಶ್ ದೇವಯ್ಯ ಪ್ರಶ್ನಿಸಿದ್ದಾರೆ.
ಎಸ್ಐಆರ್ ಕುರಿತು ಯಾವುದೇ ಆಧಾರಗಳಿಲ್ಲದೆ ಅನಗತ್ಯ ಗೊಂದಲ ಸೃಷ್ಟಿಸಲಾಗುತ್ತಿದೆ ಎಂದು ಆರೋಪಿಸಿರುವ ಅವರು, ಪ್ರಕ್ರಿಯೆಯಲ್ಲಿ ಲೋಪದೋಷಗಳಿದ್ದರೆ ನ್ಯಾಯಾಲಯದ ಮೊರೆ ಹೋಗಿ ಪರಿಹಾರ ಪಡೆದುಕೊಳ್ಳಬಹುದು ಎಂದು ತಿಳಿಸಿದ್ದಾರೆ.
ನಮೂನೆ 7ರ ಕುರಿತು ಸ್ಪಷ್ಟನೆ ಅಗತ್ಯ
ಮತದಾರರ ಪಟ್ಟಿ ಪರಿಷ್ಕರಣೆ ಸಂದರ್ಭದಲ್ಲಿ ನಮೂನೆ 7 ಸಲ್ಲಿಸುವುದನ್ನು ಕಾಂಗ್ರೆಸ್ ನಾಯಕರು ವಿರೋಧಿಸುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಅವರು, ಈ ನಮೂನೆಗೆ ಬಿಜೆಪಿ ಬೂತ್ ಮಟ್ಟದ ಏಜೆಂಟರು ಮಾತ್ರ ಸಹಿ ಹಾಕುತ್ತಾರೆಯೇ ಅಥವಾ ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ನಡೆಸುವುದಿಲ್ಲವೇ ಎಂಬುದನ್ನು ಕಾಂಗ್ರೆಸ್ ನಾಯಕರು ತಿಳಿದುಕೊಳ್ಳಬೇಕು ಎಂದಿದ್ದಾರೆ.
ಮತದಾರರ ಪಟ್ಟಿಯಲ್ಲಿ ನಮೂನೆ 7 ಸಲ್ಲಿಸಿದ ತಕ್ಷಣವೇ ಸಂಬಂಧಪಟ್ಟ ವ್ಯಕ್ತಿಯ ಮತದಾನದ ಹಕ್ಕು ರದ್ದಾಗುವುದಿಲ್ಲ. ಮತದಾರರು ನಮೂದಿಸಿರುವ ವಿಳಾಸದಲ್ಲಿ ವಾಸವಿಲ್ಲದಿರುವುದು ಅಥವಾ ಒಂದಕ್ಕಿಂತ ಹೆಚ್ಚು ಕಡೆ ಮತದಾರರ ನೋಂದಣಿ ಹೊಂದಿರುವ ಸಾಧ್ಯತೆಗಳಿದ್ದರೆ, ಅಂತಹ ವಿಚಾರಗಳನ್ನು ಪರಿಶೀಲಿಸುವುದು ಪರಿಷ್ಕರಣೆಯ ಉದ್ದೇಶವಾಗಿದೆ ಎಂದು ಹೇಳಿದ್ದಾರೆ.
ನಮೂನೆ 7 ಸಲ್ಲಿಕೆಯ ನಂತರವೂ ಸಂಬಂಧಪಟ್ಟ ಮತದಾರರಿಗೆ ತಮ್ಮ ಹೆಸರಿನ ಕುರಿತು ಆಕ್ಷೇಪಣೆ ಸಲ್ಲಿಸಲು ಹಾಗೂ ಸೂಕ್ತ ದಾಖಲೆಗಳನ್ನು ಒದಗಿಸಲು ಅವಕಾಶವಿದೆ. ಹೀಗಿರುವಾಗ, ನಮೂನೆ 7 ಸಲ್ಲಿಕೆಯನ್ನು ಮತದಾನದ ಹಕ್ಕು ಕಸಿದುಕೊಳ್ಳುವ ಕ್ರಮವೆಂದು ಬಿಂಬಿಸುವುದು ಸರಿಯಲ್ಲ ಎಂದು ರಾಕೇಶ್ ದೇವಯ್ಯ ಅಭಿಪ್ರಾಯಪಟ್ಟಿದ್ದಾರೆ.
ಪೊಲೀಸ್ ಇಲಾಖೆಯ ಗೌರವ ಕಾಪಾಡಬೇಕು
ದೆಹಲಿಯಲ್ಲಿ ಪೊಲೀಸ್ ಅಧಿಕಾರಿಗಳೊಂದಿಗೆ ಅನುಚಿತವಾಗಿ ವರ್ತಿಸಿರುವ ಘಟನೆಗಳನ್ನು ಉಲ್ಲೇಖಿಸಿರುವ ಅವರು, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಪೊಲೀಸ್ ಇಲಾಖೆಯ ಬಗ್ಗೆ ಪ್ರತಿಯೊಬ್ಬರೂ ಗೌರವ ಹೊಂದಿರಬೇಕು ಎಂದು ಹೇಳಿದ್ದಾರೆ.
ಕೊಡಗು ಜಿಲ್ಲೆಯಲ್ಲಿರುವ ಶಾಂತಿಯುತ ವಾತಾವರಣವನ್ನು ಕಾಪಾಡುವುದು ಎಲ್ಲರ ಜವಾಬ್ದಾರಿಯಾಗಿದೆ. ಪ್ರತಿಭಟನೆಯ ಹೆಸರಿನಲ್ಲಿ ಅಶಾಂತಿ ಸೃಷ್ಟಿಸುವ ಉದ್ದೇಶದಿಂದ ಯಾರಾದರೂ ಜಿಲ್ಲೆಗೆ ಆಗಮಿಸುತ್ತಿದ್ದಾರೆಯೇ ಎಂಬುದನ್ನು ಪೊಲೀಸ್ ಇಲಾಖೆ ಪರಿಶೀಲಿಸಬೇಕು. ಜಿಲ್ಲೆಯ ಶಾಂತಿ ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ರಾಕೇಶ್ ದೇವಯ್ಯ ಮನವಿ ಮಾಡಿದ್ದಾರೆ.
















