ಮಡಿಕೇರಿ, NEWS DESK ಅ.24: ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನೀಡುವ ಪ್ರತಿಷ್ಠಿತ ದಿ. ಬಿ.ಎಸ್. ಗೋಪಾಲಕೃಷ್ಣ ದತ್ತಿ ಪ್ರಶಸ್ತಿಯನ್ನು ‘ರಾಜಕೀಯ ಮತ್ತು ಪ್ರಕೃತಿ’ ಪುಸ್ತಕದ ಕರ್ತೃ, ಸಾಹಿತಿ ಬಾಳೆಯಡ ಕಿಶನ್ ಪೂವಯ್ಯ ಅವರಿಗೆ ನಗರದ ಪತ್ರಿಕಾ ಭವನದ ಸಭಾಂಗಣದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಪ್ರದಾನ ಮಾಡಲಾಯಿತು.
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕೊಡಗು ಪತ್ರಕರ್ತರ ಸಂಘದ ಸಂಯುಕ್ತ ಆಶ್ರಯದಲ್ಲಿ ನಡೆದ ಸಮಾರಂಭದಲ್ಲಿ, ದಿ. ಬಿ.ಎಸ್. ಗೋಪಾಲಕೃಷ್ಣ ಅವರ ಪುತ್ರ ಹಾಗೂ ಹಿರಿಯ ಪತ್ರಕರ್ತ ಜಿ. ರಾಜೇಂದ್ರ ಅವರು ಅತಿಥಿ ಗಣ್ಯರ ಉಪಸ್ಥಿತಿಯಲ್ಲಿ ಕಿಶನ್ ಪೂವಯ್ಯ ಅವರಿಗೆ ದತ್ತಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು.
ಸಮಾಜ ಸುಧಾರಣೆಗೆ ಪೂರಕವಾದ ಬರಹಗಳು ಮೂಡಿಬರಲಿ
ಈ ಸಂದರ್ಭದಲ್ಲಿ ಮಾತನಾಡಿದ ಜಿ. ರಾಜೇಂದ್ರ ಅವರು, ಸಾಹಿತಿ ಬಾಳೆಯಡ ಕಿಶನ್ ಪೂವಯ್ಯ ಅವರು ಸಾಹಿತ್ಯ ಕ್ಷೇತ್ರದಲ್ಲಿ ಮಾದರಿ ವ್ಯಕ್ತಿಯಾಗಿದ್ದು, ಸಮಾಜದ ಅಂಕುಡೊಂಕುಗಳ ಕುರಿತು ಪ್ರಖರವಾದ ಲೇಖನಗಳನ್ನು ನಿರಂತರವಾಗಿ ಬರೆಯುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಇಂದಿನ ಬದಲಾದ ಪರಿಸ್ಥಿತಿಯಲ್ಲಿ ಸಮಾಜದ ಸುಧಾರಣೆಗೆ ಪೂರಕವಾದ ಬರಹಗಳು ಕಿಶನ್ ಪೂವಯ್ಯ ಅವರಿಂದ ಇನ್ನಷ್ಟು ಹೆಚ್ಚಾಗಿ ಮೂಡಿಬರಲಿ ಎಂದು ಹಾರೈಸಿದರು.
ಮಾದಕ ವಸ್ತುಗಳಿಂದ ದೂರವಿರಿ, ಹಿರಿಯರನ್ನು ಗೌರವಿಸಿ
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಬಾಳೆಯಡ ಕಿಶನ್ ಪೂವಯ್ಯ ಅವರು, ಇಂದಿನ ಯುವಪೀಳಿಗೆ ಮಾದಕ ವಸ್ತುಗಳ ದಾಸರಾಗುತ್ತಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದರು. ಯುವ ಸಮೂಹ ದುಶ್ಚಟಗಳಿಂದ ದೂರವಿರುವುದರ ಜೊತೆಗೆ ತಂದೆ-ತಾಯಂದಿರೊಂದಿಗೆ ಎದುರುಮಾತನಾಡದೆ, ಅವರನ್ನು ಗೌರವಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ಸಮಾಜದ ಎಲ್ಲ ಸ್ತರಗಳ ಜನರು ಮೌಲ್ಯಗಳಿಂದ ದೂರವಾಗುತ್ತಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ ಅವರು, ಸಮಾಜದಲ್ಲಿ ಆಳವಾಗಿ ಬೇರೂರಿರುವ ಭ್ರಷ್ಟಾಚಾರದ ವಿರುದ್ಧ ಬರಹಗಳ ಮೂಲಕ ತಮ್ಮ ಹೋರಾಟವನ್ನು ಮುಂದುವರಿಸಿರುವುದಾಗಿ ತಿಳಿಸಿದರು. ಮಕ್ಕಳು ಇಂತಹ ಸಾಮಾಜಿಕ ವಿಚಾರಗಳತ್ತ ಗಮನ ಹರಿಸಬೇಕು. ಅವರಲ್ಲಿ ಓದುವ ಹವ್ಯಾಸ ಬೆಳೆಸಲು ಪ್ರತಿಯೊಬ್ಬರೂ ಪ್ರಯತ್ನಿಸಬೇಕು ಎಂದು ಆಶಿಸಿದರು.
ಯುವ ಸಮೂಹದಲ್ಲಿ ಸಾಮಾಜಿಕ ಪ್ರಜ್ಞೆ ಮೂಡುತ್ತಿರುವುದು ಆಶಾದಾಯಕ
ಸಮಾರಂಭವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದ ತ್ರಿಭಾಷಾ ಸಾಹಿತಿ ಮೊಣ್ಣಂಡ ಶೋಭಾ ಸುಬ್ಬಯ್ಯ ಅವರು ಮಾತನಾಡಿ, ದಿ. ಬಿ.ಎಸ್. ಗೋಪಾಲಕೃಷ್ಣ ಅವರಲ್ಲಿ ಪ್ರಾಮಾಣಿಕತೆ, ಜನಪರ ಕಾಳಜಿ ಮತ್ತು ವೈಚಾರಿಕ ಮನೋಭಾವಗಳನ್ನು ಕಾಣಬಹುದಾಗಿತ್ತು ಎಂದು ಸ್ಮರಿಸಿದರು.
ಹಿಂದಿನ ಕಾಲಘಟ್ಟಕ್ಕೆ ಹೋಲಿಸಿದರೆ ಇಂದಿನ ದಿನಗಳಲ್ಲಿ ಭ್ರಷ್ಟಾಚಾರ ಎಲ್ಲೆ ಮೀರಿದೆ. ಆದರೂ ಯುವ ಸಮುದಾಯದಲ್ಲಿ ಸಾಮಾಜಿಕ ಪ್ರಜ್ಞೆ ಕಂಡುಬರುತ್ತಿರುವುದು ಆಶಾದಾಯಕವಾಗಿದೆ ಎಂದು ಅಭಿಪ್ರಾಯಪಟ್ಟರು. ಅಂದಿನ ದಿನಗಳಲ್ಲಿ “ತಾರು ರಸ್ತೆಗೆ ತಾರನ್ನೇ ಹಾಕಲಾಗುತ್ತಿತ್ತು” ಎಂದು ಹೇಳುವ ಮೂಲಕ ಇಂದಿನ ಪರಿಸ್ಥಿತಿಯೊಂದಿಗೆ ಅಂದಿನ ಕಾಲವನ್ನು ಮಾರ್ಮಿಕವಾಗಿ ಹೋಲಿಸಿದರು.
ಕೃತಿಯಲ್ಲಿ 27 ಲೇಖನಗಳು
ಪುಸ್ತಕದ ಕುರಿತು ಮಾತನಾಡಿದ ಹಿರಿಯ ಪತ್ರಕರ್ತ ಟಿ.ಪಿ. ರಮೇಶ್ ಅವರು, ದಿ. ಬಿ.ಎಸ್. ಗೋಪಾಲಕೃಷ್ಣ ಅವರ ಹೆಸರಿನಲ್ಲಿ ಅವರ ಪುತ್ರ ಬಿ.ಜಿ. ಅನಂತಶಯನ ಅವರು ಈ ದತ್ತಿಯನ್ನು ಸ್ಥಾಪಿಸಿದ್ದಾರೆ ಎಂದು ತಿಳಿಸಿದರು. ಪುರುಷ ಸಾಹಿತಿಗಳ ಕನ್ನಡ ಕೃತಿಯನ್ನು ಆಯ್ಕೆ ಮಾಡಿ ಪ್ರಶಸ್ತಿ ನೀಡುವ ಉದ್ದೇಶದಿಂದ ಮೊದಲಿಗೆ 50 ಸಾವಿರ ರೂ. ಹಾಗೂ ನಂತರ ಮತ್ತೆ 50 ಸಾವಿರ ರೂ. ಸೇರಿಸಿ ಒಟ್ಟು ಒಂದು ಲಕ್ಷ ರೂ. ಮೊತ್ತದ ದತ್ತಿಯನ್ನು ಸ್ಥಾಪಿಸಲಾಗಿದೆ ಎಂದರು.
ಬಾಳೆಯಡ ಕಿಶನ್ ಪೂವಯ್ಯ ಅವರ ‘ರಾಜಕೀಯ ಮತ್ತು ಪ್ರಕೃತಿ’ ಕೃತಿಯಲ್ಲಿ 27 ಲೇಖನಗಳಿದ್ದು, ಬಹುತೇಕ ಲೇಖನಗಳು ರಾಜಕೀಯ ವಿಚಾರಧಾರೆಯನ್ನು ಒಳಗೊಂಡಿವೆ. ಜೊತೆಗೆ ಜಿಲ್ಲೆಯ ಪ್ರಕೃತಿ ಮತ್ತು ಪರಿಸರದ ಬಗ್ಗೆಯೂ ಓದುಗರ ಗಮನ ಸೆಳೆಯುತ್ತವೆ ಎಂದು ಹೇಳಿದರು.
ದತ್ತಿ ಪ್ರಶಸ್ತಿಗೆ ಭಾಜನರಾದ ಮೂರನೇ ಸಾಹಿತಿ
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್ ಅವರು, ದಿ. ಬಿ.ಎಸ್. ಗೋಪಾಲಕೃಷ್ಣ ದತ್ತಿ ಪ್ರಶಸ್ತಿಯನ್ನು ಈ ಹಿಂದೆ ಸಾಹಿತಿ ನಾಗೇಶ್ ಕಾಲೂರು ಮತ್ತು ಡಾ. ಸೂರ್ಯಕುಮಾರ್ ಅವರಿಗೆ ಪ್ರದಾನ ಮಾಡಲಾಗಿದೆ. ಕಿಶನ್ ಪೂವಯ್ಯ ಅವರು ಈ ಪ್ರಶಸ್ತಿಗೆ ಭಾಜನರಾದ ಮೂರನೇ ಸಾಹಿತಿಯಾಗಿದ್ದಾರೆ ಎಂದು ತಿಳಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಪ್ರಸ್ತುತ 45 ದತ್ತಿಗಳಿದ್ದು, ಅವುಗಳ ಮೂಲಕ ಸಾಹಿತ್ಯಪರ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ರಾಜ್ಯಾದ್ಯಂತ ಕನ್ನಡ ಸಾಹಿತ್ಯ ಪರಿಷತ್ತು ಮೂರು ಸಾವಿರಕ್ಕೂ ಹೆಚ್ಚು ದತ್ತಿಗಳನ್ನು ಹೊಂದಿದೆ ಎಂದು ಮಾಹಿತಿ ನೀಡಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಅನಿಲ್ ಹೆಚ್.ಟಿ. ಅವರು ಮಾತನಾಡಿ, ಸಮಾಜದ ಅಂಕುಡೊಂಕುಗಳ ವಿರುದ್ಧದ ಕಿಚ್ಚು ಕಿಶನ್ ಪೂವಯ್ಯ ಅವರಲ್ಲಿದ್ದು, ಅದು ಅವರ ಲೇಖನಗಳ ರೂಪದಲ್ಲಿ ಹೊರಹೊಮ್ಮಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಪತ್ರಿಕಾ ಭವನದ ಮುಂಭಾಗದ ರಸ್ತೆಗೆ ದಿ. ಬಿ.ಎಸ್. ಗೋಪಾಲಕೃಷ್ಣ ಅವರ ಹೆಸರನ್ನಿಡುವ ಮಹತ್ವದ ಮತ್ತು ಹೆಮ್ಮೆಯ ಕಾರ್ಯವನ್ನು ಸಂಘದ ವತಿಯಿಂದ ಒಂದು ವರ್ಷದ ಹಿಂದೆ ಮಾಡಲಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಸನ್ಮಾನ
ಇದೇ ಸಂದರ್ಭದಲ್ಲಿ ದಿ. ಬಿ.ಎಸ್. ಗೋಪಾಲಕೃಷ್ಣ ಅವರ ಪುತ್ರ ಜಿ. ರಾಜೇಂದ್ರ ಮತ್ತು ಸಾಹಿತಿ ಮೊಣ್ಣಂಡ ಶೋಭಾ ಸುಬ್ಬಯ್ಯ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ವೇದಿಕೆಯಲ್ಲಿ ಸವಿತಾ ಕಿಶನ್ ಪೂವಯ್ಯ ಉಪಸ್ಥಿತರಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರು ನಾಡಗೀತೆಯನ್ನು ಪ್ರಸ್ತುತಪಡಿಸಿದರು. ಉದ್ಘಾಟಕರ ಮತ್ತು ಸನ್ಮಾನಿತರ ಪರಿಚಯವನ್ನು ಎಸ್.ಜಿ. ಉಮೇಶ್ ಹಾಗೂ ಪುದಿಯನೆರವನ ರೇವತಿ ರಮೇಶ್ ಮಾಡಿದರು.
ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಅನಿಲ್ ಹೆಚ್.ಟಿ. ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

















