ಮಡಿಕೇರಿ, NEWS DESK ಅ. 24: ಯೋಗ ಪ್ರದರ್ಶನದಲ್ಲಿ 18 ದಾಖಲೆಗಳನ್ನು ಮಾಡಿರುವ ಮದೆನಾಡಿನ ಯುವ ಯೋಗಸಾಧಕಿ ಸಿಂಚನಾ ಅವರು, ಶಾಲಾ ವಿದ್ಯಾರ್ಥಿಗಳಿಗೆ ಯೋಗದ ಮಹತ್ವ ತಿಳಿಸುವ ಉದ್ದೇಶದಿಂದ ‘ಯೋಗಸಿಂಚನಾ’ ಎಂಬ ವಿನೂತನ ಕಾರ್ಯಕ್ರಮವನ್ನು ಪ್ರಾರಂಭಿಸಿದ್ದಾರೆ.
ಸಿಂಚನಾ ಅವರು ಪ್ರಾಥಮಿಕ ಶಿಕ್ಷಣ ಪಡೆದ ಮದೆನಾಡು ವ್ಯಾಪ್ತಿಯ ಬೆಳಕುಮಾನಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ‘ಯೋಗಸಿಂಚನಾ’ ಯೋಜನೆಗೆ ಚಾಲನೆ ನೀಡಲಾಯಿತು.
ಶಾಲೆಯ ಮುಖ್ಯಶಿಕ್ಷಕಿ ಭಾಗ್ಯಲಕ್ಷ್ಮಿ, ಶಿವರಾಮ್, ದೇವರಕೊಲ್ಲಿಯ ಶ್ರೀ ಚಾಮುಂಡೇಶ್ವರಿ ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಯಶೋಧರ ಹಾಗೂ ನಿವೃತ್ತ ಶಿಕ್ಷಕ ಶಿವರಾಮ್ ಅವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಬಳಿಕ ಸಿಂಚನಾ ಅವರು ಯೋಗಮಂತ್ರದ ಅರ್ಥ, ಅಷ್ಟಾಂಗ ಯೋಗ, ಆಸನಗಳನ್ನು ಮಾಡುವಾಗ ಪಾಲಿಸಬೇಕಾದ ನಿಯಮಗಳು ಹಾಗೂ ಮಕ್ಕಳಿಗೆ ಯೋಗವಿದ್ಯೆಯಿಂದ ಆಗುವ ಪ್ರಯೋಜನಗಳ ಕುರಿತು ಮಾಹಿತಿ ನೀಡಿದರು. ಸರಳ ವ್ಯಾಯಾಮಗಳು, ಸೂರ್ಯ ನಮಸ್ಕಾರ, ಸೂರ್ಯ ನಮಸ್ಕಾರದ ಮಂತ್ರ, 12 ಆಸನಗಳ ಹೆಸರುಗಳು ಹಾಗೂ ಉಸಿರಾಟದ ಕ್ರಮವನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಿದರು.
ಇದೇ ಸಂದರ್ಭದಲ್ಲಿ ಸಿಂಚನಾ ಅವರು ಕಲಾತ್ಮಕ ಯೋಗನೃತ್ಯ ಪ್ರದರ್ಶನ ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.
ಸಿಂಚನಾ ಅವರ ಪೋಷಕರಾದ ಕೀರ್ತಿಕುಮಾರ್ ಮತ್ತು ರೇಣುಕಾ, ಶಾಲೆಯ ಸಹಾಯಕ ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿ, ಆಡಳಿತ ಮಂಡಳಿ ಸದಸ್ಯರು, ಶಾಲಾ ಮಕ್ಕಳು, ಅಂಗನವಾಡಿ ಶಿಕ್ಷಕರು ಮತ್ತು ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

















