ಮಡಿಕೇರಿ, NEWS DESK ಅ. 24: ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲೆಯ ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ಸಾಹಿತ್ಯಿಕ ಬೆಳವಣಿಗೆಯನ್ನು ಉತ್ತೇಜಿಸುವ ಉದ್ದೇಶದಿಂದ ವಿವಿಧ ಸಾಹಿತ್ಯಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಇದರ ಅಂಗವಾಗಿ 2026-27ನೇ ಸಾಲಿನಲ್ಲಿ ಎರಡು ದತ್ತಿಗಳ ಆಶಯದಂತೆ ಪದವಿ ಹಾಗೂ ಪದವಿ ಪೂರ್ವ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆಗಳನ್ನು ನಡೆಸಲಾಯಿತು.
ಟಿ. ಶೆಟ್ಟಿಗೇರಿಯ ಕೈಬುಲಿರ ಪಾರ್ವತಿ ಬೋಪಯ್ಯ ಅವರು ತಮ್ಮ ಪತಿ ದಿವಂಗತ ಕೈಬುಲಿರ ಬೋಪಯ್ಯ ಅವರ ಸ್ಮರಣಾರ್ಥ ಸ್ಥಾಪಿಸಿರುವ ದತ್ತಿಯ ಆಶಯದಂತೆ ನಡೆದ ಪ್ರಬಂಧ ಸ್ಪರ್ಧೆಯಲ್ಲಿ ಮೂರ್ನಾಡಿನ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಜಗದೀಶ್ ಟಿ.ಎ. ಪ್ರಥಮ ಸ್ಥಾನ ಗಳಿಸಿದ್ದಾರೆ. ಕುಶಾಲನಗರದ ಮೂಕಾಂಬಿಕಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಯಾಶಿತಾ ಎ. ದ್ವಿತೀಯ ಸ್ಥಾನ ಹಾಗೂ ಶ್ರೀಮಂಗಲ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಶೋಭಾ ಪಿ.ಎಂ. ತೃತೀಯ ಸ್ಥಾನ ಪಡೆದಿದ್ದಾರೆ.
ಇದೇ ರೀತಿ, ಕೊಡ್ಲಿಪೇಟೆ ಸಮೀಪದ ಬೆಸೂರು ಗ್ರಾಮದ ಶಿಕ್ಷಕಿ ಸ್ನೇಹ ಬಸಮ್ಮ ಅವರು ತಮ್ಮ ತಂದೆ-ತಾಯಿ ದಿವಂಗತ ಗಂಗಮ್ಮ ಮತ್ತು ರಾಚಪ್ಪ ಅವರ ಸ್ಮರಣಾರ್ಥ ಸ್ಥಾಪಿಸಿರುವ ದತ್ತಿಯ ಆಶಯದಂತೆ ಕನ್ನಡದ ಮೇರು ಸಾಹಿತ್ಯಗಳ ಕುರಿತು ಪ್ರಬಂಧ ಸ್ಪರ್ಧೆ ಆಯೋಜಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ಮಾದಾಪುರದ ಬಿ. ಚೆನ್ನಮ್ಮ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಜೆಸಿಂತಾ ಪಿ.ಜೆ. ಪ್ರಥಮ ಸ್ಥಾನ ಗಳಿಸಿದ್ದಾರೆ. ಇದೇ ಕಾಲೇಜಿನ ವಿದ್ಯಾರ್ಥಿನಿ ಸಜೀನ ದ್ವಿತೀಯ ಸ್ಥಾನ ಪಡೆದರೆ, ಗೋಣಿಕೊಪ್ಪಲಿನ ಕಾವೇರಿ ಕಾಲೇಜಿನ ವಿದ್ಯಾರ್ಥಿನಿ ಛಾಯಾದೇವಿ ಎಸ್.ಎನ್. ತೃತೀಯ ಸ್ಥಾನ ಗಳಿಸಿದ್ದಾರೆ.
ಎರಡೂ ದತ್ತಿ ಪ್ರಬಂಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಮುಂದಿನ ದಿನಗಳಲ್ಲಿ ನಡೆಯಲಿರುವ ಉಪನ್ಯಾಸ ಕಾರ್ಯಕ್ರಮದಲ್ಲಿ ನಗದು ಬಹುಮಾನ, ಪ್ರಶಂಸಾ ಪತ್ರ ಹಾಗೂ ನೆನಪಿನ ಕಾಣಿಕೆ ನೀಡಿ ಗೌರವಿಸಲಾಗುವುದು ಎಂದು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
















