ಮಡಿಕೇರಿ NEWS DESK ಅ.27 : ಬಿಜೆಪಿ ಪ್ರತಿಭಟನೆಯ ಸಂದರ್ಭ ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರ ಫ್ಲೆಕ್ಸ್ ನ್ನು ಹರಿದು ಹಾನಿಗೊಳಿಸಿದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮಡಿಕೇರಿ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಕವನ್ ಕೊತ್ತೋಳಿ ಒತ್ತಾಯಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಮಡಿಕೇರಿ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯ ಮುಂಭಾಗದಲ್ಲಿ ಅಳವಡಿಸಲಾಗಿದ್ದ ಶಾಸಕರ ಭಾವಚಿತ್ರವಿರುವ ಫ್ಲೆಕ್ಸ್ಗೆ ಹಾನಿ ಮಾಡಿರುವ ಘಟನೆ ಖಂಡನೀಯ. ಯಾವುದೇ ರಾಜಕೀಯ ಭಿನ್ನಾಭಿಪ್ರಾಯಗಳಿದ್ದರೂ ಸಾರ್ವಜನಿಕವಾಗಿ ಅಳವಡಿಸಿರುವ ಜನಪ್ರಿಯ ಶಾಸಕರ ಫ್ಲೆಕ್ಸ್ ನ್ನು ಹಾನಿಗೊಳಿಸುವುದು ಸರಿಯಾದ ಕ್ರಮವಲ್ಲ ಮತ್ತು ಇದು ಕೊಡಗಿನ ಸಂಸ್ಕೃತಿಯೂ ಅಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಂದು ರಾಜಕೀಯ ಪಕ್ಷಕ್ಕೂ ಪ್ರತಿಭಟನೆ ನಡೆಸುವ ಹಕ್ಕಿದೆ. ಆದರೆ, ಪ್ರತಿಭಟನೆಯ ಹೆಸರಿನಲ್ಲಿ ಮತ್ತೊಂದು ಪಕ್ಷದ ಕಚೇರಿಯ ಮುಂದೆ ಅಳವಡಿಸಿರುವ ಫ್ಲೆಕ್ಸ್ಗಳನ್ನು ಹರಿದು ಹಾನಿಗೊಳಿಸುವುದು ಮತ್ತು ರಾಜಕೀಯ ದ್ವೇಷವನ್ನು ಪ್ರದರ್ಶಿಸುವುದು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾಗಿದೆ ಎಂದು ತಿಳಿಸಿದ್ದಾರೆ. ಕಾಂಗ್ರೆಸ್ ಕಚೇರಿಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ, ಮುತ್ತಿಗೆ ಹಾಕುವ ಮೂಲಕ ಅಶಾಂತಿಯ ವಾತಾವರಣ ಸೃಷ್ಟಿಸುವ ಪ್ರವೃತ್ತಿಯನ್ನು ಬಿಜೆಪಿ ಮಂದಿ ಕೈಬಿಡಬೇಕು. ರಾಜಕೀಯ ವಿಚಾರಗಳಲ್ಲಿ ಭಿನ್ನಾಭಿಪ್ರಾಯಗಳಿದ್ದರೆ ಅವುಗಳನ್ನು ಕಾನೂನುಬದ್ಧವಾಗಿ ಮತ್ತು ಪ್ರಜಾಸತ್ತಾತ್ಮಕ ರೀತಿಯಲ್ಲಿ ವ್ಯಕ್ತಪಡಿಸಬೇಕು ಎಂದು ಕವನ್ ಕೊತ್ತೋಳಿ ಹೇಳಿದ್ದಾರೆ. ಶಾಸಕರ ಫ್ಲೆಕ್ಸ್ ಗೆ ಹಾನಿ ಮಾಡಿರುವ ಘಟನೆಗೆ ಸಂಬoಧಿಸಿದoತೆ ಪೊಲೀಸರು ಸೂಕ್ತ ತನಿಖೆ ನಡೆಸಿ, ತಪ್ಪಿತಸ್ಥರನ್ನು ಗುರುತಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

















