ಮಡಿಕೇರಿ NEWS DESK ಅ.27 : ಪ್ರತಿಭಟನೆಯ ನೆಪದಲ್ಲಿ ಬಿಜೆಪಿ ಕಾರ್ಯಕರ್ತರು ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರ ಫ್ಲೆಕ್ಸ್ ನ್ನು ಹರಿದು ಹಾನಿಗೊಳಿಸಿರುವುದು ಖಂಡನೀಯವೆoದು ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಕೆ.ಜಿ.ಪೀಟರ್ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಇತ್ತೀಚಿನ ದಿನಗಳಲ್ಲಿ ಪ್ರತಿಭಟನೆಯ ಹೆಸರಿನಲ್ಲಿ ಬಿಜೆಪಿ ಮಂದಿ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕುವ ಚಾಳಿಯನ್ನು ಮೈಗೂಡಿಸಿಕೊಂಡಿದ್ದಾರೆ. ಇದು ಹಾಸ್ಯಾಸ್ಪದ ಬೆಳವಣಿಗೆ ಮತ್ತು ಅತ್ಯಂತ ಕೀಳು ಮಟ್ಟದ ರಾಜಕಾರಣವಾಗಿದೆ ಎಂದು ಟೀಕಿಸಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟನೆ ನಡೆಸಲು ಪ್ರತಿಯೊಬ್ಬರಿಗೂ ಹಕ್ಕಿದೆ. ಆದರೆ ಕಾನೂನು ಉಲ್ಲಂಘಿಸಿ ಪ್ರತಿಭಟನೆ ನಡೆಸುವ, ಮುತ್ತಿಗೆ ಹಾಕುವ, ಜನಪ್ರಿಯ ಶಾಸಕರ ಫ್ಲೆಕ್ಸ್ ನ್ನು ಹರಿದು ಹಾನಿಗೊಳಿಸುವ ಪ್ರಕ್ರಿಯೆಗಳೆಲ್ಲವೂ ಬಿಜೆಪಿಯ ಹತಾಶ ಮನೋಭಾವಕ್ಕೆ ಸಾಕ್ಷಿಯಾಗಿದೆ. ವಿಧಾನಸಭೆಯ ಅಧ್ಯಕ್ಷರಾಗಿದ್ದವರು, ವಿಧಾನ ಪರಿಷತ್ ನ ಸದಸ್ಯರಾಗಿದ್ದವರು ತಮ್ಮ ಘನತೆಯನ್ನು ಮರೆತು ಇತರ ಪಕ್ಷಗಳ ಕಚೇರಿಗೆ ಲಗ್ಗೆ ಇಡುವ ಪ್ರಯತ್ನ ಮಾಡುವುದು ಖಂಡನೀಯ. ಕೊಡಗು ಶಾಂತಿ, ಸೌಹಾರ್ದತೆ ಮತ್ತು ಅತ್ಯಂತ ಸುಸಂಸ್ಕೃತ ರಾಜಕಾರಣಕ್ಕೆ ಹೆಸರುವಾಸಿಯಾಗಿದೆ. ಪಕ್ಷದ ಕಾರ್ಯಕರ್ತರಿಗೆ ಉತ್ತಮ ಮಾರ್ಗದರ್ಶನವನ್ನು ನೀಡಿ ಮುನ್ನಡೆಸಬೇಕಾದ ಹಿರಿಯರೇ ನಿಯಮ ಉಲ್ಲಂಘಿಸಿ ಪ್ರತಿಭಟನೆಯ ನೆಪದಲ್ಲಿ ಅಗೌರವದ ನಡೆಯನ್ನು ಪ್ರದರ್ಶಿಸುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.
ಶಾಸಕರ ಫ್ಲೆಕ್ಸ್ ನ್ನು ಹರಿದು ಹಾಕಿದ ಮತ್ತು ಪ್ರಚೋದನೆ ನೀಡಿದ ಬಿಜೆಪಿ ಮಂದಿಯ ವಿರುದ್ಧ ಪೊಲೀಸರು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ವಿನಾಕಾರಣ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕುವ ಬಿಜೆಪಿಯ ಪ್ರಯತ್ನವನ್ನು ವಿಫಲಗೊಳಿಸಬೇಕು ಎಂದು ಒತ್ತಾಯಿಸಿರುವ ಕೆ.ಜಿ.ಪೀಟರ್, ಪೊಲೀಸರು ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿ ರಾಜಕೀಯ ಸಂಘರ್ಷಕ್ಕೆ ಕಾರಣವಾಗಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.

















