ಮಡಿಕೇರಿ NEWS DESK ಅ.29 : ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ವತಿಯಿಂದ ಕೊಡವ ಪ್ರದೇಶದಾದ್ಯಂತ ಹಮ್ಮಿಕೊಳ್ಳಲಾಗುತ್ತಿರುವ ಶಾಂತಿಯುತ ಮಾನವ ಸರಪಳಿಯ 8ನೇ ಕಾರ್ಯಕ್ರಮ ನ.2 ರಂದು ಬೆಳಿಗ್ಗೆ 10.30 ಗಂಟೆಗೆ ಪೊನ್ನಂಪೇಟೆಯಲ್ಲಿ ನಡೆಯಲಿದೆ ಎಂದು ಸಿಎನ್ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರು ತಿಳಿಸಿದ್ದಾರೆ. ಕೊಡವಲ್ಯಾಂಡ್ ಗೆ ಭೌಗೋಳಿಕ-ರಾಜಕೀಯ ಸ್ವಾಯತ್ತತೆ ಹಾಗೂ ಸಂವಿಧಾನದ 244 ಮತ್ತು 371ನೇ ವಿಧಿಗಳು, ಐದನೇ ಮತ್ತು ಆರನೇ ಶೆಡ್ಯೂಲ್ಗಳ ಅಡಿಯಲ್ಲಿ ಸ್ವ-ಆಡಳಿತದ ಅವಕಾಶ ಕಲ್ಪಿಸಬೇಕು ಎಂಬುದು ಸಿಎನ್ಸಿಯ ಪ್ರಮುಖ ಬೇಡಿಕೆಯಾಗಿದೆ. ವಿಶ್ವಸಂಸ್ಥೆಯ ಮೂಲನಿವಾಸಿ ಹಕ್ಕುಗಳ ತತ್ವಗಳು ಮತ್ತು ಸಂವಿಧಾನದ ಅಡಿಯಲ್ಲಿ ಕೊಡವ ಜನಾಂಗಕ್ಕೆ ವಿಶೇಷ ಮಾನ್ಯತೆ ನೀಡಬೇಕು. ಕೊಡವರ ಪವಿತ್ರ ಗನ್-ತೋಕ್ ಆಚರಣೆಗೆ ಸಂವಿಧಾನದ 25, 26 ಮತ್ತು 28ನೇ ವಿಧಿಗಳ ಅಡಿಯಲ್ಲಿ ರಕ್ಷಣೆ ನೀಡಬೇಕು ಎಂದು ಜನಜಾಗೃತಿ ಕಾರ್ಯಕ್ರಮದಲ್ಲಿ ಒತ್ತಾಯಿಸಲಾಗುವುದು. ಕೊಡವ ಜನಾಂಗಕ್ಕೆ ಪ್ರತ್ಯೇಕ ಅಮೂರ್ತ ಲೋಕಸಭೆ ಮತ್ತು ವಿಧಾನಸಭಾ ಕ್ಷೇತ್ರಗಳನ್ನು ಕಲ್ಪಿಸುವುದು, ಕೊಡವತಕ್ಕ್ ಭಾಷೆಯನ್ನು ಸಂವಿಧಾನದ ಎಂಟನೇ ಶೆಡ್ಯೂಲ್ಗೆ ಸೇರಿಸುವುದು ಹಾಗೂ ಐತಿಹಾಸಿಕವಾಗಿ ವಶಪಡಿಸಿಕೊಳ್ಳಲಾದ ಕೊಡವರ ವಂಶಪಾರAಪರ್ಯ ಆಸ್ತಿಗಳನ್ನು ಮರಳಿ ಕೊಡವರಿಗೆ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಡಲಾಗುವುದು. 2027ರ ರಾಷ್ಟ್ರೀಯ ಜನಗಣತಿಯಲ್ಲಿ ಕೊಡವರಿಗೆ ಪ್ರತ್ಯೇಕ ಕೋಡ್ ಮತ್ತು ಕಾಲಮ್ ಕಲ್ಪಿಸಬೇಕು ಎಂಬುದು ಮತ್ತೊಂದು ಪ್ರಮುಖ ಆಗ್ರಹವಾಗಿದೆ. ಕೊಡವರ ಅಸ್ತಿತ್ವ, ಜನಾಂಗೀಯ ಗುರುತು, ಭೂಮಿ, ಭಾಷೆ, ಸಾಂಸ್ಕೃತಿಕ ಪರಂಪರೆ ಹಾಗೂ ಆರ್ಥಿಕ ಮತ್ತು ರಾಜಕೀಯ ಹಕ್ಕುಗಳ ರಕ್ಷಣೆಗಾಗಿ ಜನಗಣತಿ ಮತ್ತು ಜಾತಿ ಗಣತಿಯಲ್ಲಿ ಕೊಡವರನ್ನು ಪ್ರತ್ಯೇಕವಾಗಿ ದಾಖಲಿಸಬೇಕು ಎಂದು ಒತ್ತಾಯಿಸಲಾಗುವುದು. 1871-72ರಿಂದ 1941ರವರೆಗಿನ ಜನಗಣತಿಗಳಲ್ಲಿ ಕೊಡವರನ್ನು ಪ್ರತ್ಯೇಕ ಜನಾಂಗೀಯ ಸಮುದಾಯವಾಗಿ ದಾಖಲಿಸಲಾಗಿತ್ತು. 1941ರ ನಂತರ ಈ ಗುರುತನ್ನು ದೊಡ್ಡ ಸಮುದಾಯಗಳೊಂದಿಗೆ ವಿಲೀನಗೊಳಿಸಲಾಗಿದೆ. 1956ರ ರಾಜ್ಯಗಳ ಮರುಸಂಘಟನೆಯ ಸಂದರ್ಭದಲ್ಲಿ ಕೊಡಗು ಕರ್ನಾಟಕದೊಂದಿಗೆ ವಿಲೀನಗೊಂಡಿರುವುದು ಐತಿಹಾಸಿಕ ಗುರುತು ನಷ್ಟವೆಂದು ಎನ್.ಯು.ನಾಚಪ್ಪ ತಿಳಿಸಿದ್ದಾರೆ. ಕೊಡಗಿನ ಭೂಮಿಯನ್ನು ವಾಣಿಜ್ಯ ಉದ್ದೇಶಗಳಿಗಾಗಿ ಪರಿವರ್ತಿಸುವುದು, ಮೆಗಾ ಟೌನ್ಶಿಪ್ಗಳು, ಬೃಹತ್ ರೆಸಾರ್ಟ್ಗಳು ಮತ್ತು ಬಡಾವಣೆಗಳ ನಿರ್ಮಾಣಕ್ಕೆ ಅವಕಾಶ ನೀಡುವುದು ಕಾವೇರಿ ನದಿಯ ಮೂಲಗಳು, ಕಾಫಿ ತೋಟಗಳು, ಕೃಷಿಭೂಮಿ ಹಾಗೂ ನಿತ್ಯಹರಿದ್ವರ್ಣ ಅರಣ್ಯಗಳ ಮೇಲೆ ದುಷ್ಪರಿಣಾಮ ಬೀರಬಹುದು. ಈ ಬೆಳವಣಿಗೆಗಳು ಕೊಡಗಿನ ಜನಸಂಖ್ಯಾ ಮತ್ತು ಭೌಗೋಳಿಕ ಸ್ವರೂಪದ ಬದಲಾವಣೆಗೆ ಕಾರಣವಾಗುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಕೊಡವ ಜನಾಂಗದ ಅಸ್ತಿತ್ವ, ಭೂಮಿ, ಭಾಷೆ ಮತ್ತು ಸಾಂಸ್ಕೃತಿಕ ಪರಂಪರೆಯ ರಕ್ಷಣೆಗಾಗಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಮಾನವ ಸರಪಳಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಎನ್.ಯು.ನಾಚಪ್ಪ ತಿಳಿಸಿದ್ದಾರೆ.

















