ಮಡಿಕೇರಿ, NEWS DESK ಅ. 28: ಸಿದ್ದಾಪುರ ರಸ್ತೆಯಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಶತಮಾನೋತ್ಸವ ಭವನ ನಿರ್ಮಾಣ ಸಮಿತಿಯ ಕಾರ್ಯನಿರ್ವಹಣೆಯಲ್ಲಿನ ಲೋಪದೋಷಗಳ ಕುರಿತು ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಂಘಟನೆಗಳ ಒಕ್ಕೂಟ ಹಾಗೂ ಕೊಡಗು ಜಿಲ್ಲೆಯ ವಿವಿಧ ಪ್ರಗತಿಪರ ಸಂಘಟನೆಗಳು ನಡೆಸಿದ ಹೋರಾಟಕ್ಕೆ ಜಯ ದೊರೆತಿದೆ ಎಂದು ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಎಚ್.ಎಲ್. ದಿವಾಕರ್ ತಿಳಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2026ರ ಫೆಬ್ರವರಿ 10ರಂದು ಒಕ್ಕೂಟದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು. ಸಮಿತಿಯ ಕಾರ್ಯನಿರ್ವಹಣೆಯಲ್ಲಿನ ಲೋಪದೋಷಗಳ ಕುರಿತು ತನಿಖೆ ನಡೆಸಿ, ಆಡಳಿತ ಮಂಡಳಿಯನ್ನು ಪುನರ್ರಚಿಸಲು ಕಾನೂನುಬದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗಿತ್ತು ಎಂದರು.
ಹೋರಾಟದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಸಂಬಂಧಪಟ್ಟ ಅಧಿಕಾರಿಗಳಿಗೆ ತನಿಖೆ ನಡೆಸುವಂತೆ ಸೂಚಿಸಿದ್ದರು. ಅದರಂತೆ ಸಹಕಾರ ಸಂಘಗಳ ಉಪನಿಬಂಧಕರು ವಿಚಾರಣೆ ನಡೆಸಿ ವರದಿ ಸಲ್ಲಿಸಿದ್ದರು. ಸಂಘವು ಕಾಲಕಾಲಕ್ಕೆ ಲೆಕ್ಕಪತ್ರಗಳ ಪರಿಶೀಲನೆ ಮಾಡಿಸದಿರುವುದು ಹಾಗೂ ಬೈಲಾ ಪ್ರಕಾರ ನಿಗದಿತ ಅವಧಿಯಲ್ಲಿ ಚುನಾವಣೆ ನಡೆಸದಿರುವುದು ಸೇರಿದಂತೆ ಹಲವು ಆಡಳಿತಾತ್ಮಕ ಲೋಪದೋಷಗಳು ವಿಚಾರಣಾ ವರದಿಯಲ್ಲಿ ಕಂಡುಬಂದಿದ್ದವು ಎಂದು ತಿಳಿಸಿದರು.
ವಿಚಾರಣಾ ವರದಿಯನ್ನು ಪರಿಶೀಲಿಸಿದ ಬಳಿಕ ಸಮಿತಿಗೆ ಆಡಳಿತಾಧಿಕಾರಿಯನ್ನು ನೇಮಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಇದೀಗ ಸರ್ಕಾರವು ಡಾ. ಬಿ.ಆರ್. ಅಂಬೇಡ್ಕರ್ ಶತಮಾನೋತ್ಸವ ಭವನ ನಿರ್ಮಾಣ ಸಮಿತಿಗೆ ಆಡಳಿತಾಧಿಕಾರಿಯನ್ನು ನೇಮಿಸಿದೆ.
ಸಂಘದ ಆಡಳಿತದಲ್ಲಿ ಪಾರದರ್ಶಕತೆ ತರುವುದು ಹಾಗೂ ಸದಸ್ಯರ ಹಿತಾಸಕ್ತಿಯನ್ನು ಕಾಪಾಡುವ ಉದ್ದೇಶದಿಂದ ನಡೆಸಿದ ಹೋರಾಟಕ್ಕೆ ಈ ಆದೇಶ ಮಹತ್ವದ ಜಯವಾಗಿದೆ ಎಂದು ಎಚ್.ಎಲ್. ದಿವಾಕರ್ ಹರ್ಷ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಪ್ರೇಮಾ ಕೃಷ್ಣಪ್ಪ, ಗಾಯತ್ರಿ ನರಸಿಂಹನ್, ಕೆ.ಪಿ. ರಾಜು ಹಾಗೂ ದೇವರಾಜ್ ಉಪಸ್ಥಿತರಿದ್ದರು.

















