ಮಡಿಕೇರಿ, NEWS DESK ಅ. 31: ಕೊಡಗು ಜಿಲ್ಲಾ ಕುಲಾಲ ಕುಂಬಾರರ ಸಂಘ, ಯುವ ಘಟಕ, ಮಹಿಳಾ ಘಟಕ ಹಾಗೂ ಮಡಿಕೇರಿ ಬೀಡಿನ ಕುಲಾಲ ಕುಂಬಾರ ಬಾಂಧವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿರುವ ಕೊಡಗು ಕುಲಾಲ ಕುಂಬಾರರ ಚಾಂಪಿಯನ್ಸ್ ಲೀಗ್ ಕ್ರಿಕೆಟ್ ಪಂದ್ಯಾವಳಿ ಸೀಸನ್-2ಕ್ಕೆ ಮಾಯಾಮುಡಿ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಅದ್ದೂರಿ ಚಾಲನೆ ದೊರೆಯಿತು.
ಕರ್ನಾಟಕ ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಸಿ.ಎಸ್. ಅರುಣ್ ಮಾಚಯ್ಯ ಅವರು ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿ, ಕ್ರೀಡೆಯು ಸಮಾಜವನ್ನು ಒಗ್ಗೂಡಿಸುವ ಸುಂದರ ವೇದಿಕೆಯಾಗಿದೆ. ಇಂತಹ ಕ್ರೀಡಾಕೂಟಗಳನ್ನು ಎಲ್ಲರೂ ಸದುಪಯೋಗಪಡಿಸಿಕೊಳ್ಳಬೇಕು. ಕ್ರೀಡೆಯೊಂದಿಗೆ ಸರ್ಕಾರದ ವಿವಿಧ ಸೌಲಭ್ಯಗಳನ್ನು ಪಡೆದುಕೊಂಡು ಯುವಜನತೆ ಉನ್ನತ ಮಟ್ಟದ ಉದ್ಯೋಗಾವಕಾಶಗಳನ್ನು ಪಡೆಯಲು ಮುಂದಾಗಬೇಕು ಎಂದು ಕರೆ ನೀಡಿದರು.
ಕ್ರೀಡಾಕೂಟ ಆಯೋಜಿಸಿರುವ ಕೊಡಗು ಜಿಲ್ಲಾ ಕುಲಾಲ ಕುಂಬಾರರ ಸಂಘ ಹಾಗೂ ಮಡಿಕೇರಿ ಬೀಡಿನ ಕುಲಬಾಂಧವರಿಗೆ ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡಗು ಜಿಲ್ಲಾ ಕುಲಾಲ ಕುಂಬಾರರ ಸಂಘದ ಜಿಲ್ಲಾಧ್ಯಕ್ಷ ಲಯನ್ ದಾಮೋದರ್, ಸಮುದಾಯದ ಬಾಂಧವ್ಯವನ್ನು ವೃದ್ಧಿಸುವುದರ ಜೊತೆಗೆ ಕ್ರೀಡಾ ಪ್ರತಿಭೆಗಳಿಗೆ ಸೂಕ್ತ ವೇದಿಕೆ ಕಲ್ಪಿಸುವ ಉದ್ದೇಶದಿಂದ ಈ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ ಎಂದರು.
ಉದ್ಘಾಟನಾ ಸಮಾರಂಭದಲ್ಲಿ ಭಾಗಮಂಡಲ ತಲಕಾವೇರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಬಾನಂಡ ಪ್ರತ್ಯು, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಟಾಟು ಮುತ್ತಪ್ಪ, ಮಾಜಿ ಸದಸ್ಯರಾದ ಸಿ.ಕೆ. ಪ್ರದೀಪ್, ಎ.ಎಸ್. ನಾಚಯ್ಯ, ಮಾಯಾಮುಡಿ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಜಯಮ್ಮ, ಶಿಕ್ಷಕಿ ರಾಗಿಣಿ, ಸಂಘದ ಜಿಲ್ಲಾಧ್ಯಕ್ಷ ಲಯನ್ ದಾಮೋದರ್, ಪದಾಧಿಕಾರಿ ಚಿನ್ನಪ್ಪ, ಉಪಾಧ್ಯಕ್ಷ ಎಂ.ಡಿ. ಸುರೇಶ್ ಕುಲಾಲ್, ಖಜಾಂಚಿ ಕೆ.ಎಸ್. ಗಿರೀಶ್, ಯುವ ಘಟಕದ ಅಧ್ಯಕ್ಷ ಜೆ.ಪಿ. ಕುಲಾಲ್, ಉಪಾಧ್ಯಕ್ಷ ಪವನ್ ಕುಲಾಲ್, ಕ್ರೀಡಾಧ್ಯಕ್ಷ ಎಂ.ಡಿ. ಶಾಂತಕುಮಾರ್, ಸಂಘದ ಪದಾಧಿಕಾರಿ ಅಶ್ವತ್ ಮಡಿಕೇರಿ ಬೀಡು, ಮಡಿಕೇರಿ ಬೀಡಿನ ಕುಲಾಲ ಕುಂಬಾರ ಸಂಘದ ಅಧ್ಯಕ್ಷ ಶಿವ ಹಾಗೂ ಶ್ರೀ ಬಸವೇಶ್ವರ ಯುವಕ ಸಂಘದ ಅಧ್ಯಕ್ಷ ಶ್ರೀನಿವಾಸ್ ಸೇರಿದಂತೆ ಸಂಘದ ಪದಾಧಿಕಾರಿಗಳು ಮತ್ತು ಕುಲಬಾಂಧವರು ಉಪಸ್ಥಿತರಿದ್ದರು.
ಸಮಾರೋಪ ಸಮಾರಂಭ ಇಂದು
ನವೆಂಬರ್ 1ರಂದು ಸಂಜೆ 5 ಗಂಟೆಗೆ ಪಂದ್ಯಾವಳಿಯ ಸಮಾರೋಪ ಸಮಾರಂಭ ನಡೆಯಲಿದ್ದು, ಕೊಡಗು ಜಿಲ್ಲಾ ಕುಲಾಲ ಕುಂಬಾರರ ಸಂಘದ ಜಿಲ್ಲಾಧ್ಯಕ್ಷ ಲಯನ್ ದಾಮೋದರ್ ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ, ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ, ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.

















