ಮಡಿಕೇರಿ NEWS DESK ಅ.31 : ರಾಜ್ಯ ಕಾಂಗ್ರೆಸ್ ಸರಕಾರ ಅಧಿವೇಶನದಲ್ಲಿ ನೀಡಿದ ಭರವಸೆಯಂತೆ ರೈತರಿಗೆ ನೇರವಾಗಿ ಪರಿಹಾರ ನೀಡುವ ಬದಲು 17 ಷರತ್ತುಗಳನ್ನು ವಿಧಿಸಿರುವುದು ಖಂಡನೀಯ ಎಂದು ಕೊಡಗು ಜಿಲ್ಲಾ ಬಿಜೆಪಿ ವಕ್ತಾರ ತಳೂರು ಎ.ಕಿಶೋರ್ ಕುಮಾರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕಾಂಗ್ರೆಸ್ ಸರಕಾರದ ಆಡಳಿತ ಸಂಪೂರ್ಣವಾಗಿ ವೈಫಲ್ಯವನ್ನು ಕಂಡಿದ್ದು, ರೈತರು ಹಾಗೂ ಜನಸಾಮಾನ್ಯರ ಹಿತವನ್ನು ಕಡೆಗಣಿಸಲಾಗಿದೆ. ರಾಜ್ಯದಲ್ಲಿ ತೀವ್ರ ಬರ ಪರಿಸ್ಥಿತಿ ಇರುವ ಹಿನ್ನೆಲೆಯಲ್ಲಿ ಕಳೆದ ಅಧಿವೇಶನದಲ್ಲಿ ರೈತರಿಗೆ ಗರಿಷ್ಠ 2,500 ರೂ. ಪರಿಹಾರ ಘೋಷಿಸಲಾಗಿತ್ತು. ಅಲ್ಲದೆ, ಅಂದು ಡಿ.ಕೆ.ಶಿವಕುಮಾರ್ ಅವರು ರೈತರ ಪರವಾಗಿ ಇರುವುದಾಗಿ ಭರವಸೆ ನೀಡಿದ್ದರು. ಆದರೆ ಇಂದು ಪರಿಹಾರಕ್ಕೆ ಷರತ್ತುಗಳನ್ನು ವಿಧಿಸಲಾಗಿದ್ದು, ಇದು ರೈತ ವಿರೋಧಿ ಧೋರಣೆಯಾಗಿದೆ ಎಂದು ಟೀಕಿಸಿದ್ದಾರೆ. ರೈತರಿಗೆ ಯಾವುದೇ ಷರತ್ತುಗಳಿಲ್ಲದೆ ಪರಿಹಾರ ನೀಡಲು ಸರಕಾರ ಹಿಂದೇಟು ಹಾಕುತ್ತಿರುವುದು ರಾಜ್ಯದ ಖಜಾನೆ ಖಾಲಿಯಾಗಿರುವುದಕ್ಕೆ ಸಾಕ್ಷಿಯಾಗಿದೆ. ಹಿಂದೆ ಬಿಜೆಪಿ ಸರಕಾರದ ಅವಧಿಯಲ್ಲಿ ಯಾವುದೇ ಷರತ್ತು ವಿಧಿಸದೆ ನೇರವಾಗಿ ರೈತರ ಖಾತೆಗಳಿಗೆ 50ರಿಂದ 55 ಸಾವಿರ ರೂ. ವರೆಗೆ ಪರಿಹಾರವನ್ನು ನೀಡಲಾಗಿತ್ತು. ಆ ಮೂಲಕ ಬಿಜೆಪಿ ರೈತರ ಪರವಾಗಿದೆ ಎನ್ನುವುದನ್ನು ಸಾಬೀತುಪಡಿಸಿತ್ತು ಎಂದು ತಿಳಿಸಿದ್ದಾರೆ. ಆರ್ಥಿಕ ನಿರ್ವಹಣೆಯಲ್ಲಿ ಸಂಪೂರ್ಣವಾಗಿ ವಿಫಲವಾಗಿರುವ ಕಾಂಗ್ರೆಸ್ ಸರಕಾರ ಹಾಲಿನ ದರ ಮತ್ತು ಬಸ್ ಪ್ರಯಾಣ ದರವನ್ನು ಹೆಚ್ಚಿಸುವ ಮೂಲಕ ಬಡವರು ಹಾಗೂ ಸಾಮಾನ್ಯ ಜನರಿಗೆ ಆರ್ಥಿಕ ಹೊರೆ ಉಂಟುಮಾಡುತ್ತಿದೆ. ಜನಸಾಮಾನ್ಯರ ಹಾಗೂ ರೈತರ ಬದುಕಿಗೆ ತೊಂದರೆ ನೀಡುತ್ತಿರುವ ಕಾಂಗ್ರೆಸ್ ಸರಕಾರದ ನೀತಿಯನ್ನು ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ ಎಂದು ತಳೂರು ಎ.ಕಿಶೋರ್ ಕುಮಾರ್ ಹೇಳಿದ್ದಾರೆ.

















