ಮಡಿಕೇರಿ, NEWS DESK ಅ. 31: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನವೆಂಬರ್ 2 ಮತ್ತು 3ರಂದು ಮಡಿಕೇರಿಯಲ್ಲಿ ರಾಜ್ಯಮಟ್ಟದ ಪತ್ರಕರ್ತರ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಾಚರಣಿಯಂಡ ಅನು ಕಾರ್ಯಪ್ಪ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಮೈದಾನ, ಜನರಲ್ ತಿಮ್ಮಯ್ಯ ಕ್ರೀಡಾಂಗಣ ಹಾಗೂ ಪೊಲೀಸ್ ಕವಾಯತು ಮೈದಾನಗಳಲ್ಲಿ ಏಕಕಾಲದಲ್ಲಿ ಲೀಗ್ ಮಾದರಿಯಲ್ಲಿ ಪಂದ್ಯಾಟ ನಡೆಯಲಿದೆ. ಕೊಡಗಿನ ಎರಡು ತಂಡಗಳು ಸೇರಿದಂತೆ ರಾಜ್ಯದ ಒಟ್ಟು 24 ತಂಡಗಳು ಭಾಗವಹಿಸಲಿವೆ ಎಂದು ತಿಳಿಸಿದರು.
ನವೆಂಬರ್ 2ರಂದು ಬೆಳಿಗ್ಗೆ 11 ಗಂಟೆಗೆ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಪಿ.ಎಂ. ನರೇಂದ್ರಸ್ವಾಮಿ ಪಂದ್ಯಾವಳಿಗೆ ಚಾಲನೆ ನೀಡಲಿದ್ದು, ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ಕಾರ್ಯಕ್ರಮದಲ್ಲಿ ಶಾಸಕರಾದ ಎ.ಎಸ್. ಪೊನ್ನಣ್ಣ, ಡಾ. ಮಂತರ್ ಗೌಡ, ಸಂಸದ ಯದುವೀರ್ ಒಡೆಯರ್, ವಿಧಾನ ಪರಿಷತ್ ಸದಸ್ಯರಾದ ಎಂ.ಪಿ. ಸುಜಾ ಕುಶಾಲಪ್ಪ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.
ಅಂದು ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಅವರ ನಾಯಕತ್ವದ ರಾಜಕಾರಣಿಗಳ ತಂಡ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಅವರ ನಾಯಕತ್ವದ ಪತ್ರಕರ್ತರ ತಂಡದ ನಡುವೆ ಪ್ರದರ್ಶನ ಪಂದ್ಯ ಏರ್ಪಡಿಸಲಾಗಿದೆ.
ನವೆಂಬರ್ 3ರಂದು ಮಧ್ಯಾಹ್ನ 3 ಗಂಟೆಗೆ ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣೆ ನಡೆಯಲಿದೆ. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಅಧ್ಯಕ್ಷತೆ ವಹಿಸಲಿದ್ದು, ಶಾಸಕ ಡಾ. ಮಂತರ್ ಗೌಡ, ಎ.ಎಸ್. ಪೊನ್ನಣ್ಣ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ.
ಮೂರು ಮೈದಾನಗಳ ಐದು ಪಿಚ್ಗಳಲ್ಲಿ ಪಂದ್ಯಾಟ
ರಾಜ್ಯ ಸಮಿತಿ ಸದಸ್ಯೆ ಹಾಗೂ ಶಿಸ್ತು ಸಮಿತಿ ಸಂಚಾಲಕಿ ಬಿ.ಆರ್. ಸವಿತಾ ರೈ ಮಾತನಾಡಿ, ಪಂದ್ಯಾವಳಿಯನ್ನು ವ್ಯವಸ್ಥಿತವಾಗಿ ಆಯೋಜಿಸಲು ವಿವಿಧ ಉಪಸಮಿತಿಗಳು ಕಾರ್ಯನಿರ್ವಹಿಸುತ್ತಿವೆ. ಒಟ್ಟು ಮೂರು ಮೈದಾನಗಳ ಐದು ಪಿಚ್ಗಳಲ್ಲಿ ಪಂದ್ಯಗಳು ನಡೆಯಲಿವೆ. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ 2026-27ನೇ ಸಾಲಿನ ಸದಸ್ಯತ್ವ ಕಾರ್ಡ್ ಹೊಂದಿರುವವರಿಗೆ ಮಾತ್ರ ಆಟವಾಡಲು ಅವಕಾಶವಿದೆ. ಸದಸ್ಯತ್ವ ಹೊಂದಿರದ ಆಟಗಾರರನ್ನು ತಂಡದಲ್ಲಿ ಸೇರಿಸಿಕೊಂಡರೆ ಅಂತಹ ತಂಡವನ್ನೇ ಅನರ್ಹಗೊಳಿಸಲಾಗುವುದು ಎಂದು ಎಚ್ಚರಿಸಿದರು.
ಶಿವಮೊಗ್ಗ, ಬಾಗಲಕೋಟೆ, ಹಾವೇರಿ, ಮಂಡ್ಯ, ಚಾಮರಾಜನಗರ, ತುಮಕೂರು, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಧಾರವಾಡ, ಕೋಲಾರ, ಚಿತ್ರದುರ್ಗ, ಹಾಸನ, ರಾಮನಗರ, ಉಡುಪಿ, ಚಿಕ್ಕಬಳ್ಳಾಪುರ, ಬೆಂಗಳೂರು ನಗರ, ಮೈಸೂರು, ಕೊಪ್ಪಳ, ಬೀದರ್, ದಾವಣಗೆರೆ, ಗದಗ, ಬಳ್ಳಾರಿ ಹಾಗೂ ಕೊಡಗಿನ ಅರೇಬಿಕಾ ಮತ್ತು ರೋಬಸ್ಟಾ ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಲಿವೆ.
ವಿಜೇತ ತಂಡಕ್ಕೆ 1 ಲಕ್ಷ ರೂ. ನಗದು ಬಹುಮಾನ
ಪ್ರಧಾನ ಕಾರ್ಯದರ್ಶಿ ಹೆಚ್.ಜೆ. ರಾಕೇಶ್ ಮಾತನಾಡಿ, ಪಂದ್ಯಾವಳಿಯ ವಿಜೇತ ತಂಡಕ್ಕೆ 1 ಲಕ್ಷ ರೂ., ರನ್ನರ್ ಅಪ್ ತಂಡಕ್ಕೆ 50 ಸಾವಿರ ರೂ., ಮೂರನೇ ಸ್ಥಾನ ಪಡೆಯುವ ತಂಡಕ್ಕೆ 25 ಸಾವಿರ ರೂ. ಹಾಗೂ ನಾಲ್ಕನೇ ಸ್ಥಾನ ಪಡೆಯುವ ತಂಡಕ್ಕೆ 15 ಸಾವಿರ ರೂ. ನಗದು ಬಹುಮಾನ ನೀಡಲಾಗುವುದು. ಇದರೊಂದಿಗೆ ಆಕರ್ಷಕ ಟ್ರೋಫಿಗಳನ್ನು ವಿತರಿಸಲಾಗುವುದು. ಪಂದ್ಯಾವಳಿಗೆ ಆಗಮಿಸುವ ಎಲ್ಲಾ ಪತ್ರಕರ್ತರಿಗೆ ವಸತಿ ಹಾಗೂ ಊಟೋಪಚಾರದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕೊಡಗು ಪ್ರೆಸ್ಕ್ಲಬ್ ಅಧ್ಯಕ್ಷ ಬೊಳ್ಳಜಿರ ಬಿ. ಅಯ್ಯಪ್ಪ ಹಾಗೂ ಮೈದಾನ ಸಮಿತಿ ಸಂಚಾಲಕ ಮಂಜು ಸುವರ್ಣ ಉಪಸ್ಥಿತರಿದ್ದರು.

















