ಮಡಿಕೇರಿ, NEWS DESK ನ. 6: ಹಾಲು ಮತ್ತು ಹಾಲಿನ ಉತ್ಪನ್ನಗಳ ಬೆಲೆ ಏರಿಕೆ ನಿರ್ಧಾರವನ್ನು ತಕ್ಷಣ ಹಿಂಪಡೆದು ಜನಸಾಮಾನ್ಯರಿಗೆ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿ ವಿಮೆನ್ ಇಂಡಿಯಾ ಮೂವ್ಮೆಂಟ್ನ ಕೊಡಗು ಜಿಲ್ಲಾ ಘಟಕವು ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿತು.
ಈ ಸಂದರ್ಭ ಮಾತನಾಡಿದ ಸಂಘಟನೆಯ ಪ್ರಮುಖರು, ಹಾಲು ಕೇವಲ ಆಹಾರ ಪದಾರ್ಥವಲ್ಲ, ಬದಲಾಗಿ ಮಕ್ಕಳು, ಗರ್ಭಿಣಿಯರು, ಹಾಲುಣಿಸುವ ತಾಯಂದಿರು ಹಾಗೂ ವೃದ್ಧರಿಗೆ ಅಗತ್ಯವಾದ ಪೌಷ್ಟಿಕ ಆಹಾರವಾಗಿದೆ. ಹಾಲಿನ ಬೆಲೆ ಏರಿಕೆಯಿಂದ ಮಕ್ಕಳ ಪೌಷ್ಟಿಕ ಆಹಾರದ ಲಭ್ಯತೆ ಮೇಲೆ ಪರಿಣಾಮ ಬೀರುವುದರ ಜೊತೆಗೆ ಕುಟುಂಬದ ದೈನಂದಿನ ಖರ್ಚು ನಿರ್ವಹಿಸುವ ಮಹಿಳೆಯರ ಮೇಲೆಯೂ ಹೆಚ್ಚುವರಿ ಆರ್ಥಿಕ ಒತ್ತಡ ಉಂಟಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆ, ನಿರುದ್ಯೋಗ ಹಾಗೂ ಆರ್ಥಿಕ ಸಂಕಷ್ಟದಿಂದ ಜನಸಾಮಾನ್ಯರು ತೊಂದರೆ ಅನುಭವಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಬೆಲೆ ಹೆಚ್ಚಿಸಿರುವುದು ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳಿಗೆ ಮತ್ತಷ್ಟು ಆರ್ಥಿಕ ಹೊರೆಯಾಗಲಿದೆ ಎಂದು ತಿಳಿಸಿದರು.
ರೈತರ ಹಿತಾಸಕ್ತಿಯನ್ನು ಕಾಪಾಡುವುದು ಸರ್ಕಾರದ ಜವಾಬ್ದಾರಿಯಾಗಿರುವಂತೆಯೇ ಗ್ರಾಹಕರ ಹಿತಾಸಕ್ತಿಯನ್ನೂ ರಕ್ಷಿಸಬೇಕು. ರೈತರಿಗೆ ನ್ಯಾಯಯುತ ಬೆಲೆ ದೊರೆಯುವಂತೆ ಮಾಡುವುದರ ಜೊತೆಗೆ ಗ್ರಾಹಕರಿಗೆ ಹೊರೆಯಾಗದ ಸಮತೋಲಿತ ಬೆಲೆ ನೀತಿಯನ್ನು ರೂಪಿಸಬೇಕು ಎಂದು ಆಗ್ರಹಿಸಿದರು.
ಹಾಲು ಮತ್ತು ಹಾಲಿನ ಉತ್ಪನ್ನಗಳ ಬೆಲೆ ಏರಿಕೆ ಹಿಂಪಡೆಯುವುದು, ಕೈಗೆಟುಕುವ ದರದಲ್ಲಿ ಗುಣಮಟ್ಟದ ಹಾಲು ಒದಗಿಸುವುದು ಹಾಗೂ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ಆಹಾರ ಭದ್ರತೆ ಮತ್ತು ಮಕ್ಕಳ ಪೌಷ್ಟಿಕತೆಯನ್ನು ಕಾಪಾಡಲು ವಿಶೇಷ ಕ್ರಮ ಕೈಗೊಳ್ಳುವಂತೆ ಸರ್ಕಾರವನ್ನು ಒತ್ತಾಯಿಸಲಾಯಿತು.
ಮನವಿ ಸಲ್ಲಿಸುವ ಸಂದರ್ಭದಲ್ಲಿ ವಿಮೆನ್ ಇಂಡಿಯಾ ಮೂವ್ಮೆಂಟ್ನ ಕೊಡಗು ಜಿಲ್ಲಾ ಉಪಾಧ್ಯಕ್ಷೆ ಜಾಕಿಯಾ, ಕಾರ್ಯದರ್ಶಿ ತಾಹಿರಾ ಅಲಿ, ಜಂಟಿ ಕಾರ್ಯದರ್ಶಿ ಮೇರಿ ವೇಗಾಸ್, ಖಜಾಂಚಿ ಸಂಸುನ್ನಿಸಾ ಹಾಗೂ ಸದಸ್ಯೆ ಜೆಸ್ಸಿಲಾ ಉಪಸ್ಥಿತರಿದ್ದರು.

















