ವಿರಾಜಪೇಟೆ, NEWS DESK ನ.8: ಮೂಲತಃ ವಿರಾಜಪೇಟೆ ತಾಲೂಕಿನ ಬೇಟೋಳಿ ಗ್ರಾಮದ ರಾಮನಗರದವರಾದ ಭರತನಾಟ್ಯ ಕಲಾವಿದೆ ಲಾವಣ್ಯ ಬೋರ್ಕರ್ ಅವರಿಗೆ ಸುಳ್ಯದ ಕೆ.ವಿ.ಜಿ. ತಾಂತ್ರಿಕ ಮಹಾವಿದ್ಯಾಲಯದ ವತಿಯಿಂದ ಈ ಸಾಲಿನ ಪ್ರತಿಷ್ಠಿತ ಕೆ.ವಿ.ಜಿ. ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಮಹಾವಿದ್ಯಾಲಯದಲ್ಲಿ ಸಂಭ್ರಮದಿಂದ ನಡೆದ ಕನ್ನಡ ರಾಜ್ಯೋತ್ಸವ ಆಚರಣೆಯ ಕಾರ್ಯಕ್ರಮದಲ್ಲಿ ಭರತನಾಟ್ಯ ಕ್ಷೇತ್ರದಲ್ಲಿ ಲಾವಣ್ಯ ಅವರು ಮಾಡಿರುವ ಸಾಧನೆಯನ್ನು ಪರಿಗಣಿಸಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಈ ಸಂದರ್ಭದಲ್ಲಿ ವಿದ್ಯಾಸಂಸ್ಥೆಯ ಮುಖ್ಯಸ್ಥರು, ಪ್ರಾಂಶುಪಾಲರು, ಗಣ್ಯರು, ಉಪನ್ಯಾಸಕರು, ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಲಾವಣ್ಯ ಬೋರ್ಕರ್ ಅವರು ವಿರಾಜಪೇಟೆಯ ಸಂತ ಅನ್ನಮ್ಮ ವಿದ್ಯಾಸಂಸ್ಥೆಯ ಹಳೆಯ ವಿದ್ಯಾರ್ಥಿಯಾಗಿದ್ದು, ಪ್ರಸ್ತುತ ಸುಳ್ಯದ ಕೆ.ವಿ.ಜಿ. ತಾಂತ್ರಿಕ ಮಹಾವಿದ್ಯಾಲಯದಲ್ಲಿ ಎಂಬಿಎ ದ್ವಿತೀಯ ವರ್ಷದ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ದಾರೆ.
ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಹಲವಾರು ಪ್ರಶಸ್ತಿ ಮತ್ತು ಪುರಸ್ಕಾರಗಳನ್ನು ಪಡೆದಿರುವ ಲಾವಣ್ಯ, ವಿರಾಜಪೇಟೆ ತಾಲೂಕಿನ ಬೇಟೋಳಿ ಗ್ರಾಮದ ನಾಟಿ ವೈದ್ಯ ನಟರಾಜ್ ಬೋರ್ಕರ್ ಹಾಗೂ ಸುನಂದ ಬೋರ್ಕರ್ ದಂಪತಿಯ ಪುತ್ರಿ.
























