ವಿರಾಜಪೇಟೆ, NEWS DESK ನ.8: ಮಾದಕ ವ್ಯಸನಕ್ಕೆ ಒಳಗಾಗಿ ಅದರ ದಾಸರಾದರೆ ಬದುಕು ಹಾಳಾಗುವುದರೊಂದಿಗೆ ಜೀವ ಮತ್ತು ಜೀವನ ಎರಡನ್ನೂ ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗುತ್ತದೆ ಎಂದು ವಿರಾಜಪೇಟೆಯ ಆಶೀರ್ವಾದ್ ಮೆಡಿಕಲ್ ಸೆಂಟರ್ನ ವೈದ್ಯ ಡಾ. ಸಿ.ಎ. ಬೋಪಣ್ಣ ಎಚ್ಚರಿಸಿದರು.
ವಿರಾಜಪೇಟೆಯ ಕಾವೇರಿ ಕಾಲೇಜಿನ ಐಕ್ಯೂಎಸಿ, ಎನ್ಎಸ್ಎಸ್, ಎನ್ಸಿಸಿ ಹಾಗೂ ಯೂತ್ ರೆಡ್ ಕ್ರಾಸ್ ಘಟಕಗಳ ವತಿಯಿಂದ ‘ವಿಕಸಿತ ಭಾರತಕ್ಕಾಗಿ ನಶಾ ಮುಕ್ತ ಯುವ ಅಭಿಯಾನ’ದ ಅಂಗವಾಗಿ ಆಯೋಜಿಸಲಾಗಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಮಗೆ ಏನು ಬೇಕು ಎಂಬುದನ್ನು ನಿರ್ಧರಿಸುವ ಅಧಿಕಾರ ನಮ್ಮ ಕೈಯಲ್ಲಿದೆ. ಇತರರನ್ನು ಮೆಚ್ಚಿಸಲು ಅಥವಾ ಬೇರೆಯವರ ಒತ್ತಾಯಕ್ಕೆ ಮಣಿದು ಸಣ್ಣ ಪ್ರಮಾಣದಲ್ಲಿ ಮಾದಕ ವಸ್ತುಗಳ ಸೇವನೆಯನ್ನು ಆರಂಭಿಸಿದರೂ ಕ್ರಮೇಣ ಅದರ ಸುಳಿಗೆ ಸಿಲುಕಿ ಹೊರಬರಲಾಗದ ಪರಿಸ್ಥಿತಿ ನಿರ್ಮಾಣವಾಗಬಹುದು ಎಂದು ತಿಳಿಸಿದರು.
ಗಾಂಜಾ, ಅಫೀಮು ಸೇರಿದಂತೆ ವಿವಿಧ ಮಾದಕ ವಸ್ತುಗಳು ಹಾಗೂ ತಂಬಾಕು ಉತ್ಪನ್ನಗಳ ಸೇವನೆಯಿಂದ ಮೆದುಳಿನಲ್ಲಿರುವ ಡೋಪಮೈನ್ ಎಂಬ ರಾಸಾಯನಿಕದ ಬಿಡುಗಡೆಯಲ್ಲಿ ಬದಲಾವಣೆ ಉಂಟಾಗುತ್ತದೆ. ಮಾದಕ ವಸ್ತುಗಳ ಸೇವನೆಯಿಂದ ಮೆದುಳಿನ ರಿವಾರ್ಡ್ ಸಿಸ್ಟಮ್ ಉತ್ತೇಜನಗೊಂಡು ತಾತ್ಕಾಲಿಕವಾಗಿ ತೀವ್ರ ಸಂತೋಷದ ಅನುಭವ ಉಂಟಾಗುತ್ತದೆ. ಈ ಕೃತಕ ಆನಂದವನ್ನು ಮತ್ತೆ ಪಡೆಯಬೇಕೆಂಬ ಬಯಕೆಯಿಂದ ವ್ಯಕ್ತಿ ಪದೇ ಪದೇ ಮಾದಕ ವಸ್ತುಗಳನ್ನು ಸೇವಿಸಲು ಮುಂದಾಗುತ್ತಾನೆ. ಇದು ಕ್ರಮೇಣ ವ್ಯಸನಕ್ಕೆ ಕಾರಣವಾಗುತ್ತದೆ ಎಂದು ವಿವರಿಸಿದರು.
ಮಾದಕ ವ್ಯಸನದಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಉಂಟಾಗುತ್ತದೆ. ವ್ಯಸನಕ್ಕೆ ಒಳಗಾದ ಕೆಲವರು ಮಾದಕ ವಸ್ತುಗಳನ್ನು ಪಡೆಯುವ ಉದ್ದೇಶದಿಂದ ಕಳ್ಳತನ ಸೇರಿದಂತೆ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗುವ ಅಪಾಯವಿದೆ. ಇದರಿಂದ ತಮ್ಮ ಜೀವನದ ಜೊತೆಗೆ ಕುಟುಂಬದ ನೆಮ್ಮದಿಯನ್ನೂ ಹಾಳುಮಾಡಿಕೊಳ್ಳುತ್ತಾರೆ. ಆದ್ದರಿಂದ ಯುವಜನತೆ ಮಾದಕ ವಸ್ತುಗಳು ಹಾಗೂ ತಂಬಾಕು ಉತ್ಪನ್ನಗಳಿಂದ ದೂರವಿದ್ದು, ಉತ್ತಮ ಜೀವನ ಮತ್ತು ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು. ಭಾರತವನ್ನು ನಶಾ ಮುಕ್ತ ರಾಷ್ಟ್ರವನ್ನಾಗಿಸಲು ಪ್ರತಿಯೊಬ್ಬರೂ ಸಂಕಲ್ಪ ಮಾಡಬೇಕು ಎಂದು ಕರೆ ನೀಡಿದರು.
ಯುವ ಸಮುದಾಯ ಎಚ್ಚರಿಕೆಯಿಂದಿರಬೇಕು: ಡಾ. ಕೆ.ಜಿ. ವೀಣಾ
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲೆ ಡಾ. ಕೆ.ಜಿ. ವೀಣಾ, ಯುವ ಸಮುದಾಯ ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಎಚ್ಚರಿಕೆಯಿಂದಿರಬೇಕು. ಮಾದಕ ದ್ರವ್ಯಗಳು ಹಾಗೂ ತಂಬಾಕು ಉತ್ಪನ್ನಗಳ ಸೇವನೆಯಿಂದ ಉಂಟಾಗುವ ದೈಹಿಕ ಮತ್ತು ಮಾನಸಿಕ ಸಮಸ್ಯೆಗಳನ್ನು ಅರಿತು ಅವುಗಳಿಂದ ದೂರವಿರಬೇಕು ಎಂದು ಸಲಹೆ ನೀಡಿದರು.
ಮಾದಕ ವ್ಯಸನವು ವ್ಯಕ್ತಿಯ ಭವಿಷ್ಯವನ್ನೇ ಹಾಳುಮಾಡುವ ಅಪಾಯವಿದೆ. ಒಮ್ಮೆ ವ್ಯಸನಕ್ಕೆ ಒಳಗಾದರೆ ಅದರಿಂದ ಹೊರಬರುವುದು ಕಷ್ಟಕರವಾಗಬಹುದು. ಆದ್ದರಿಂದ ಜೀವನದ ಪ್ರತಿಯೊಂದು ಹಂತದಲ್ಲೂ ಎಚ್ಚರಿಕೆಯ ಹೆಜ್ಜೆ ಇಡಬೇಕು. ಒಂದು ತಪ್ಪು ನಿರ್ಧಾರ ಮುಂದಿನ ಜೀವನದಲ್ಲಿ ಗಂಭೀರ ಪರಿಣಾಮಗಳಿಗೆ ಕಾರಣವಾಗಬಹುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಐಕ್ಯೂಎಸಿ ಸಂಯೋಜಕ ಎಲ್.ಆರ್. ರಾಘವೇಂದ್ರ, ಎನ್ಸಿಸಿ ಅಧಿಕಾರಿ ಲೆ. ಬಿ.ಬಿ. ಬೋಜಮ್ಮ, ಎನ್ಎಸ್ಎಸ್ ಹಾಗೂ ಯೂತ್ ರೆಡ್ ಕ್ರಾಸ್ ಅಧಿಕಾರಿ ಬಿ.ಬಿ. ಸುನಿಲ್ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾಲೇಜಿನ ಉಪನ್ಯಾಸಕರು, ಎನ್ಸಿಸಿ ಕೆಡೆಟ್ಗಳು ಹಾಗೂ ಎನ್ಎಸ್ಎಸ್ ಸ್ವಯಂಸೇವಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
























