ಮಡಿಕೇರಿ, NEWS DESK ನ.14: ಎರಡುವರೆ ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಭಾಷೆ ಅತ್ಯಂತ ಶ್ರೀಮಂತವಾದ ಭಾಷೆಯಾಗಿದೆ ಎಂದು ನಿವೃತ್ತ ಪ್ರಾಂಶುಪಾಲ ಡಾ. ಜೆ. ಸೋಮಣ್ಣ ಹೇಳಿದರು.
ಮಡಿಕೇರಿ ಆಕಾಶವಾಣಿ ಕೇಂದ್ರದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣ ಮಾಡಿದ ಅವರು, ಜರ್ಮನಿಯಿಂದ ಬಂದ ರೆ. ಫಾ. ಕಿಟಲ್ ಅವರು 22 ವರ್ಷಗಳ ಕಾಲ ಕನ್ನಡ ನಾಡಿನಲ್ಲಿ ನೆಲೆಸಿ 90 ಸಾವಿರಕ್ಕೂ ಹೆಚ್ಚು ಕನ್ನಡ ಪದಗಳನ್ನು ಸಂಗ್ರಹಿಸಿ ಅವುಗಳಿಗೆ ಅರ್ಥ ನೀಡಿದ್ದಾರೆ. ಕನ್ನಡದಲ್ಲಿ ಒಂದು ಪದಕ್ಕೆ ಹಲವು ಅರ್ಥಗಳಿದ್ದು, ಒಂದು ಪದ ಮರೆತುಹೋದರೂ ಮತ್ತೊಂದು ಪದವನ್ನು ಬಳಸುವ ಅವಕಾಶವಿದೆ. ಇಂತಹ ಭಾಷಾ ಸಂಪತ್ತನ್ನು ಉಳಿಸಿ ಬೆಳೆಸಲು ಕನ್ನಡ ದಿನಪತ್ರಿಕೆಗಳು ಹಾಗೂ ಸಾಹಿತ್ಯ ಕೃತಿಗಳನ್ನು ಅಧ್ಯಯನ ಮಾಡಬೇಕು ಎಂದು ತಿಳಿಸಿದರು.
ಪಂಪ, ಕುಮಾರವ್ಯಾಸ, ಹರಿಹರ, ರಾಘವಾಂಕ ಮೊದಲಾದ ಕವಿಗಳು ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಿದ್ದಾರೆ. ಕನ್ನಡ ಭಾಷೆಯ ಮೇಲಿನ ಜಿ.ಪಿ. ರಾಜರತ್ನಂ ಅವರ ಅಭಿಮಾನ ಎಲ್ಲರಿಗೂ ಆದರ್ಶವಾಗಬೇಕು ಎಂದರು.
ಕಾವೇರಿಯಿಂದ ಗೋದಾವರಿಯವರೆಗೆ ವಿಸ್ತರಿಸಿದ್ದ ಕನ್ನಡ ನಾಡು ಪ್ರಾಕೃತಿಕವಾಗಿ ಹಾಗೂ ಸಾಂಸ್ಕೃತಿಕವಾಗಿ ಶ್ರೀಮಂತವಾಗಿದೆ. ಕವಿ ಪಂಪ ಅವರು ಮತ್ತೊಮ್ಮೆ ಕನ್ನಡ ನಾಡಿನಲ್ಲಿ ಜನ್ಮ ತಾಳುವುದಾದರೆ ಮರಿದುಂಬಿಯಾಗಿ ಅಥವಾ ಕೋಗಿಲೆಯಾಗಿ ಬನವಾಸಿಯಲ್ಲಿ ಹುಟ್ಟಲು ಬಯಸುತ್ತೇನೆ ಎಂದು ಹೇಳಿರುವುದು ಕನ್ನಡ ನಾಡಿನ ಹಿರಿಮೆಯನ್ನು ಸಾರುತ್ತದೆ ಎಂದು ಹೇಳಿದರು.
ಕುವೆಂಪು ಅವರು ನಾಡಗೀತೆಯಲ್ಲಿ ಕನ್ನಡ ತಾಯಿಯ ವೈಭವವನ್ನು ವರ್ಣಿಸಿದ್ದಾರೆ. ಅದನ್ನು ಅರ್ಥ ಮಾಡಿಕೊಂಡಾಗ ಕನ್ನಡ ಭಾಷೆಯ ಶ್ರೀಮಂತಿಕೆ ಅರಿವಾಗುತ್ತದೆ. ‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು’ ಎಂದು ಹಾಡುವ ಮೂಲಕ ನಾಡಿನ ಏಕೀಕರಣಕ್ಕೆ ನಾಂದಿ ಹಾಡಿದ ಹುಯಿಲಗೋಳ ನಾರಾಯಣರಾಯರನ್ನು ಸ್ಮರಿಸಬೇಕು. ಮಕ್ಕಳಿಗೆ ಕನ್ನಡದ ಉತ್ತಮ ಪುಸ್ತಕಗಳನ್ನು ಓದಿಸುವ ಮೂಲಕ ಭಾಷೆ ಮತ್ತು ಸಂಸ್ಕೃತಿಯ ಬೆಳವಣಿಗೆಗೆ ಪ್ರೋತ್ಸಾಹ ನೀಡಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಡಿಕೇರಿ ಆಕಾಶವಾಣಿ ಕೇಂದ್ರದ ಮುಖ್ಯಸ್ಥೆ ಸುಜಾತಾ ಎಫ್. ತಳವಾರ್ ಮಾತನಾಡಿ, ಮಕ್ಕಳು ಶಾಲೆಯಲ್ಲಿ ಯಾವುದೇ ಭಾಷೆಯಲ್ಲಿ ಶಿಕ್ಷಣ ಪಡೆದರೂ ಮನೆಯಲ್ಲಿ ಮಾತೃಭಾಷೆಯಲ್ಲಿಯೇ ಮಾತನಾಡಬೇಕು. ಮಾತೃಭಾಷಾ ಕಲಿಕೆಗೆ ಮನೆಯೇ ಮೊದಲ ಪಾಠಶಾಲೆಯಾಗಬೇಕು ಎಂದು ಹೇಳಿದರು.
ಇಂದಿನ ದಿನಗಳಲ್ಲಿ ಉದ್ಯೋಗದ ನಿರೀಕ್ಷೆಯಿಂದ ಬಹುತೇಕ ಪೋಷಕರು ಮಕ್ಕಳನ್ನು ಅನ್ಯಭಾಷಾ ಮಾಧ್ಯಮದಲ್ಲಿ ಓದಿಸುತ್ತಿದ್ದಾರೆ. ಕನ್ನಡ ಅನ್ನದ ಭಾಷೆಯಾದಾಗ ಮಾತ್ರ ಮಕ್ಕಳು ಕನ್ನಡ ಮಾಧ್ಯಮದತ್ತ ಆಕರ್ಷಿತರಾಗುತ್ತಾರೆ ಎಂದು ಅಭಿಪ್ರಾಯಪಟ್ಟರು.
ವಿಶ್ವದ ಹಲವು ಭಾಷೆಗಳು ಪ್ರತಿದಿನ ಅಳಿವಿನಂಚಿಗೆ ಸಾಗುತ್ತಿವೆ. ಭಾಷೆ ಒಂದು ಜನಾಂಗದ ಜೀವನಾಡಿಯಾಗಿದ್ದು, ಅದು ಸೊರಗಿದರೆ ಜನಾಂಗದ ಅಸ್ತಿತ್ವಕ್ಕೂ ಧಕ್ಕೆ ಉಂಟಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು. ಕನ್ನಡದ ಮೊದಲ ಗ್ರಂಥವಾದ ‘ಕವಿರಾಜಮಾರ್ಗ’ದಲ್ಲಿ ಕಾವೇರಿಯಿಂದ ಗೋದಾವರಿವರೆಗಿನ ಕನ್ನಡ ನಾಡಿನ ಎಲ್ಲೆಯನ್ನು ಗುರುತಿಸಲಾಗಿದೆ. ಆದರೆ ಏಕೀಕರಣದ ಸಂದರ್ಭದಲ್ಲಿ ಕಾಸರಗೋಡು, ನೀಲಗಿರಿ ಸೇರಿದಂತೆ ಅಚ್ಚಗನ್ನಡದ ಹಲವು ಪ್ರದೇಶಗಳು ಕರ್ನಾಟಕದಿಂದ ಹೊರಗುಳಿದಿರುವುದು ವಿಷಾದನೀಯ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಆಕಾಶವಾಣಿ ಕೇಂದ್ರದ ಕಾರ್ಯಕ್ರಮ ನಿರ್ವಾಹಕಿ ಎಂ. ಶಕುಂತಲಾ, ಕೇಂದ್ರದಲ್ಲಿ ಕನ್ನಡ ರಾಜ್ಯೋತ್ಸವವನ್ನು ಕನ್ನಡದ ಹಬ್ಬದಂತೆ ಆಚರಿಸುತ್ತಿರುವುದು ಸಂತೋಷದ ಸಂಗತಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಆಕಾಶವಾಣಿ ಕೇಂದ್ರದ ತಾಂತ್ರಿಕ ವಿಭಾಗದ ಮುಖ್ಯಸ್ಥ ಕೆ.ಪಿ. ಶಿವಾನಂದನ್, ಹಿರಿಯ ತಂತ್ರಜ್ಞ ಬಿ.ಕೆ. ಲೋಕೇಶ್, ಗ್ರಂಥಪಾಲಕ ಪಂಕಜ್ ಡಿ. ಕುಡ್ತಾರ್ಕರ್ ಸೇರಿದಂತೆ ಕೇಂದ್ರದ ಸಿಬ್ಬಂದಿ ಉಪಸ್ಥಿತರಿದ್ದರು.
ಕೇಂದ್ರದ ಎಲ್ಲ ಸಿಬ್ಬಂದಿ ಕನ್ನಡದ ಅಸ್ಮಿತೆಯನ್ನು ಬಿಂಬಿಸುವ ಉಡುಗೆಗಳನ್ನು ಧರಿಸಿ ಸಂಭ್ರಮಿಸಿದರು. ಸಾಮೂಹಿಕವಾಗಿ ಹಾಡಿದ ನಾಡಗೀತೆ ಹಾಗೂ ‘ಹಚ್ಚೇವು ಕನ್ನಡದ ದೀಪ’ ಗೀತೆಗಳು ಕಾರ್ಯಕ್ರಮಕ್ಕೆ ಮೆರುಗು ನೀಡಿದವು.
















