ಮಡಿಕೇರಿ, NEWS DESK ನ.27: ಕೊಯನಾಡು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಯೋಗ ಸಿಂಚನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಮದೆನಾಡು ಗ್ರಾಮದ ಯುವ ಯೋಗ ಸಾಧಕಿ ಸಿಂಚನ ಅವರು ಪ್ರದರ್ಶಿಸಿದ ವಿವಿಧ ಯೋಗಾಸನಗಳನ್ನು ವಿದ್ಯಾರ್ಥಿಗಳು ಉತ್ಸಾಹದಿಂದ ವೀಕ್ಷಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಲೆಯ ಮುಖ್ಯ ಶಿಕ್ಷಕಿ ವನಿತಾ ಅವರು, “ಸಿಂಚನ ಅವರ ಯೋಗ ಸಿಂಚನ ಕಾರ್ಯಕ್ರಮ ಅತ್ಯದ್ಭುತವಾಗಿತ್ತು. ಅವರ ಪ್ರತಿಭೆ ಅಸಾಧಾರಣವಾದುದು. ಗ್ರಾಮೀಣ ಪರಿಸರದಲ್ಲಿ ಬೆಳೆದು ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿರುವುದು ನಿಜಕ್ಕೂ ಪ್ರಶಂಸನೀಯ. ಇದು ನಮ್ಮ ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆ. ದೇಶದ ಎಲ್ಲಾ ಮಕ್ಕಳಿಗೂ ಸಿಂಚನ ಅವರ ಯೋಗ ಪ್ರತಿಭೆ ಸ್ಫೂರ್ತಿಯಾಗಲಿ” ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕಿ ವನಿತಾ, ಸಹಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿ, ಶಾಲಾ ಆಡಳಿತ ಮಂಡಳಿ ಅಧ್ಯಕ್ಷರು, ಮಕ್ಕಳ ಪೋಷಕರು, ಅಂಗನವಾಡಿ ಮಕ್ಕಳು, ಗ್ರಾಮಸ್ಥರು ಹಾಗೂ ಚಾಮುಂಡೇಶ್ವರಿ ದೇವಾಲಯದ ಅಧ್ಯಕ್ಷ ಯಶೋಧರ ಉಪಸ್ಥಿತರಿದ್ದರು.
ಸಿಂಚನ ಅವರ ಪೋಷಕರಾದ ಕೀರ್ತಿಕುಮಾರ್ ಮತ್ತು ರೇಣುಕಾ ಕಾರ್ಯಕ್ರಮದಲ್ಲಿ ಹಾಜರಿದ್ದರು.


































