ಕುಶಾಲನಗರ, ಫೆ. 13 : ಕುಶಾಲನಗರ ತಾಲೂಕಿನ ತೊರೆನೂರು ಗ್ರಾ.ಪಂ ವ್ಯಾಪ್ತಿಯ ರೇವೇಗೌಡನ ಕೊಪ್ಪಲು ಗ್ರಾಮದ ಐತಿಹಾಸಿಕ ಶ್ರೀ ಶನೇಶ್ಚರ ಸ್ವಾಮಿ ದೇವಾಲಯದ ಆವರಣದಲ್ಲಿ ಮಹಾ ಶಿವರಾತ್ರಿ ಹಬ್ಬದ ಅಂಗವಾಗಿ ಸತ್ಯ ನಾರಾಯಣ ಸ್ವಾಮಿ ಪೂಜೆ ಮತ್ತು ಡಾ. ಶ್ರೀ ಶಿವಕುಮಾರ ಮಹಾಸ್ವಾಮಿಗಳಿಗೆ, ಹಾಗೂ ಶ್ರೀ ಡಾ, ಬಾಲಗಂಗಾಧರನಾಥ ಸ್ವಾಮಿಜಿ ಅವರಿಗೆ ನುಡಿ ನಮನ ಕಾರ್ಯಕ್ರಮ ಫೆ. 18 ರಂದು ಶ್ರೀ ಶನೇಶ್ಚರ ದೇವಾಲಯ ಅಭಿವೃದ್ಧಿ ಸಮಿತಿಯ ವತಿಯಿಂದ ಹಮ್ಮಿಕೊಳ್ಳಲಾಗಿದೆ ಎಂದು ದೇವಾಲಯ ಸಮಿತಿಯ ಕಾರ್ಯದರ್ಶಿ ಕೆ.ಎಸ್. ಕೃಷ್ಣ ಗೌಡ ತಿಳಿಸಿದ್ದಾರೆ.
ಕುಶಾಲನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, 18 ರಂದು ಬೆಳಿಗ್ಗೆ ಮಹಾಶಿವರಾತ್ರಿ ಹಬ್ಬದ ಅಂಗವಾಗಿ 8 ಗಂಟೆಗೆ ಗಣಪತಿ ಹೋಮ, ನವಗ್ರಹ ಪೂಜೆ, ವಿವಿಧ ಅಭಿಷೇಕ ಸೇರಿದಂತೆ ಶ್ರೀ ಸತ್ಯನಾರಾಯಣ ಪೂಜೆ ನಡೆಯಲಿದೆ. ನಂತರ ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಲಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ನೆರವೇರಿಸಲ್ಲಿದ್ದಾರೆ. ತೊರೆನೂರು ವಿರಕ್ತ ಮಠದ ಶ್ರೀ ಮಲ್ಲೇಶಸ್ವಾಮಿ , ಶ್ರೀ ಮನೆಹಳ್ಳಿ ಮಠದ ಶ್ರೀ ಮಹಾಂತ ಶಿವಲಿಂಗ ಸ್ವಾಮಿ, ವಿರಕ್ತ ಮಠ ಬಸವಾಪಟ್ಟಣದ ಶ್ರೀ ಬಸವಲಿಂಗ ಸ್ವಾಮಿಜಿ ದಿವ್ಯ ಸಾನಿದ್ಯವನ್ನು ವಹಿಸಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತ್ಯಾಗತ್ತೂರು ಕಾಫಿ ಬೆಳೆಗಾರ ಸಿ, ಎ, ಮಾದಪ್ಪ ವಹಿಸಲಿದ್ದಾರೆ. ಜೆಡಿಎಸ್ ಮುಖಂಡ ನಾಪಂಡ ಮುತ್ತಪ್ಪ, ಕಾಂಗ್ರೆಸ್ ಮುಖಂಡ ಡಾ.ಮಂಥರ್ ಗೌಡ, ಸೇರಿದಂತೆ ಗಣ್ಯರು ಭಾಗವಹಿಸುವರು. ಇದೇ ಸಂದರ್ಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವುದು.
ಸಭಾ ಕಾರ್ಯಕ್ರಮದ ನಂತರ ಚಲನಚಿತ್ರ ಸಹಕಲಾವಿದರಾದ ಕುಮಾರ್ ಅರಸೆಗೌಡ ಮಿತ್ರ ಬಳಗದ ವತಿಯಿಂದ ಮಿಸ್ಟರ್ ಗುಂಡಣ್ಣ ಎಂಬ ಹಾಸ್ಯ ಭರಿತ ನಗೆ ನಾಟಕವನ್ನು ಅಭಿನಯಿಸಲಿದ್ದಾರೆ ಎಂದು ಕೃಷ್ಣ ಗೌಡ ತಿಳಿಸಿದರು.
ಗೋಷ್ಠಿಯಲ್ಲಿ ಕುಶಾಲನಗರ ಎ ಪಿ ಎಂ ಸಿ ಸಹಕಾರ ಸಂಘದ ಮಾಜಿ ಉಪಾಧ್ಯಕ್ಷ ಟಿ.ಬಿ ಜಗದೀಶ್, ತೊರೆನೂರು ಕಾಂಗ್ರೆಸ್ ಮುಖಂಡ ಟಿ ಎಂ ಮೋಹನ್ ಇದ್ದರು.







