ನಾಪೋಕ್ಲು ಮೇ 15 : ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎ.ಎಸ್.ಪೊನ್ನಣ್ಣ ಗೆಲುವಿನ ಹಿನ್ನಲೆ ನಾಪೋಕ್ಲು ಪಟ್ಟಣ ಸೇರಿದಂತೆ ವಿವಿಧೆಡೆ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.
ನಾಪೋಕ್ಲು ಪಟ್ಟಣದಲ್ಲಿ ಅಪಾರ ಸಂಖ್ಯೆಯಲ್ಲಿ ಸೇರಿದ ಕಾಂಗ್ರೆಸ್ ಕಾರ್ಯಕರ್ತರು ಪೊನ್ನಣ್ಣಪರ ಜಯ ಘೋಷಣೆಗಳನ್ನು ಕೂಗಿ ಸಂಭ್ರಮಿಸಿದರು. ಅದರಂತೆ ನಾಪೋಕ್ಲು ವ್ಯಾಪ್ತಿಯ ಎಮ್ಮೆಮಾಡು, ಕೊಳಕೇರಿ ಸೇರಿದಂತೆ ವಿವಿಧೆಡೆಗಳಲ್ಲಿ ಪೊನ್ನಣ್ಣ ಅವರ ಗೆಲುವನ್ನು ಕಾರ್ಯಕರ್ತರು ಸಂಭ್ರಮಿಸಿದರು.
ಈ ಸಂದರ್ಭ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಡಿಸಿಸಿ ಉಪಾಧ್ಯಕ್ಷ ಎಂ.ಎಚ್. ಅಬ್ದುಲ್ ರೆಹಮಾನ್ , ಕಳೆದ 20 ವರ್ಷಗಳಿಂದ ಬಿಜೆಪಿಯ ಭದ್ರಕೋಟೆಯಾಗಿದ್ದ ಕೊಡಗಿನ ಎರಡು ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಎರಡು ವಿದ್ಯಾವಂತ ಅಭ್ಯರ್ಥಿಗಳು ಗೆಲುವು ಸಾಧಿಸುವ ಮೂಲಕ ಆಯ್ಕೆಯಾಗಿದ್ದಾರೆ. ಇವರು ಎಲ್ಲಾ ಜನಾಂಗದವರನ್ನು ಸಮಾನತೆಯಿಂದ ಕಾಣುವ ವ್ಯಕ್ತಿಗಳಾಗಿದ್ದು. ಮುಂದೆ ಇವರು ಕ್ಷೇತ್ರದ ಸರ್ವತ್ತೋಮುಖ ಅಭಿವೃದ್ಧಿಗೆ ಶ್ರಮಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜಿಲ್ಲಾ ಕಾಫಿ ಮಂಡಳಿ ಮಾಜಿ ಉಪಾಧ್ಯಕ್ಷ ಸಣ್ಣುವಂಡ ಡಾ.ಕಾವೇರಪ್ಪ ಮಾತನಾಡಿ, ರಾಜ್ಯ ವಿಧಾನ ಸಭೆಗೆ ನಡೆದ ಚುನಾವಣೆಯಲ್ಲಿ ಕೊಡಗು ಜೆಲ್ಲೆಯ ಜನರ ಆಶೋತ್ತರಗಳಿಗೆ ಪೂರಕವಾಗಿ ಮತ್ತು ಬದಲಾವಣೆಗಾಗಿ ಕಾಂಗ್ರೆಸ್ ಪಕ್ಷದಿಂದ ವಿದ್ಯಾವಂತ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಇವರು ಜಿಲ್ಲೆಯಲ್ಲಿ ಉತ್ತಮ ಅಭಿವೃದ್ಧಿ ಕಾರ್ಯಗಳನ್ನು ಮಾಡುವ ಮೂಲಕ ಜನಸಾಮಾನ್ಯರ ಮನಗೆಲ್ಲು ವಂತಗಾಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭ ನಾಪೋಕ್ಲು ಗ್ರಾ.ಪಂ ಮಾಜಿ ಅಧ್ಯಕ್ಷ ಸಲೀಮ್ ಹ್ಯಾರಿಸ್, ಮಾಜಿ ಸದಸ್ಯ ಅಬ್ದುಲ್ ಅಝೀಝ್, ಇಬ್ರಾಹಿಂ, ಹಂಝ ಬಶೀರ್, ಅಹಮದ್ ಸೇರಿದಂತೆ ಪಕ್ಷದ ಕಾರ್ಯಕರ್ತರು ಹಾಜರಿದ್ದರು.
ಜಿಲ್ಲಾಧ್ಯಂತ ನಿಷೇಧಾಜ್ಞೆ ಜಾರಿಯಲ್ಲಿರುವುದರಿಂದ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನಾಪೋಕ್ಲು ಪಟ್ಟಣದಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ವರದಿ :ಝಕರಿಯ ನಾಪೋಕ್ಲು

















