ಸೋಮವಾರಪೇಟೆ ಜೂ 7 : ಸಾಮಾಜಿಕ ಅರಣ್ಯ ವಲಯ, ಸೋಮವಾರಪೇಟೆ ಹಾಗೂ ಯಡೂರು ಗ್ರಾಮದ ಬಿಟಿಸಿಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹಯೋಗದಲ್ಲಿ ಕಾಲೇಜು ಆವರಣದಲ್ಲಿ ಗಿಡ ನೆಡುವ ಮೂಲಕ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು.
ಉಪ ಅರಣ್ಯ ಸಂರಕ್ಷಣಾಧಿಕಾರಿ ಪೂವಯ್ಯ ಗಿಡನೆಡುವ ಮೂಲಕ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಪ್ರಾಕೃತಿಕ ವಿಕೋಪಕ್ಕೆ ಹಸಿರೀಕರಣ ಶಾಶ್ವತ ಪರಿಹಾರ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸಾಮಾಜಿಕ ಅರಣ್ಯ ವಲಯದ ವಲಯ ಅರಣ್ಯಾಧಿಕಾರಿ ಕೆ.ವಿ. ಗಾನಶ್ರೀ ಮಾತನಾಡಿ, ವಿಶ್ವ ಪರಿಸರ ದಿನ ಅರ್ಥಪೂರ್ಣವಾಗಬೇಕಾದರೆ ನೆಟ್ಟಿರುವ ಗಿಡ ಮರವಾಗಿ ಫಲದಾಯಕವಾಗಬೇಕು. ಈ ಕಾರ್ಯ ಸಫಲತೆ ಪರಿಸರದ ಅರಿವು ಮತ್ತು ಕಾಳಜಿ ಇದ್ದವರಿಗೆ ಮಾತ್ರ ಸಾಧ್ಯ. ಇಡೀ ತಾಲ್ಲೂಕಿಗೆ ಮಾದರಿಯಾಗುವಂತ ನೆಡುತೋಪು ನಿರ್ಮಾಣ ಮಾಡಲು ಬಿಟಿಸಿಜಿ ಕಾಲೇಜನ್ನು ಆಯ್ಕೆ ಮಾಡಲಾಗಿದೆ. ಕಾಲೇಜಿನ ಸಹಕಾರದೊಂದಿಗೆ ಮಾದರಿ ನಡುತೋಪು ನಿರ್ಮಾಣ ಮಾಡುವುದಾಗಿ ತಿಳಿಸಿದರು.
ವಿದ್ಯಾರ್ಥಿಗಳಿಗೆ ಪರಿಸರದ ಕುರಿತು ಪ್ರೇಮ ಬೆಳೆಯುತ್ತದೆ ಹಾಗೂ ಕಾಲೇಜಿನ ಆರ್ಥಿಕ ಸಂಪನ್ಮೂಲವು ಆಗುತ್ತದೆ ಎಂದು ತಿಳಿಸಿದರು.
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಗೋಪಾಲ್, ತಹಸೀಲ್ದಾರ್ ಎಸ್. ಎನ್ ನರಗುಂದ, ಪ್ರಾಂಶುಪಾಲರಾದ ಧನಲಕ್ಷ್ಮಿ, ಸಾಮಾಜಿಕ ಅರಣ್ಯ ವಲಯದಿಂದ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಮತ್ತು ಚಿತ್ರಕಲೆ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು.
ವಿಜೇತರಿಗೆ ಅತಿಥಿಗಳು ನಗದು ಬಹುಮಾನ ನೀಡಿದರು. ಡಿಆರ್‍ಎಫ್‍ಒಗಳಾದ ಸಿ.ಕೆ.ಭವ್ಯ, ಫಿರೋಜ್ ಖಾನ್ ಹಾಜರಿದ್ದರು.







