ಗೋಣಿಕೊಪ್ಪಲು ಜೂ.16 : ಕಾವೇರಿ ಕಾಲೇಜಿನ ವಿದ್ಯಾಸಂಸ್ಥೆಗೆ ‘ನ್ಯಾಕ್ ‘ ತಂಡ ಭೇಟಿ ನೀಡಿತು.
ನ್ಯಾಕ್ ತಂಡದಲ್ಲಿ ಜಗತ್ ಗುರುನಾನಕ್ ದೇವ್ ಪಂಜಾಬ್‍ನ ಓಪನ್ ಯುನಿವರ್ಸಿಟಿ ಪಂಜಾಬ್‍ನ ಉಪ ಕುಲಪತಿ ಡಾ.ಕರಮ್‍ಜಿತ್ ಸಿಂಗ್, ರಾಜಸ್ಥಾನದ ಉದಯ್‍ಪುರ್ ಎಂಎಲ್‍ಎಸ್ ಯುನಿವರ್ಸಿಟಿಯ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಕನ್ನಿಕಾ ಶರ್ಮ, ದೆಹಲಿಯ ಶ್ರೀ ವೆಂಕಟೇಶ್ವರ ಕಾಲೇಜಿನ ಪ್ರಾಂಶುಪಾಲರಾದ ಡಾ.ಸಿ.ಸುನೀಲ ರೆಡ್ಡಿ ಇದ್ದರು.
ನ್ಯಾಕ್ ತಂಡವನ್ನು ಕೊಡವ ಉಡುಪು ಧರಿಸಿದ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಆತ್ಮೀಯವಾಗಿ ಬರ ಮಾಡಿಕೊಂಡರು.
ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಇಟ್ಟಿರ ಬಿದ್ದಪ್ಪ, ಕಾರ್ಯದರ್ಶಿ ಕುಲ್ಲಚಂಡ ಬೋಪಣ್ಣ, ಪ್ರಾಂಶುಪಾಲ ಡಾ.ಕಾವೇರಪ್ಪ ಹೂಗುಚ್ಛ ನೀಡಿ ಸ್ವಾಗತಿಸಿದರು. ತಂಡವು 2 ದಿನಗಳ ಕಾಲ ಮೌಲ್ಯಾಂಕನ ನಡೆಸಲಿದೆ ಎಂದು ಕಾಲೇಜಿನ ಅಧ್ಯಕ್ಷ ಇಟ್ಟಿರ ಬಿದ್ದಪ್ಪ ತಿಳಿಸಿದರು.
ಪ್ರಾಂಶುಪಾಲ ಡಾ. ಕಾವೇರಪ್ಪ ಮಾತನಾಡಿ, ಕಾವೇರಿ ಕಾಲೇಜು 2005ರಲ್ಲಿ ಮೊದಲ ಮೌಲ್ಯಾಂಕನಕ್ಕೆ ಒಳಪಟ್ಟಿತ್ತು. ಆ ಸಂದರ್ಭ ಬಿ ಪ್ಲಸ್‌ಪ್ಲಸ್ ದೊರಕಿತ್ತು. 2011ರಲ್ಲಿ 2ನೇ ಮೌಲ್ಯಾಂಕನಕ್ಕೆ ಒಳಪಟ್ಟಂತಹ ಸಂದರ್ಭ ಎ ಶ್ರೇಣಿ ಪಡೆದಿತ್ತು. 2017ರಲ್ಲಿ 3ನೇ ಬಾರಿ ಮೌಲ್ಯಾಂಕನದಲ್ಲಿ ಹೆಚ್ಚಿನ ಅಂಕ ಪಡೆಯುವ ಮೂಲಕ ಎ ಶ್ರೇಣಿಯನ್ನು ಪಡೆದಿತ್ತು. 4ನೇ ಮೌಲ್ಯಾಂಕನಕ್ಕೆ ತಂಡವು ಆಗಮಿಸಿದೆ. ಕಾಲೇಜಿನ ಸರ್ವಾಂಗೀಣ ಪ್ರಗತಿಯನ್ನು ಪರಿಶೀಲಿಸಲಿದೆ. ಈ ಬಾರಿಯೂ ಎ ಪ್ಲಸ್ ಶ್ರೇಣಿ ಪಡೆಯುವ ವಿಶ್ವಾಸದಲ್ಲಿದ್ದೇವೆ ಎಂದರು.








