ಸಿದ್ದಾಪುರ ಜೂ.17 : ವ್ಯಕ್ತಿಯೊಬ್ಬರು ದ್ವಿಚಕ್ರ ವಾಹನದಲ್ಲಿ ತೋಟದ ಮಾರ್ಗದಲ್ಲಿ ಸಾಗುತ್ತಿದ್ದ ಸಂದರ್ಭ ದಿಢೀರನೆ ಕಾಡಾನೆ ಪ್ರತ್ಯಕ್ಷಗೊಂಡು ಫೀಳಿಟ್ಟ ಸಂದರ್ಭ ಭಯಗೊಂಡು ಎದುರಿ ಕಂಬಕ್ಕೆ ಬೈಕ್ ಸಿಹಿತವಾಗಿ ಡಿಕ್ಕಿ ಹೊಡೆದು ಕಾಲು ಮುರಿತಗೊಂಡಿರು ಘಟನೆ ಪುಲಿಯೇರಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ನಿವಾಸಿ ಸುರೇಶ್ ಎಂಬವರು ಗಾಯ ಗೊಂಡ ವ್ಯಕ್ತಿ. ಅಮ್ಮತ್ತಿಯ ಅಮೇರಿಕನ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.
ಮಾಹಿತಿ ತಿಳಿದು ಶಾಸಕ ಪೊನ್ನಣ್ಣ ಅವರ ಸೂಚನೆಯಂತೆ ಕೆಪಿಸಿಸಿ ವಕ್ತಾರ ಸಂಕೇಂತ್ ಪೂವಯ್ಯ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಹಾಗೂ ಕುಟುಂಬದವರಿಗೆ ಸಾಂತ್ವನ ಹೇಳಿ ವೈದ್ಯರೊಂದಿಗೆ ಚರ್ಚಿಸಿದ್ದಾರೆ.
ಗಾಯಾಳು ಸುರೇಶ್ ಅವರಿಗೆ ಶಸ್ತ್ರಚಿಕಿತ್ಸೆ ನಡೆಸಬೇಕಿದ್ದು, ಸೋಮವಾರ ನಡೆಸುವುದಾಗಿ ವೈದ್ಯರು ತಿಳಿಸಿದ್ದಾರೆ. ಘಟನೆ ಬಗ್ಗೆ ಅರಣ್ಯಾಧಿಕಾರಿಗಳೊಂದಿಗೆ ಚರ್ಚಿಸಲಾಗಿದ್ದು, ಸೂಕ್ತ ಪರಿಹಾರ ಹಾಗೂ ಕಾಡಾನೆ ಕಾಡಿಗಟ್ಟುವ ಕಾರ್ಯಾಚರಣೆ ನಡೆಸಲು ಶಾಸಕರು ಸೂಚಿಸಿದ್ದಾರೆ.
ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲು ಸ್ಥಳೀಯರಾದ ಎಸ್.ಹೆಚ್.ಮತೀನ್, ಜಾನ್‍ಸನ್, ಎನ್.ಎ.ನೌಶಾದ್, ಎ.ಡಿ.ದಿನೇಶ್, ದಿವಾಕರ್ ಮತ್ತಿರರು ಸಹಕರಿಸಿದ್ದಾರೆ. ಸ್ಥಳಕ್ಕೆ ಆರ್.ಎಫ್.ಓ ದೇವಯ್ಯ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲಿಸಿ ಮಹಜರು ನಡೆಸಿದ್ದಾರೆ.







