ಮಡಿಕೇರಿ ಜೂ.19 : 2022-23ನೇ ಸಾಲಿನಲ್ಲಿ 7ನೇಹೊಸಕೋಟೆ ಸರ್ಕಾರಿ ಪ್ರೌಢಶಾಲೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಹಾಗೂ ಕಾರಣರಾದ ಶಿಕ್ಷಕರನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪಂಚಾಯತ್ ಅಧ್ಯಕ್ಷ ರಮೇಶ್, ನಾವು ಉತ್ತಮವಾದ ನಾಗರೀಕರಾಗುವುದನ್ನು ಮುಖ್ಯ ಗುರಿಯನ್ನಾಗಿಸಿಕೊಳ್ಳಬೇಕು. ಇದೇ ಮೊದಲ ಬಾರಿಗೆ ನಮ್ಮ ಶಾಲೆ ಸನ್ಮಾನಕ್ಕೆ ಭಾಜನರಾಗುತ್ತಿರುವುದು ನಮ್ಮ ಜವಾಬ್ದಾರಿಯನ್ನು ಹೆಚ್ಚು ಮಾಡುತ್ತಿದೆ. ಈ ಸನ್ಮಾನ ಪಡೆದುಕೊಂಡು ಸಿಕ್ಕ ಗೌರವವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ನುಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಡಿ.ಎಸ್.ಎಸ್ ಜಿಲ್ಲಾ ಸಂಚಾಲಕ ಹೆಚ್.ಎಲ್.ದಿವಾಕರ್, ಇತರ ವಿದ್ಯಾರ್ಥಿಗಳು ಸ್ಪೂರ್ತಿಗೊಂಡು ಹೆಚ್ಚಿನ ಸಾಧಿಸುವ ಪ್ರಯತ್ನ ನಡೆಸುವಂತಾಗಲಿ ಎಂದು ದಲಿತ ಸಂಘರ್ಷ ಸಮಿತಿ ಶಿಕ್ಷಕರನ್ನು ಹಾಗೂ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಪ್ರೋತ್ಸಾಹಿಸುತ್ತ ಬರಲಾಗುತ್ತಿದೆ ಎಂದರು.
ವಿದ್ಯಾರ್ಥಿಗಳು ದೇಶದ ಶಕ್ತಿ. ಅವರನ್ನು ಯಾವುದೇ ದಶ್ಚಟಗಳಿಗೆ ಬಲಿಯಾಗದಂತೆ ವಿದ್ಯಾರ್ಥಿ ಜೀವನದಲ್ಲೇ ಜಾಗೃತಗೊಳಿಸಬೇಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಂದೀಶ್ ಮಾತನಾಡಿ, ವಿದ್ಯಾರ್ಥಿಗಳನ್ನು ಮುನ್ನಲೆಗೆ ತರುವ ಶಿಕ್ಷಕರನ್ನು ಸನ್ಮಾನಿಸಿ ಪ್ರೋತ್ಸಾಹಿಸುವುದು ಉತ್ತಮ ಕಾರ್ಯ ಎಂದು ಶ್ಲಾಘಿಸಿದರು.
ಡಾ.ಬಿ.ಆರ್.ಅಂಬೇಡ್ಕರ್ ಅವರು ಶಾಲೆಯ ಹೊರಭಾಗದಲ್ಲಿ ಕುಳಿತು ಓದಿ ನಮ್ಮನ್ನೆಲ್ಲಾ ಒಳಗೆ ಕುಳಿತು ಓದುವ ಹಾಗೆ ಕಾನೂನು ರೂಪಿಸಿದ್ದಾರೆ ಅವರನ್ನು ಎಂದಿಗೂ ಮರೆಯುವಂತಿಲ್ಲ ಎಂದರು.
ಮಡಿಕೇರಿ ತಾಲ್ಲೂಕು ಸಂಚಾಲಕ ದೀಪಕ್ ಪೊನ್ನಪ್ಪ ಮಾತನಾಡಿ, ಅಂಬೇಡ್ಕರ್ ಅವರ ಮಹತ್ವವನ್ನು ಉದಾಹರಣೆಗಳ ಸಹಿತ ವಿವರಿಸುತ್ತಾ, ಡಾ.ಬಿ.ಆರ್.ಅಂಬೇಡ್ಕರ್ ಅವರು ಯಾವ ರೀತಿ ಅಭ್ಯಾಸ ನಡೆಸುತ್ತಿದ್ದರು ಮತ್ತು ಆ ಶ್ರಮದಿಂದ ಅವರು ಗಳಿಸಿದ ಪದವಿಗಳು, ಸ್ಥಾನ, ಗೌರವದ ಅರಿವಿತ್ತರು.
ವಿದ್ಯಾರ್ಥಿಗಳು ಯಾವ ಕಾರಣಕ್ಕೆ ತಮ್ಮ ಪಠ್ಯಪುಸ್ತಕಗಳ ಜೊತೆಗೆ ಇತರ ಪುಸ್ತಕಗಳನ್ನು ಓದಬೇಕು ಹಾಗೂ ಈ ಓದು ಯಾವಾಗ ಅವರಿಗೆ ನೆರವಾಗುತ್ತದೆ ಎನ್ನುವುದನ್ನು ಸ್ಪಷ್ಟಪಡಿಸಿದರು.
ಶಾಲೆಯ ಮುಖ್ಯ ಶಿಕ್ಷಕ ಸೋಮಯ್ಯ ಮಾತನಾಡಿ, ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲೂ ಹೆಚ್ಚು ಅಂಕ ಗಳಿಸುವ ಮೂಲಕ ಇತರ ವಿದ್ಯಾರ್ಥಿಗಳಿಗೆ ಮಾದರಿಯಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಶಾಲೆಯ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಶ್ರೀಜಾ, ಉಪಾಧ್ಯಕ್ಷ ಸಯ್ಯದ್ ಅಲಿ, ಸುಂಟಿಕೊಪ್ಪ ಪೊಲೀಸ್ ಠಾಣೆಯ ಸಹಾಯಕ ಉಪ ನಿರೀಕ್ಷಕರು ಹಾಜರಿದ್ದರು.







