ನಾಪೋಕ್ಲು ಜೂ.21 : ಮಳೆ ಕೊರತೆ ಹಿನ್ನೆಲೆ ಜಿಲ್ಲೆಯಲ್ಲಿ ಉತ್ತಮ ಮಳೆ ಆಗುವಂತೆ ಸಂಸದ ಪ್ರತಾಪ ಸಿಂಹ ಹಾಗೂ ಮಾಜಿ ಶಾಸಕ ಕೆ.ಜಿ ಬೋಪಯ್ಯ ಕಕ್ಕಬ್ಬೆಯ ಶ್ರೀ ಪಾಡಿ ಇಗ್ಗುತಪ್ಪ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಜೂನ್ ಮೂರನೇ ವಾರಕ್ಕೆ ಕಾಲಿಟ್ಟರೂ ಮುಂಗಾರು ಮಳೆ ಆರಂಭವಾಗುವ ಲಕ್ಷಣಗಳು ಕಾಣಿಸುತ್ತಿಲ್ಲ. ಕೊಡಗಿನಲ್ಲಿ ಕಾಫಿ ಹಾಗೂ ಕಾಳುಮೆಣಸಿನ ಕೃಷಿಗೆ ಸಮಸ್ಯೆ ಉಂಟಾಗಲಿದೆ. ಕೃಷಿ ಚಟುವಟಿಕೆಗಳು ಹಿನ್ನಡೆ ಆಗಲಿವೆ. ಈ ಹಿನ್ನೆಲೆಯಲ್ಲಿ ಸಂಸದರು ಹಾಗೂ ಮಾಜಿ ಶಾಸಕರು ಪ್ರಾರ್ಥಿಸಿದರು.
ಈ ಸಂದರ್ಭ ಬಿಜೆಪಿ ತಾಲೂಕು ಅಧ್ಯಕ್ಷ ಕಾಂಗಿರ ಸತೀಶ್, ಬಿಜೆಪಿ ಹಿಂದುಳಿದ ವರ್ಗಗಳ ತಾಲೂಕು ಅಧ್ಯಕ್ಷ ಕೋಲೆಯಂಡ ಗಿರೀಶ್, ಬಿಜೆಪಿ ತಾಲೂಕು ಕಾರ್ಯದರ್ಶಿ ಪಾಡಿಯಮ್ಮಂಡ ಮನು ಮಹೇಶ್, ಕಕ್ಕಬೆ ಶಕ್ತಿ ಕೇಂದ್ರದ ಅಧ್ಯಕ್ಷ ಕಲಿಯಂಡ ಸುನಂದ, ತಾ.ಪಂ ಮಾಜಿ ಉಪಾಧ್ಯಕ್ಷ ಬೊಳಿಯಾಡಿರ ಸಂತು ಸುಬ್ರಮಣಿ, ಕಕ್ಕಬೆ ವಿಎಸ್ಎಸ್ ಎನ್ ಅಧ್ಯಕ್ಷ ಕಲ್ಯಾಟಂಡ ರಘು ತಮ್ಮಯ್ಯ, ಭಕ್ತ ಜನ ಸಂಘದ ಉಪಾಧ್ಯಕ್ಷ ಪರದಂಡ ಡಾಲಿ, ಚಂಡಿರ ಜಗದೀಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದು, ದೇವಾಲಯದ ಪಾರುಪತ್ಯೆಗಾರ ಪ್ರಿನ್ಸ್ ತಮ್ಮಯ್ಯ ಪ್ರಾರ್ಥನೆ ಸಲ್ಲಿಸಿ ಅರ್ಚಕ ಕುಶ ಭಟ್ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು.
ಪ್ರಾರ್ಥನೆಯ ಫಲ ಎಂಬಂತೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ದೇವಾಲಯದಲ್ಲಿ ಬಿರುಸಿನ ಮಳೆ ಸುರಿದು ಭಕ್ತಿಪರಶರಾದರು.
ವರದಿ : ದುಗ್ಗಳ ಸದಾನಂದ







