ಮಡಿಕೇರಿ ಜೂ.22 : ರಾಜಾಸೀಟು ಅಭಿವೃದ್ಧಿ ಸಮಿತಿ ಸಭೆಯು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅಧ್ಯಕ್ಷತೆಯಲ್ಲಿ ನಡೆಯಿತು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ರಾಜಾಸೀಟು, ರಾಜರ ಗದ್ದುಗೆ, ನೆಹರು ಮಂಟಪ ಅಭಿವೃದ್ಧಿ ಸಂಬಂಧಿಸಿದಂತೆ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಎಚ್.ಆರ್.ನಾಯಕ್ ಮಾಹಿತಿ ನೀಡಿದರು.
ರಾಜಾಸೀಟು ಅಭಿವೃದ್ಧಿ ಸಂಬಂಧ ಇದುವರೆಗೆ ಕೈಗೊಳ್ಳಲಾಗಿರುವ ಕಾರ್ಯಕ್ರಮಗಳ ಬಗ್ಗೆ ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಪ್ರಮೋದ್ ಮಾಹಿತಿ ನೀಡಿದರು.
ರಾಜಾಸೀಟು ಅಭಿವೃದ್ಧಿ ಸಂಬಂಧಿಸಿದಂತೆ ಮಾಹಿತಿ ಪಡೆದು ಮಾತನಾಡಿದ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ರಾಜಸೀಟು, ರಾಜರ ಗದ್ದುಗೆ, ನೆಹರು ಮಂಟಪಕ್ಕೆ ಭೇಟಿ ನೀಡಿ ಪರಿಶೀಲಿಸಿದ ನಂತರ ಹೊಸ ಕ್ರಿಯಾಯೋಜನೆ ಅನುಮೋದಿಸಲಾಗುವುದು ಎಂದು ತಿಳಿಸಿದರು.
ಯಾವ ಉದ್ದೇಶಕ್ಕೆ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲಾಗುತ್ತದೆ ಎಂಬ ಬಗ್ಗೆ ಸಮಗ್ರ ವರದಿ ನೀಡುವಂತೆ ಜಿಲ್ಲಾಧಿಕಾರಿ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರಿಗೆ ಸೂಚಿಸಿದರು.
ರಾಜಸೀಟಿನ ಪುಟಾಣಿ ರೈಲು ಭಾಗದಲ್ಲಿ ಬೀದಿ ವ್ಯಾಪಾರಿಗಳಿಗೆ ನಿರ್ಮಾಣ ಮಾಡಲು ಉದ್ದೇಶಿಸಿರುವ ಅಂಗಡಿ ಮಳಿಗೆ ಯೋಜನೆ ಬಗ್ಗೆ ಮಾಹಿತಿ ಪಡೆದ ಜಿಲ್ಲಾಧಿಕಾರಿ ತಾತ್ಕಾಲಿಕ ಮಳಿಗೆ ನಿರ್ಮಾಣದ ಸಾಧಕ ಬಾಧಕಗಳ ಬಗ್ಗೆ ಪರಿಶೀಲಿಸಿ ವರದಿ ನೀಡುವಂತೆ ಸಂಬಂಧಪಟ್ಟ ಎಂಜಿನಿಯರ್‍ಗೆ ಸಲಹೆ ನೀಡಿದರು.
ಗ್ರೇಟರ್ ರಾಜಸೀಟು ಕಾಮಗಾರಿ ಪ್ರಗತಿ ಬಗ್ಗೆ ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಸಿದ್ಧೇಗೌಡ ಮಾಹಿತಿ ನೀಡಿದರು. ಕೂರ್ಗ್ ವಿಲೇಜ್ ಯೋಜನೆ ಬಗ್ಗೆ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಸಚಿನ್ ವಿವರಿಸಿದರು.
ಕಳೆದ ವರ್ಷದ ವಾರ್ಷಿಕ ಆದಾಯದ ಮತ್ತು ಖರ್ಚಿನ ವಿವರ, ರಾಜಸೀಟು ಉದ್ಯಾನದಲ್ಲಿ ಕೈಗೊಳ್ಳುವ ಕಾಮಗಾರಿ ಸಂಬಂಧಿಸಿದಂತೆ ಪ್ರಮೋದ್ ಮಾಹಿತಿ ನೀಡಿದರು.
ಉಪ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್.ಸುಂದರರಾಜ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಶಬಾನಾ ಎಂ.ಶೇಕ್, ನಗರಸಭೆಯ ಪೌರಾಯುಕ್ತರಾದ ವಿಜಯ್, ಪ್ರವಾಸೋದ್ಯಮ ಇಲಾಖೆಯ ಸಮಾಲೋಚಕರಾದ ಜತಿನ್, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕರಾದ ಮುತ್ತಪ್ಪ ಇತರರು ಇದ್ದರು.








