ಮಡಿಕೇರಿ ಜು.7 : ಮಡಿಕೇರಿ ನಗರಸಭಾ ಸದಸ್ಯ ಹಾಗೂ ಮಡಿಕೇರಿ ಕೊಡವ ಸಮಾಜದ ನಿರ್ದೇಶಕ ಕಾಳಚಂಡ ಅಪ್ಪಣ್ಣ ಅವರ ಮೇಲೆ ಹಲ್ಲೆ ನಡೆಸಿದ ಆರೋಪದಡಿ ಕೆಲವು ಯುವಕರನ್ನು ನಗರಠಾಣಾ ಪೊಲೀಸರು ಬಂಧಿಸಿದ್ದಾರೆ.
ಕಾರಿನಲ್ಲಿ ಹೋಗುತ್ತಿದ್ದ ನನ್ನ ಮೇಲೆ ಯುವಕರ ಗುಂಪು ಹಲ್ಲೆ ಮಾಡಿದೆ ಎಂದು ಅಪ್ಪಣ್ಣ ಅವರು ನೀಡಿದ ದೂರಿನ ಹಿನ್ನೆಲೆ ಮೋನಿಶ್ ಸೇರಿದಂತೆ ಕೆಲವು ಯುವಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಗುರುವಾರ ಸುರಿದ ಧಾರಾಕಾರ ಮಳೆಗೆ ನಮಗೆ ಸೇರಿದ ಐಟಿಐ ಜಂಕ್ಷನ್ ಬಳಿಯ ಕ್ಯಾಂಟೀನ್ ಗೆ ನೀರು ನುಗ್ಗಿತ್ತು. ಈ ಸಂದರ್ಭ ವಾರ್ಡ್ ಸದಸ್ಯ ಅಪ್ಪಣ್ಣ ಅವರಿಗೆ ದೂರು ನೀಡಿದರೂ ಯಾವುದೇ ಸ್ಪಂದನೆ ನೀಡಿಲ್ಲ. ಕೊನೇ ಗಳಿಗೆಯಲ್ಲಿ ಬಂದ ಅಪ್ಪಣ್ಣ ಅವರು ಅವಾಚ್ಯ ಶಬ್ಧ ಬಳಸಿದ ಕಾರಣ ಕಲಹ ಏರ್ಪಟ್ಟಿದೆ ಎಂದು ಮೋನಿಶ್ ಆರೋಪಿಸಿದ್ದಾರೆ.
ಉಭಯ ಕಡೆಯಿಂದ ನಗರ ಠಾಣೆಯಲ್ಲಿ ದೂರು ದಾಖಲಾಗಿದ್ದು, ಅಪ್ಪಣ್ಣ ಅವರು ಜಿಲ್ಲಾಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆಯನ್ನು ಮಡಿಕೇರಿ ಕೊಡವ ಸಮಾಜ ತೀವ್ರವಾಗಿ ಖಂಡಿಸಿದ್ದು, ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕೆಂದು ಆಗ್ರಹಿಸಿದೆ. ಜಿಲ್ಲಾ ಕಾಂಗ್ರೆಸ್ ವಕ್ತಾರ ತೆನ್ನಿರ ಮೈನಾ ಕೂಡ ಘಟನೆಯನ್ನು ಖಂಡಿಸಿದ್ದಾರೆ.








