ಮಡಿಕೇರಿ ಜು.29 : ಮಡಿಕೇರಿ ತಾಲ್ಲೂಕಿನ ನರಿಯಂದಡ ಗ್ರಾಮ ಪಂಚಾಯಿತಿಗೆ ಒಳ ಪಡುವ ಚೇಲಾವರ ಗ್ರಾಮದಲ್ಲಿ ಬಂಡೆಗಲ್ಲುಗಳ ಮೇಲಿನಿಂದ ಸುಮಾರು 100 ಅಡಿ ಎತ್ತರದಿಂದ ಹಾಲ್ನೊರೆಯಂತೆ ದುಮುಕುವ ಚೇಲಾವರ ಜಲಪಾತದ ಸೊಬಗನ್ನು ನೋಡುವುದೇ ವಿಸ್ಮಯ.
ಚೋಮಾ ಕುಂದು ಹಾಗೂ ಕಬ್ಬೆ ಬೆಟ್ಟದಿಂದ ಉಗಮವಾಗುವ ಜಲಮೂಲದಿಂದ ಚೇಲಾವರ ಜಲಪಾತ ಉಂಟಾಗಿದೆ. ಸಾಮಾನ್ಯವಾಗಿ ಅಲ್ಲಿನ ನಿವಾಸಿಗಳು ಈ ಜಲಪಾತವನ್ನು “ಏಮೆಪಾರೆ” ಎಂದು ಕರೆಯುತ್ತಾರೆ.
ಕಳೆದ ಎರಡು ವಾರಗಳಿಂದ ಸುರಿದ ಮಳೆಯಿಂದ ಚೇಲಾವರ ಜಲಕನ್ಯೆ ಮನ ಮೋಹಕವಾಗಿದೆ. ಮಡಿಕೇರಿಯಿಂದ 37 ಕಿ.ಮೀ ಮತ್ತು ವಿರಾಜಪೇಟೆಯಿಂದ 26 ಕಿ.ಮೀ. ದೂರದಲ್ಲಿ ಜಲಪಾತವಿದೆ. ಚೆಯ್ಯಂಡಾಣೆಗೆ ತೆರಳಿ ಅಲ್ಲಿಂದ ಕವಲು ಹಾದಿಯಲ್ಲಿ 5 ಕಿ.ಮೀ. ದೂರಕ್ಕೆ ಸಾಗಿದರೆ ನಿಸರ್ಗದ ನಡುವೆ ಇರುವ ಅಪೂರ್ವ ಜಲಧಾರೆಯ ಸೊಬಗನ್ನು ಸವಿಯಬಹುದು. (ಅಶೋಕ್ _ಮಡಿಕೇರಿ)









