ಚೆಯ್ಯಂಡಾಣೆ ಜು.31 : ಇಬ್ಬರು ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದಡಿ ಪೋಕ್ಸೋ ಪ್ರಕರಣ ಎದುರಿಸಿ ಸೇವೆಯಿಂದ ಅಮಾನತುಗೊಂಡಿದ್ದ ಮುಖ್ಯ ಶಿಕ್ಷಕರೊಬ್ಬರನ್ನು ಮತ್ತೆ ಚೆಯ್ಯಂಡಾಣೆಯ ನರಿಯಂದಡ ಕೇಂದ್ರ ಪ್ರೌಢಶಾಲೆಗೆ ನಿಯೋಜಿಸಲಾಗುತ್ತಿದೆ ಎಂದು ಸಂಶಯಗೊಂಡ ವಿದ್ಯಾರ್ಥಿಗಳ ಪೋಷಕರು ಹಾಗೂ ಸಾರ್ವಜನಿಕರು ಪ್ರತಿಭಟನೆ ನಡೆಸಿದರು.
ತಕ್ಷಣ ಶಿಕ್ಷಣಾಧಿಕಾರಿಗಳು ಸ್ಥಳಕ್ಕಾಗಮಿಸಿ ಪೋಷಕರೊಂದಿಗೆ ಸಮಾಲೋಚನೆ ನಡೆಸಬೇಕು. ಯಾವುದೇ ಕಾರಣಕ್ಕು ಆರೋಪ ಎದುರಿಸುತ್ತಿರುವ ಶಿಕ್ಷಕನನ್ನು ಈ ಶಾಲೆಗೆ ನಿಯೋಜಿಸಬಾರದು ಎಂದು ಒತ್ತಾಯಿಸಿದರು.
ಶಾಲೆಯ ಆಡಳಿತ ಮಂಡಳಿಯ ಕಾರ್ಯದರ್ಶಿ ರಾಜೇಶ್ ಅಚ್ಚಯ್ಯ ಈ ಶಿಕ್ಷಕನನ್ನು ಬೇರೆ ಶಾಲೆಗೆ ವರ್ಗಾವಣೆ ಮಾಡಿ ನಮ್ಮ ವಿರೋಧವಿಲ್ಲ, ಆದರೆ ನಮ್ಮ ಶಾಲೆಗೆ ಮಾತ್ರ ಇವರನ್ನು ನೇಮಿಸಲು ನಾವು ಬಿಡುವುದಿಲ್ಲ. ನೇಮಕ ಮಾಡಿದರೆ ಆಡಳಿತ ಮಂಡಳಿ ಸಾಮೂಹಿಕವಾಗಿ ರಾಜೀನಾಮೆ ನೀಡಲಿದೆ ಎಂದು ಎಚ್ಚರಿಕೆ ನೀಡಿದರು.
ಗ್ರಾಮಸ್ಥ ಜೆಪ್ಪು ದೇವಯ್ಯ ಅವರು ಕೂಡ ಆರೋಪಿ ಶಿಕ್ಷಕನ ನಿಯೋಜನೆಗೆ ವಿರೋಧ ವ್ಯಕ್ತಪಡಿಸಿದರು.
ಶಿಕ್ಷಣಾಧಿಕಾರಿ ರಂಗಧಾಮಯ್ಯ ಅವರು ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿ ಶಿಕ್ಷಕನನ್ನು ಈ ಶಾಲೆಗೆ ನಿಯೋಜಿಸಲು ಪೋಷಕರು ಹಾಗೂ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತ ಪಡಿಸುತ್ತಿರುವ ಕಾರಣ ಇಲಾಖೆಗೆ ಮಾಹಿತಿ ನೀಡಲಾಗುವುದು. ಮೇಲಧಿಕಾರಿಗಳ ಸೂಚನೆಯಂತೆ ನಡೆದುಕೊಳ್ಳುವುದಾಗಿ ತಿಳಿಸಿದರು.
ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಗಿರೀಶ್ ಪೂಣಚ್ಚ, ಪದಾಧಿಕಾರಿಗಳು, ಪೋಷಕರು ಹಾಗೂ ಗ್ರಾಮಸ್ಥರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ನಾಪೋಕ್ಲು ಠಾಣಾಧಿಕಾರಿ ಮಂಜುನಾಥ್ ಅವರ ನೇತೃತ್ವದಲ್ಲಿ ಪೋಲಿಸ್ ಬಂದೋಬಸ್ತ್ ಮಾಡಲಾಗಿತ್ತು.(ವರದಿ : ಅಶ್ರಫ್)







