ಸೋಮವಾರಪೇಟೆ ಆ.8 : ಕೊಡಗು ಜಿಲ್ಲಾ ವೀರಶೈವ ಜಂಗಮ ಅರ್ಚಕರ ಹಾಗೂ ಪುರೋಹಿತರ ಸಂಘದ ವಾರ್ಷಿಕ ಮಹಾಸಭೆ ನಡೆಯಿತು.
ವಿರಕ್ತಮಠದ ಆವರಣದಲ್ಲಿ ಸಂಘದ ಅಧ್ಯಕ್ಷ ಮೋಹನಮೂರ್ತಿ ಶಾಸ್ತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಂಘದ ಬೆಳವಣಿಗೆ, ಕಟ್ಟಡನಿರ್ಮಾಣ ಸೇರಿದಂತೆ ಹಲವು ವಿಷಯಗಳ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು.
ಈ ಸಂದರ್ಭ ಸಾನಿಧ್ಯ ವಹಿಸಿದ್ದ ಕಿರಿಕೊಡ್ಲಿ ಮಠಾಧೀಶ ಶ್ರೀ ಸದಾಶಿವ ಸ್ವಾಮೀಜಿ ಮಾತನಾಡಿ, ಜಿಲ್ಲೆಯಲ್ಲಿರುವ ವೀರಶೈವ ಲಿಂಗಾಯತ ಅರ್ಚಕರುಗಳು ಸಂಘಟಿತರಾಗಬೇಕು, ಸಂಘಟನೆಯಲ್ಲಿ ಬಲವಿದೆ ಅದನ್ನು ಅರಿತುಕೊಳ್ಳಬೇಕು ಎಂದರು. ಅರ್ಚಕರುಗಳಿಗೂ ಸಮಾಜದಲ್ಲಿ ಗೌರವವಿದೆ, ಜವಾಬ್ದಾರಿಯಿದೆ ಅದನ್ನು ಅರಿತು ನಡೆಯಬೇಕೆಂದು ತಿಳಿಸಿದರು.
ಕಳೆದ ಏಳು ವರ್ಷಗಳಿಂದ ಸಂಘಟನೆ ಉತ್ತಮವಾಗಿ ಕಾರ್ಯನಿರ್ವಹಿಸಿದೆ, ಮುಂದೆ ಇನ್ನಷ್ಟು ಉತ್ತಮವಾಗಿ ಸಮಾಜಕ್ಕೆ ಸೇವೆಸಲ್ಲಿಸಿ ಎಂದರು.
ಈ ಸಂದರ್ಭ ಸಂಘದ ಉಪಾಧ್ಯಕ್ಷ ಶಾಂತಮಲ್ಲಯ್ಯ ಶಾಸ್ತ್ರಿ, ಕಾರ್ಯದರ್ಶಿ ಸೋಮಶೇಖರ ಶಾಸ್ತ್ರಿ,ಖಜಾಂಚಿ ವೇದಮೂರ್ತಿ ನಿರ್ದೇಶಕರುಗಳಾದ ಯೋಗೇಶ್ ಶಾಸ್ತ್ರಿ, ನಂದೀಶ್ ಶಾಸ್ತ್ರಿ,ಮಹೇಶ್,ಚಂದ್ರಶೇಖರಯ್ಯ ಹಾಗೂ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.







