ಮಡಿಕೇರಿ ಆ.9 : ಪ್ರತಿಯೊಬ್ಬ ಭಾರತೀಯ ಪ್ರಜೆ ದೇಶಾಭಿಮಾನ ಬೆಳೆಸಿಕೊಳ್ಳುವುದರೊಂದಿಗೆ ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆಯನ್ನು ಗೌರವದಿಂದ ಕಾಣಬೇಕೆಂದು ಭಾರತ ಸೇವಾದಳದ ರಾಜ್ಯ ಸಂಪನ್ಮೂಲ ವ್ಯಕ್ತಿ, ವಲಯ ಸಂಘಟಕ ಈರಯ್ಯ ಅವರು ಕರೆ ನೀಡಿದ್ದಾರೆ.
ಭಾರತ ಸೇವಾದಳದ ವಿರಾಜಪೇಟೆ ತಾಲ್ಲೂಕು ಸಮಿತಿ ಮತ್ತು ವಿರಾಜಪೇಟೆ ತಾಲ್ಲೂಕು ಪಂಚಾಯ್ತಿ ವತಿಯಿಂದ ತಾ.ಪಂ ವ್ಯಾಪ್ತಿಯ ಗ್ರಾ.ಪಂ ಸಿಬ್ಬಂದಿಗಳಿಗೆ ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆ ಕುರಿತು ಮಾಹಿತಿ ಕಾರ್ಯಾಗಾರ ಹಾಗೂ ಪ್ರಾತ್ಯಕ್ಷಿಕೆ ನಡೆಯಿತು.
ಕಾರ್ಯಾಗಾರದಲ್ಲಿ ಪಾಲ್ಗೊಂಡು ಮಾತನಾಡಿದ ಈರಯ್ಯ ಅವರು ರಾಷ್ಟ್ರಧ್ವಜವನ್ನು ಆರೋಹಣ ಮತ್ತು ಅವರೋಹಣ ಮಾಡುವ ಸಂದರ್ಭ ಅತ್ಯಂತ ಗೌರವದಿಂದ ನಡೆದುಕೊಳ್ಳಬೇಕು ಎಂದರು.
ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ತಾ.ಪಂ ಕಾರ್ಯನಿರ್ವಹಣಾಧಿಕಾರಿ ಕೆ.ಸಿ.ಅಪ್ಪಣ್ಣ, ರಾಷ್ಟ್ರಧ್ವಜವನ್ನು ಕಟ್ಟುವ ವಿಧಾನ ಮತ್ತು ಆರೋಹಣ, ಅವರೋಹಣ ಮಾಡುವ ರೀತಿಯನ್ನು ಪ್ರತಿಯೊಬ್ಬರು ತಿಳಿದುಕೊಂಡಿರಬೇಕು. ರಾಷ್ಟ್ರಧ್ವಜ ಹಾಗೂ ರಾಷ್ಟ್ರಗೀತೆಗೆ ಎಲ್ಲೂ ಅಗೌರವ ಆಗದಂತೆ ಎಚ್ಚರ ವಹಿಸಬೇಕು ಎಂದು ಕರೆ ನೀಡಿದರು.
ಖಾದಿ ಭಂಡಾರದಲ್ಲಿ ದೊರೆಯುವ ಐಎಸ್‍ಐ ಚಿಹ್ನೆ ಹೊಂದಿರುವ ನಿರ್ದಿಷ್ಟ ಅಳತೆಯ ರಾಷ್ಟ್ರಧ್ವಜವನ್ನೇ ಖರೀದಿಸಬೇಕು ಮತ್ತು ಮಾರುಕಟ್ಟೆಯ ಧ್ವಜವನ್ನು ಬಳಸಬಾರದು ಎಂದು ಸಲಹೆ ನೀಡಿದ ಅವರು, ರಾಷ್ಟ್ರಧ್ವಜದ ಆರೋಹಣ ಮತ್ತು ಅವರೋಹಣದ ಬಗ್ಗೆ ವಿವರಿಸಿದರು.
ಸೇವಾದಳದ ಜಿಲ್ಲಾ ಸಂಘಟಕ ರೇವಣ್ಣ ಜಿ.ಈ ಅವರು ರಾಷ್ಟ್ರಧ್ವಜದ ಇತಿಹಾಸವನ್ನು ತಿಳಿಸಿದರು.
ಕಾರ್ಯಕ್ರಮದಲ್ಲಿ ಭಾರತ ಸೇವಾದಳದ ತಾಲ್ಲೂಕು ಸಮಿತಿ ಅಧ್ಯಕ್ಷ ಎ.ಸಿ.ದೇವಯ್ಯ, ಕಾರ್ಯದರ್ಶಿ ಸುರೇಶ್, ಜಿಲ್ಲಾ ಸಮಿತಿ ಸದಸ್ಯರಾದ ಸಿ.ಡಿ.ಮಾದಪ್ಪ, ಪ್ರವೀಣ್ ಪಿ.ಎ, ತಮ್ಮಯ್ಯ ಹಾಗೂ ಗ್ರಾ.ಪಂ ಸಿಬ್ಬಂದಿಗಳು ಉಪಸ್ಥಿತರಿದ್ದರು.








