ಮಡಿಕೇರಿ ಆ.10 : ಭತ್ತವನ್ನು ಬೆಳೆಸುವ ವಿಧಾನದ ಕುರಿತು ಅರಿವು ಮೂಡಿಸುವ ಸಲುವಾಗಿ ಕೊಡಗು ಗೌಡ ಯುವ ವೇದಿಕೆ ವತಿಯಿಂದ ಕಗ್ಗೋಡ್ಲುವಿನ ಕೃಷಿಕ ಮಂದ್ರೀರ ತೇಜಸ್ ನಾಣಯ್ಯ ಅವರ ಗದ್ದೆಯಲ್ಲಿ ವಿದ್ಯಾರ್ಥಿಗಳಿಗೆ ಅಗೆ ಮತ್ತು ನಾಟಿ ಮಾಡುವ ತರಬೇತಿ ನೀಡಲಾಯಿತು.
ಮಡಿಕೇರಿಯ ಲಿಟ್ಲ್ ಫ್ಲವರ್ ಶಾಲೆಯ ಪುಟ್ಟ ಪುಟ್ಟ ಮಕ್ಕಳು ಮೊದಲ ಬಾರಿಗೆ ಕೆಸರಿನ ಗದ್ದೆಗೆ ಇಳಿದು ಖುಷಿಪಟ್ಟರು. ಅಗೆ ತೆಗೆಯುವಾಗ ವಹಿಸಬೇಕಾದ ಎಚ್ಚರಿಕೆ, ನಾಟಿ ನೆಡುವಾಗ ಕಲಿಯಬೇಕಾದ ಕೃಷಿ ನಿಯಮಗಳ ಬಗ್ಗೆ ತಿಳಿಹೇಳಲಾಯಿತು.
ಮಕ್ಕಳು ಕುತೂಹಲದ ಪ್ರಶ್ನೆಗಳಿಗೆ ಉತ್ತರ ಪಡೆದುಕೊಳ್ಳುವ ಮೂಲಕ ತಮ್ಮ ತಟ್ಟೆಯ ಅನ್ನದ ಹಿಂದಿರುವ ಕೃಷಿ ಕತೆಯ ಅನುಭವ ಹೊಂದಿದರು. ನಂತರ ತೇಜಸ್ ಅವರ ಕೆರೆಯಲ್ಲಿ ಮಕ್ಕಳಿಗೆ ಬೋಟಿಂಗ್ ಮಾಡಿಸಲಾಯಿತು. ಮೀನು ಮತ್ತು ಬಾತುಕೋಳಿಗಳಿಗೆ ಸ್ವತಃ ಆಹಾರ ನೀಡುವುದರೊಂದಿಗೆ ಅವುಗಳ ಜೀವನ ಕ್ರಮ ಅರಿತುಕೊಂಡರು.
ಕಾರ್ಯಕ್ರಮದಲ್ಲಿ ಮಕ್ಕಳಿಗಾಗಿ ಊರಿನ ದಾನಿಗಳಾದ ಬಳಪದ ರೋಷನ್ ಮಂದಣ್ಣ, ಕೊಡಂದಿರ ಪೊನ್ನಣ್ಣ, ತುಮ್ತಜಿರ ದಯಾನಂದ್, ಕುಂಜಿಲನ ಮೋಹನ್ ವಿವಿಧ ನೆರವು ನೀಡಿದರು. ಕೊಡಗು ಗೌಡ ಯುವ ವೇದಿಕೆಯ ಅಧ್ಯಕ್ಷರು, ಪದಾದಿಕಾರಿಗಳು, ಲಿಟ್ಲ್ ಫ್ಲವರ್ ಶಾಲಾ ಶಿಕ್ಷಕರು ಮಕ್ಕಳೊಂದಿಗೆ ಅಗೆ ಮತ್ತು ನಾಟಿ ಮಾಡುವುದರಲ್ಲಿ ಕೈಜೋಡಿಸಿದರು.









