ವಿರಾಜಪೇಟೆ ಸೆ.13 : ಪದವಿ ಪೂರ್ವ ಶಿಕ್ಷಣ ಇಲಾಖೆ ವತಿಯಿಂದ ವಿರಾಜಪೇಟೆ ತಾಲೂಕು ಮಟ್ಟದ ಕ್ರೀಡಾಕೂಟದ ಕಬ್ಬಡಿ ಪಂದ್ಯಾವಳಿ ಬಾಳುಗೋಡು ಏಕಲವ್ಯ ಮಾದರಿ ವಸತಿ ಕಾಲೇಜಿನಲ್ಲಿ ನಡೆಯಿತು.
ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ತಿತಿಮತಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಚಾಲ್ರ್ಸ್ ಡಿಸೋಜಾ, ವಿದ್ಯಾರ್ಥಿಗಳು ಉತ್ತಮ ಪೈಪೋಟಿಯೊಂದಿಗೆ ಕ್ರೀಡಾ ಮನೋಭಾವನೆಯನ್ನು ಬೆಳೆಸಿಕೊಳ್ಳುವಂತೆ ಕರೆ ನೀಡಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ. ಐ.ಎಂ.ದಿಲನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸುಮಾರು 18ಕ್ಕೂ ಅಧಿಕ ಕಾಲೇಜುಗಳ ನಡುವೆ ಜರುಗಿದ ಈ ಕ್ರೀಡಾಕೂಟ ಬಾಲಕರ ವಿಭಾಗದಲ್ಲಿ ಬಿ.ಜಿ.ಎಸ್ ಪದವಿ ಪೂರ್ವ ಕಾಲೇಜು ಸಿದ್ದಾಪುರ ಮತ್ತು ಬಾಲಕಿಯರ ವಿಭಾಗದಲ್ಲಿ ತಿತಿಮತಿ ಪದವಿ ಪೂರ್ವ ಕಾಲೇಜು ವಿಜೇತರಾಗಿ ಜಿಲ್ಲಾಮಟ್ಟವನ್ನು ಪ್ರವೇಶಿಸಿತು.
ಬಾಲಕ ಮತ್ತು ಬಾಲಕಿಯರ ವಿಭಾಗದ ರನ್ನರ್ಸ್ ಸ್ಥಾನವನ್ನು ಕ್ರಮವಾಗಿ ಸಂತ ಅನ್ನಮ್ಮ ಪದವಿ ಪೂರ್ವ ಕಾಲೇಜು ಮತ್ತು ಸರ್ಕಾರಿ ಪದವಿ ಪೂರ್ವ ಕಾಲೇಜು ಪೊನ್ನಂಪೇಟೆ ತಮ್ಮದಾಗಿಸಿಕೊಂಡಿತು.
ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ ತಿತಿಮತಿ ಮೊರಾರ್ಜಿ ಶಾಲೆ ಪ್ರಾಂಶುಪಾಲರಾದ ಷಡಕ್ಷರಿ ಮತ್ತು ಶ್ರೀಮಂಗಲ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಚಂದ್ರಶೇಖರ್ ವಿಜೇತ ಮತ್ತು ರನ್ನರ್ಸ್ ತಂಡಗಳಿಗೆ ಟ್ರೋಫಿ ಮತ್ತು ಪ್ರಶಸ್ತಿ ಪತ್ರ ಪ್ರದಾನ ಮಾಡಿದರು.
ಕ್ರೀಡೆಗೆ ವಿಶೇಷ ತೀರ್ಪುಗಾರರಾಗಿ ಬೆಕ್ಕೆಸೊಡ್ಲೂರುವಿನ ಶ್ರೀ ಶಾರದಾ ಪ್ರೌಢಶಾಲೆಯ ದೈಹಿಕ ಶಿಕ್ಷಕರಾದ ಚೌಹಾನಿ, ಚೂರಿಕಾಡು ಜಿ.ಎಂ.ಪಿ ಶಾಲೆಯ ವಿನಯ್ ತೋಡ್ಕರ್, ತಿತಿಮತಿ ಎಂಡಿಆರ್‍ಎಸ್‍ನ ಹಸೀನಾ ಅಲಾರಕಿ ಭಾಗವಹಿಸಿದ್ದರು.
ಉಳಿದಂತೆ ವಿವಿಧ ಕಾಲೇಜುಗಳ ಕ್ರೀಡಾ ತರಬೇತುದಾರರು, ಕಾಲೇಜು ಉಪನ್ಯಾಸಕರು ನೆರೆದಿದ್ದರು.







