ಮಡಿಕೇರಿ, ಸೆ.21: ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಪಲಿತಾಂಶದಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ಶಾಲಾ ಶಿಕ್ಷಣ ಇಲಾಖೆಯು ದಿಟ್ಟ ಹೆಜ್ಜೆಯೊಂದಿಗೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಇವುಗಳನ್ನು ಅನುಷ್ಠಾನಗೊಳಿಸುವ ಮೂಲಕ ಪ್ರೌಢಶಾಲಾ ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕರು ಎಸ್‌ಎಸ್‌ಎಲ್‌ಸಿ ಫಲಿತಾಂಶ ವೃದ್ಧಿಗೆ ವಿಶೇಷ ಒತ್ತು ನೀಡಬೇಕು ಎಂದು ಕೂಡಿಗೆ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ( ಡಯಟ್ ) ಯ ಪ್ರಾಂಶುಪಾಲ, ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ( ಅಭಿವೃದ್ಧಿ ) ಚಂದ್ರಕಾಂತ್ ಹೇಳಿದರು.
ಶಾಲಾ ಶಿಕ್ಷಣ ಇಲಾಖೆ ಹಾಗೂ ಕೂಡಿಗೆ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ( ಡಯಟ್ ) ಯ ವತಿಯಿಂದ ಕೂಡಿಗೆ ಡಯಟ್ ನ ಸಭಾಂಗಣದಲ್ಲಿ ಏರ್ಪಡಿಸಿದ್ದ ಶೈಕ್ಷಣಿಕ ಕಾರ್ಯಾಗಾರ ಹಾಗೂ ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆ ಕುರಿತಂತೆ ಏರ್ಪಡಿಸಿದ್ದ ಸಮಾಲೋಚನಾ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು,
ಫಲಿತಾಂಶವನ್ನು ಉತ್ತಮ ಪಡಿಸಲು ವಿಶೇಷ ಕಾರ್ಯಯೋಜನೆ ಮೂಲಕ ದಶ ಸೂತ್ರಗಳನ್ನು ಅನುಷ್ಠಾನಗೊಳಿಸಬೇಕು ಎಂದು ಹೇಳಿದರು.
ಪ್ರಸಕ್ತ ಸಾಲಿನಲ್ಲಿ ವಿದ್ಯಾರ್ಥಿಗಳ ಮಾನಸಿಕ ಹಾಗೂ ಬೌದ್ಧಿಕ ಸಾಮರ್ಥ್ಯವನ್ನು ಅರ್ಥ ಮಾಡಿ ಕೊಂಡು ಪರಿಣಾಮಕಾರಿ ಬೋಧನೆಯೊಂದಿಗೆ ಎಸ್.ಎಸ್.ಎಲ್.ಸಿ. ಪರೀಕ್ಷಾ ಫಲಿತಾಂಶವನ್ನು ಜಿಲ್ಲೆಯಲ್ಲಿ ಉತ್ತಮಗೊಳಿಸುವ ಕುರಿತು ಹಲವು ಸಲಹೆಗಳನ್ನು ಪ್ರಾಂಶುಪಾಲ ಚಂದ್ರಕಾಂತ್ ನೀಡಿದರು.
ಕಲಿಕೆಯಲ್ಲಿ ಹಿಂದುಳಿದಿರುವ ಮಕ್ಕಳ ಕಲಿಕೆಗೆ ಕ್ರಿಯಾಯೋಜನೆ ಮತ್ತು ಧನಾತ್ಮಕ ಚಿಂತನೆ ಮೂಡಿಸಬೇಕು ಎಂದು ತಿಳಿಸಿದರು. ವಿದ್ಯಾರ್ಥಿಗಳು ಈಗಿನಿಂದಲೇ ಓದಲು ಪಟ್ಟಾಗಿ ಕುಳಿತರೆ ಯಶಸ್ವಿಯಾಗಿ ಪರೀಕ್ಷೆ ಎದುರಿಸಬಹುದು. ಕಳೆದ ವರ್ಷ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕೊಡಗು ಜಿಲ್ಲೆಯು 9 ನೇ ಸ್ಥಾನ ಗಳಿಸಿದ್ದು,
ಈ ಬಾರಿ ಜಿಲ್ಲೆಯ ಫಲಿತಾಂಶವು 5ನೇ ಸ್ಥಾನದ ಒಳಗೆ ಬರಲೇಬೇಕು ಎನ್ನುವ ಕಾರಣದಿಂದ ಇಲಾಖೆ ಹತ್ತಾರು ಮಾರ್ಗೋಪಾಯಗಳ ಮೂಲಕ ಅವಿರತವಾಗಿ ಫಲಿತಾಂಶ ಸುಧಾರಿಸಲು ಶ್ರಮಿಸುತ್ತಿದೆ ಎಂದರು.
ಫಲಿತಾಂಶವನ್ನು ಉತ್ತಮ ಪಡಿಸಲು ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಶಾಲೆಗಳನ್ನು ದತ್ತು ನೀಡುವ ಮೂಲಕ
ಅಧಿಕಾರಿಗಳ ನೇತೃತ್ವದ ತಂಡಗಳು ಪ್ರತಿ ಶಾಲೆಗೆ ಭೇಟಿ ನೀಡಿ ಶಿಕ್ಷಕರೊಂದಿಗೆ ಸಮಾಲೋಚನೆ ಮಾಡುವ ಮೂಲಕ ಶಾಲೆಯಲ್ಲಿ ಕೈಗೊಂಡಿರುವ ವಿವಿಧ ಶೈಕ್ಷಣಿಕ ಚಟುವಟಿಕೆಗಳು ಹಾಗೂ ಸುಧಾರಣಾ ಕ್ರಮಗಳ ಕುರಿತು ಮಾಹಿತಿ ನೀಡಿದರು.
ಶಾಲಾ ಆಡಳಿತ ವ್ಯವಸ್ಥೆ, ಶಿಕ್ಷಕರ ಸಮನ್ವಯತೆ ಹಾಗೂ ಫಲಿತಾಂಶ ಸುಧಾರಣೆ ಕುರಿತು ಮಾಹಿತಿ ನೀಡಿದ ಡಯಟ್ ಸಂಸ್ಥೆಯ ಹಿರಿಯ ಉಪನ್ಯಾಸಕ ಕೆ.ಎಸ್.ಶಿವಕುಮಾರ್ ಮಾತನಾಡಿ, ಎಸ್‌ಎಸ್‌ಎಲ್‌ಸಿ ಪರೀಕ್ಷಾ
ಫಲಿತಾಂಶ ಸುಧಾರಣೆಗಾಗಿ ಉತ್ತಮ ಕ್ರಿಯಾಯೋಜನೆಯನ್ನು ತಯಾರಿಸಿ ಅದನ್ನು ತಪ್ಪದೇ ಅನುಷ್ಠಾನಗೊಳಿಸಿದಲ್ಲಿ ತಮ್ಮ ಶಾಲೆಯ ಫಲಿತಾಂಶ ಶೇ.100 ರಷ್ಟು ಗಳಿಸಲು ಸಾಧ್ಯ ಎಂದು ತಿಳಿಸಿದರು.
ಮಕ್ಕಳಿಗೆ ವಿಶೇಷ ತರಬೇತಿ, ಗುಂಪು ಚರ್ಚೆ, ವಿದ್ಯಾರ್ಥಿಗಳ ವೈಯಕ್ತಿಕ ಕಡತ ನಿರ್ವಹಣೆ, ಪರಿಹಾರ ಬೋಧನೆ, ವಿದ್ಯಾರ್ಥಿಗಳ ಗುಂಪು ರಚಿಸಿ ಶಿಕ್ಷಕರಿಗೆ ದತ್ತು ನೀಡುವುದು, ‘ಸ್ಪಷ್ಟ ಓದು, ಶುದ್ಧ ಬರಹ, ಸರಳ ಗಣಿತ’ ಅಂಶಕ್ಕೆ ಒತ್ತು ನೀಡಬೇಕು ಎಂಬುದು ಅವರು ಸಲಹೆ ನೀಡಿದರು.
ಶಾಲಾಭಿವೃದ್ಧಿಯಲ್ಲಿ ಸಮುದಾಯದ ಪಾತ್ರ ಕುರಿತು ಮಾಹಿತಿ ನೀಡಿದ ಹಿರಿಯ ಉಪನ್ಯಾಸಕ ಎಸ್.ಪಿ.ಮಹದೇವ್ ಮಾತನಾಡಿ, ಶಾಲಾಭಿವೃದ್ಧಿಯಲ್ಲಿ ಆಡಳಿತ ವ್ಯವಸ್ಥೆ ಹಾಗೂ ಎಸ್.ಡಿ.ಎಂ.ಸಿ. ಮತ್ತು ಸಮುದಾಯದ ಸಹಭಾಗಿತ್ವದ ಪಾತ್ರದ ಕುರಿತು ವಿವರಿಸಿದರು.
ಹಿರಿಯ ಉಪನ್ಯಾಸಕಿ ಗೀತಾ , ಫಲಿತಾಂಶ ಸುಧಾರಣೆಯ ಕ್ರಮಗಳು ಹಾಗೂ ಶೈಕ್ಷಣಿಕ ವಿಚಾರಗಳ ಕುರಿತು ಮಾಹಿತಿ ನೀಡಿದರು. ಪ್ರೌಢಶಾಲೆಗಳಲ್ಲಿ ವೀರಗಾಥೆ ಕಾರ್ಯಕ್ರಮ ಹಾಗೂ ಇನ್ಸ್ ಫೈರಡ್ ಅವಾರ್ಡ್ ( Inspired Award) ಮತ್ತು ಎನ್.ಎನ್.ಎಂ.ಎಸ್.ಪರೀಕ್ಷೆ ಮುಂತಾದ ಶೈಕ್ಷಣಿಕ ವಿಚಾರಗಳ ಕುರಿತು ಉಪನ್ಯಾಸಕರು ಪ್ರೌಢಶಾಲಾ ಮುಖ್ಯ ಶಿಕ್ಷಕರಿಗೆ ಮಾಹಿತಿ ನೀಡಿದರು.
ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಟಿ.ಸೋಮಶೇಖರ್ , ಮುಖ್ಯ ಶಿಕ್ಷಕರು ಹಾಗೂ ಸಹ ಶಿಕ್ಷಕರು ಜತೆಗೂಡಿ ಸಮನ್ವಯತೆಯಿಂದ ಕಾರ್ಯ ನಿರ್ವಹಿಸಿದರೆ ಶಾಲೆಗಳಲ್ಲಿ ಉತ್ತಮ ಫಲಿತಾಂಶ ಗಳಿಸಲು ಸಾಧ್ಯ ಎಂದರು.
ಸಂಸ್ಥೆಯ ಉಪನ್ಯಾಸಕರಾದ ಎಂ.ಕೃಷ್ಣಪ್ಪ, ಕೆ.ಎಸ್.ನಳಿನಾಕ್ಷಿ, ವಿ . ವಿಜಯ್, ಎಂ.ಲತಾ, ಕೆ.ಜಿ.ನೀಲಕಂಠಪ್ಪ, ಧನಪಾಲ್, ಸಿದ್ದೇಶ್ ಕುಮಾರ್, ಎಂ.ಎ.ಗೀತಾ, ಬಿ.ಪಿ.ಗಾಯಿತ್ರಿ ಇತರರು ಇದ್ದರು.






