ಮಡಿಕೇರಿ ಸೆ.25 : ವಿಶಿಷ್ಟ ಸಂಸ್ಕೃತಿಯ ಮೂಲಕ ಕೊಡವರು ತಮ್ಮನ್ನು ಗುರುತಿಸಿಕೊಂಡಿದ್ದು, ಇವರ ಮೂಲಭೂತ ಸಮಸ್ಯೆಗಳನ್ನು ಅರಿತು ಬಗೆಹರಿಸಲು ಸರ್ವರು ಪ್ರಯತ್ನ ಮಾಡಬೇಕೆಂದು ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಎ.ಎಸ್. ಪೊನ್ನಣ್ಣ ಕರೆ ನೀಡಿದ್ದಾರೆ.
ನಗರದ ತ್ರಿವೇಣಿ ಆಂಗ್ಲ ಮಾದ್ಯಮ ಶಾಲೆಯ ಜಿಮ್ಮಿ ಕಲಾ ವೇದಿಕೆಯಲ್ಲಿ ಆಯೋಜಿಯ ವಿರಾಜಪೇಟೆ ಕೊಡವ ಸಮಾಜದ ನೂರರ ಸಂಭ್ರಮ ‘ನೂರಾಂಡ್ ನಮ್ಮೆ’ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿ, ರಾಜಕೀಯ ಎಂಬುದು ಪ್ರಜಾಪ್ರಭುತ್ವದ ಒಂದು ಭಾಗ. ಆದರೆ ಇದೇ ರಾಜಕೀಯದಿಂದಾಗಿ ಭಿನ್ನಮತ, ಸಂಘರ್ಷಗಳು ಉಂಟಾಗಿ ಜನಾಂಗದ ನಡುವೆ ಬಾಂಧವ್ಯ ಕಳೆದುಕೊಳ್ಳುತ್ತೇವೆ. ಆದರೆ, ಸಮಸ್ಯೆಗಳಿಗೆ ರಾಜಕೀಯ ರಹಿತವಾಗಿ ಒಗ್ಗೂಡಿ ಹೋರಾಟ ಮಾಡಿದಲ್ಲಿ ಮಾತ್ರ ಸಂಘಟನೆಯು ಬಲವೃದ್ಧಿಯಾಗುತ್ತದೆ ಎಂದು ಹೇಳಿದರು.
ಕೊಡಗು-ಮೈಸೂರು ಸಂಸದರಾದ ಪ್ರತಾಪ್ ಸಿಂಹ ಮಾತನಾಡಿ, ಕೊಡವ ಜನಾಂಗವು ತನ್ನ ಮೂಲ ನೆಲೆಯನ್ನು ಬಿಟ್ಟು ಇತರೆಡೆಗಳಲ್ಲಿ ವಾಸ ಮಾಡುವುದರಿಂದ ಕೊಡಗಿನಲ್ಲಿ ಕೊಡವರ ಸಂಖ್ಯೆ ಕ್ಷೀಣಿಸಿಕೊಂಡು ಬರುತ್ತಿದೆ. ಕೊಡವರು ವಿಶಿಷ್ಟವಾದ ವೀರ ಪರಂಪರೆಯನ್ನು ಹೊಂದಿದ್ದು, ಇತರ ಸಮುದಾಯಗಳಿಗಿಂತ ಭಿನ್ನವಾಗಿದ್ದಾರೆ. ದೇಶದ ರಕ್ಷಣಾ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆ ನೀಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕೊಡವ ಸಮುದಾಯವನ್ನು ಬಲಗೊಳಿಸಬೇಕು, ಅಲ್ಲದೆ ಸಂಸ್ಕೃತಿ ಅಚಾರ ವಿಚಾರಗಳನ್ನು ಉಳಿಸಿ ಬೆಳಸಬೇಕು. ಕೊಡಗಿಗೆ ಮಾರಕವಾಗಿರುವ ಟಿಪ್ಪು ಜಯಂತಿಯನ್ನು ಪ್ರಸ್ತುತ ಸರ್ಕಾರವು ಮುಂದುವರೆಸಲು ಮುಂದಾಗಬಾರದು ಎಂದು ಶಾಸಕರಲ್ಲಿ ಮನವಿ ಮಾಡಿದರು.
ರಾಜ್ಯ ವಿಧಾನ ಪರಿಷತ್ ಸದಸ್ಯ ಮಂಡೇಪಂಡ ಸುಜಾ ಕುಶಾಲಪ್ಪ ಮಾತನಾಡಿ ಕೊಡಗಿನ ಮಣ್ಣಿಗೆ ವಿಶಿಷ್ಟವಾದ ಜೀವಸತ್ವವಿದೆ. ಕೊಡವರು ಪರಿಸರದೊಂದಿಗೆ ಒಡನಾಡಿಕೊಂಡು ಬದುಕು ಕಂಡವರು. ಹಣದ ಮತ್ತು ವಿಲಾಸಿ ಜೀವನಕ್ಕೆ ಬಲಿಯಾಗಿ ಕೆಲವರು ತಮ್ಮ ನೆಲವನ್ನು ಪರರಿಗೆ ಪರಭಾರೆ ಮಾಡುತ್ತಿರುವುದು ಕಳವಳಕಾರಿ ವಿಷಯವಾಗಿದೆ ಎಂದರು.
ಲೆಫ್ಟಿನೆಂಟ್ ಜನರಲ್ ಚೆನ್ನಿರ ಬನ್ಸಿ ಪೊನ್ನಪ್ಪ ಪಿ.ವಿ.ಎಸ್.ಎಂ. ಈ ಹಿಂದೆ ಭಾರತೀಯ ಸೇನೆಯಲ್ಲಿ ಕೊಡವರು ಸಾಕಷ್ಟು ಸಂಖ್ಯೆಯಲ್ಲಿದ್ದರು ಮತ್ತು ಅವರ ಪಾತ್ರವೂ ಮಹತ್ವದ್ದಾಗಿತ್ತು. ಇಂದು ಸೈನ್ಯ ಸೇರುವ ಜನ ವಿರಳವಾಗಿದ್ದಾರೆ.ಸೇನೆಯಲ್ಲಿ ವಿವಿಧ ಕ್ಷೇತ್ರಗಳಿದ್ದು ಎಲ್ಲಾ ಪದವಿಗಳಿಗೆ ಸರಿ ಸಮಾನವಾದ ಅಯ್ಕೆಗಳಿವೆ. ಸಮೂದಾಯ ಬಾಂಧವರು ತಮ್ಮ ಮಕ್ಕಳನ್ನು ಸೇನೆಯ ಸೇವೆಗೆ ಕಳುಹಿಸಲು ಮುಂದಾಗಬೇಕೆಂದು ಕರೆ ನೀಡಿದರು.
ಡೈರೆಕ್ಟರ್ ಜನರಲ್ ಆಫ್ ಎನ್.ಎಸ್.ಜಿ.ಯ ಮನೆಯಪಂಡ ಎ. ಗಣಪತಿ, ಇಂದು ಕೊಡವರ ಪದ್ಧತಿ ಆಚರಣೆಗಳು ಕಣ್ಮರೆಯಾಗುತ್ತಾ ಸಾಗಿದೆ.ನಾಡು, ನುಡಿ, ನೆಲ ಇವುಗಳು ನಮ್ಮ ಜನಾಂಗದ ಪ್ರತೀಕವಾದುದು. ಇದನ್ನು ಉಳಿಸಿ ಬೆಳಸಲು ಮುಂದಾಗುವಂತೆ ಕರೆ ನೀಡಿದರು.
ಕರ್ನಾಟಕ ಸರ್ಕಾರದ ಚೀಫ್ ಎಲೆಕ್ಟ್ರಿಕಲ್ ಇನ್ಸ್‍ಪೆಕ್ಟರ್ ತೀತಿರ ರೋಷನ್ ಅಪ್ಪಚ್ಚು, ದೇಶ ವಿದೇಶಗಳಲ್ಲಿ ವ್ಯಾಸಂಗ ಮಾಡಿ ವಿವಿಧ ಹುದ್ದೆಗಳನ್ನು ಸ್ಥಳೀಯರು ಅಲಂಕರಿಸಿದರು, ನಾಡಿನ ಮಣ್ಣಿನ ಸಂಸ್ಕೃತಿಯನ್ನು ಮರೆಯಬಾರದು. ಸಮುದಾಯದ ಯುವಕರು ಮತ್ತು ಯುವತಿಯರು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸಲು ಪೋಷಕರು ಪ್ರೇರಣೆ ನೀಡಬೇಕೆಂದರು.
ಕೊಡವ ಸಮಾಜದ ಅಧ್ಯಕ್ಷರಾದ ಕುಂಬೇರ ಮನು ಕುಮಾರ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ 1921 ರಲ್ಲಿ ಆರಂಭವಾದ ಕೊಡವ ಸಮಾಜದಲ್ಲಿ ಹಲವಾರು ಮಂದಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಅಧ್ಯಕ್ಷರ ಮತ್ತು ಆಡಳಿತ ಮಂಡಳಿಯ ಸೇವೆ ಅಮೂಲ್ಯವಾದುದು, ಅವರ ಸೇವೆಯನ್ನು ಕೊಡವ ಸಮಾಜವು ಗೌರವದಿಂದ ಸ್ಮರಿಸುತ್ತದೆಂದು ಹೇಳಿದರು.
ಅಖಿಲ ಕೊಡವ ಸಮಾಜದ ಅಧ್ಯಕ್ಷರಾದ ಪರದಂಡ ಕೆ.ಸುಬ್ರಮಣಿ ಮಾತನಾಡಿದರು.
::: ಸನ್ಮಾನ :::
ಇದೇ ಸಂದರ್ಭ ಶಾಸಕರಾದ ಎ.ಎಸ್. ಪೊನ್ನಣ್ಣ, ಲೆಫ್ಟಿನೆಂಟ್ ಜನರಲ್ ಚೆನ್ನಿರ ಬನ್ಸಿ ಪೊನ್ನಪ್ಪ, ಡೈರೆಕ್ಟರ್ ಜನರಲ್ ಆಫ್ ಎನ್.ಎಸ್.ಜಿ. ಮನೆಯಪಂಡ ಎ. ಗಣಪತಿ, ಚೀಫ್ ಎಲೆಕ್ಟ್ರಿಕಲ್ ಇನ್ಸ್‍ಪೆಕ್ಟರ್ ತಿತೀರ ರೋಷನ್ ಅಪ್ಪಚ್ಚು, ಪದ್ಮಶ್ರೀ ರಾಣಿ ಮಾಚಯ್ಯ ಮತ್ತು ಭಾರತೀಯ ರಾಷ್ಟ್ರೀಯ ಹಾಕಿ ತಂಡದ ತರಬೇತುದಾರರಾದ ಬೊಳ್ಯಪಂಡ ಜೆ. ಕಾರ್ಯಪ್ಪ ಅವರನ್ನು ಸನ್ಮಾನಿಸಲಾಯಿತು. ಕೊಡವ ಸಮಾಜದ ಅದ್ಯಕ್ಷರಾಗಿ ಸೇವೆ ಸಲ್ಲಿಸಿದ ಮಹನೀಯರನ್ನು ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು.
ಸಮಾಜದ ಅಧ್ಯಕ್ಷ ಕುಂಬೇರ ಮನು ಕುಮಾರ್ ಸ್ವಾಗತಿಸಿದರು. ಸಮಾಜದ ಗೌರವ ಕಾರ್ಯದರ್ಶಿಗಳಾದ ಮಾಳೇಟಿರ ಶ್ರೀನಿವಾಸ್ ಮತ್ತು ರಾಧ ಚಿನ್ನಪ್ಪ ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷ ಕುಯ್ಮಂಡ ಕಿರಣ್ ವಂದಿಸಿದರು.
::: ಮೆರವಣಿಗೆ :::
ಕಾರ್ಯಕ್ರಮಕ್ಕೂ ಮೊದಲು ನಗರದ ಗಣಪತಿ ದೇವಾಲಯದಿಂದ ಕೊಡವ ಸಮಾಜದ ವರೆಗೆ ಕೊಡವ ಸಂಪ್ರದಾಯಕ ಉಡುಪು ಧರಿಸಿ ಜನಾಂಗ ಬಾಂಧವರು ಮೆರವಣಿಗೆ ನಡೆಸಿದರು.







