ಕೂಡಿಗೆ / ಕುಶಾಲನಗರ, ಅ.5 : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಬಾಲಕರು ಮತ್ತು ಬಾಲಕಿಯರಿಗೆ ಅ.8 ರಂದು ಮೈಸೂರು ವಿಭಾಗದ ಹಾಕಿ ಪಂದ್ಯಾವಳಿ ಹಾಗೂ ಅ.9 ರಂದು ರಾಜ್ಯಮಟ್ಟದ ಹಾಕಿ ಪಂದ್ಯಾವಳಿಯನ್ನು
ಕೂಡಿಗೆಯ ಸರ್ಕಾರಿ ಕ್ರೀಡಾಶಾಲೆಯ ಹಾಕಿ ಟರ್ಫ್ ಮೈದಾನದಲ್ಲಿ ನಡೆಯಲಿದೆ.
ಅ.8 ರಂದು ಬೆಳಿಗ್ಗೆ 10 ಗಂಟೆಗೆ ಒಂದು ದಿನ ಮೈಸೂರು ವಿಭಾಗದ ಹಾಕಿ ಪಂದ್ಯಾವಳಿ ಪ್ರಾರಂಭವಾಗಲಿದೆ.
ಅ.9 ಮತ್ತು 10 ರಂದು ಎರಡು ದಿನಗಳ ಕಾಲ ಪ್ರಾಥಮಿಕ ಹಾಗೂ ಪ್ರೌಢಶಾಲಾ ಬಾಲಕರು ಮತ್ತು ಬಾಲಕಿಯರಿಗೆ ರಾಜ್ಯಮಟ್ಟದ ಹಾಕಿ ಟೂರ್ನಿ ನಡೆಯಲಿದೆ ಎಂದು ಹಾಕಿ ಟೂರ್ನಿಯ ಸಂಚಾಲಕ, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಡಾ.ಸದಾಶಿವಯ್ಯ ಎಸ್.ಪಲ್ಲೇದ್ ತಿಳಿಸಿದ್ದಾರೆ.
ಅ.9 ರಂದು ಬೆಳಿಗ್ಗೆ 10 ಗಂಟೆಗೆ ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂಥರ್ ಗೌಡ ಅಧ್ಯಕ್ಷತೆಯಲ್ಲಿ ಆರಂಭವಾಗಲಿರುವ ರಾಜ್ಯಮಟ್ಟದ ಹಾಕಿ ಪಂದ್ಯಾವಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎನ್.ಬೋಸರಾಜು ಚಾಲನೆ ನೀಡಲಿದ್ದಾರೆ.
ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳು, ಜಿಲ್ಲಾಮಟ್ಟದ ಅಧಿಕಾರಿಗಳು ಹಾಗೂ ಶಿಕ್ಷಕರ ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
ಡಿಸೆಂಬರ್ ವೇಳೆಗೆ ಶಾಲಾ ಮಕ್ಕಳ ರಾಷ್ಟ್ರೀಯ ಹಾಕಿ ಪಂದ್ಯಾವಳಿ : ಡಿಸೆಂಬರ್ 2023 ರ ಕೊನೆವಾರ ಇಲ್ಲವೇ ಜನವರಿ 2024 ರ ಮೊದಲ ವಾರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಶಾಲಾ ಶಿಕ್ಷಣ ಇಲಾಖೆ ಸೇರಿದಂತೆ ಜಿಲ್ಲೆಯ ವಿವಿಧ ಕ್ರೀಡಾ ಸಂಸ್ಥೆಗಳ ಸಹಯೋಗದೊಂದಿಗೆ 17 ವರ್ಷದೊಳಗಿನ ಬಾಲಕಿಯರಿಗೆ ರಾಷ್ಟ್ರೀಯ ಹಾಕಿ ಪಂದ್ಯಾವಳಿ ಕೂಡ ಕೂಡಿಗೆಯ ಸರ್ಕಾರಿ ಕ್ರೀಡಾಶಾಲೆಯಲ್ಲಿ ಮೂರು ದಿನಗಳ ಕಾಲ ನಡೆಯಲಿದೆ ಎಂದು ಡಾ.ಸದಾಶಿವಯ್ಯ ಎಸ್.ಪಲ್ಲೇದ್ ತಿಳಿಸಿದರು.
ರಾಜ್ಯಮಟ್ಟದ ಹಾಕಿ ಟೂರ್ನಿ ಹಾಗೂ ರಾಷ್ಟ್ರೀಯಮಟ್ಟದ ಹಾಕಿ ಟೂರ್ನಿಯ ಸಂಘಟನೆ ಸಂಬಂಧಿಸಿದಂತೆ ಕೂಡಿಗೆಯ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ( ಡಯಟ್) ಯಲ್ಲಿ ನಡೆದ ಕ್ರೀಡಾಕೂಟದ ಪೂರ್ವಭಾವಿ ಸಭೆಯಲ್ಲಿ ಟೂರ್ನಿಯ ರೂಪುರೇಷೆ, ಸಂಘಟನೆ ಹಾಗೂ ವಿವಿಧ ಸಮಿತಿಗಳನ್ನು ರಚಿಸುವ ಸಂಬಂಧಿಸಿದಂತೆ ನಡೆದ ಟೂರ್ನಿಯ ಪೂರ್ವಭಾವಿ ಸಭೆಯಲ್ಲಿ ಮಾಹಿತಿ ನೀಡಿದರು.
ರಾಷ್ಟ್ರೀಯಮಟ್ಟದ ಟೂರ್ನಿಯನ್ನು ಜಿಲ್ಲೆಯಲ್ಲಿ ಯಶಸ್ವಿಯಾಗಿ ಸಂಘಟಿಸುವ ಸಂಬಂಧಿಸಿದಂತೆ ಮುಂದಿನ ದಿನಗಳಲ್ಲಿ ಜಿಲ್ಲಾಡಳಿತ ಹಾಗೂ ಶಾಲಾ ಶಿಕ್ಷಣ ಇಲಾಖೆಯ ನಿರ್ದೇಶನದಂತೆ ವಿವಿಧ ಹಂತದ ಜನಪ್ರತಿನಿಧಿಗಳು, ಅಧಿಕಾರಿಗಳು , ವಿವಿಧ ಕ್ರೀಡಾ ಸಂಸ್ಥೆಗಳು ಹಾಗೂ ವಿವಿಧ ಶಿಕ್ಷಕರ ಸಂಘಟನೆಗಳು ಹಾಗೂ ಸ್ಥಳೀಯ ಸಮುದಾಯವನ್ನು ಒಳಗೊಂಡಂತೆ ಸ್ವಾಗತ ಸಮಿತಿ ಹಾಗೂ ವಿವಿಧ ಸಮಿತಿಗಳನ್ನು ರಚಿಸಲಾಗುವುದು ಎಂದು ತಿಳಿಸಿದರು.
ರಾಷ್ಟ್ರೀಯ ಮಟ್ಟದ ಹಾಕಿ ಟೂರ್ನಿಯನ್ನು ಕೂಡಿಗೆಯ ಸರ್ಕಾರಿ ಕ್ರೀಡಾಶಾಲೆಯ ಟರ್ಫ್ ಮೈದಾನ ಸೇರಿದಂತೆ ಮಡಿಕೇರಿಯ ಸಾಯಿ ಹಾಕಿ ಟರ್ಫ್ , ಸೋಮವಾರಪೇಟೆ ಹಾಗೂ ಪೊನ್ನಂಪೇಟೆಯ ಟರ್ಫ್ ಮೈದಾನಲ್ಲಿ ಏಕಕಾಲದಲ್ಲಿ ಆರು ದಿನಗಳ ಕಾಲ ಲೀಗ್ ಮಾದರಿಯಲ್ಲಿ ಹಾಕಿ ಟೂರ್ನಿ ನಡೆಸಲಾಗುವುದು ಎಂದು ಡಾ.ಸದಾಶಿವಯ್ಯ ಪಲ್ಲೇದ್ ಮಾಹಿತಿ ನೀಡಿದರು.
ಪೂರ್ವಭಾವಿ ಸಭೆಯಲ್ಲಿ ಕೂಡಿಗೆ ಡಯಟ್ ಸಂಸ್ಥೆಯ ಉಪನ್ಯಾಸಕ ಸಿದ್ದೇಶ್ ಕುಮಾರ್, ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಟಿ.ಜಿ.ಪ್ರೇಮಕುಮಾರ್, ಕೂಡಿಗೆ ಸಿ.ಆರ್.ಪಿ., ಕೆ.ಶಾಂತಕುಮಾರ್, ದೈಹಿಕ ಶಿಕ್ಷಣ ಶಿಕ್ಷಕರಾದ ಪ್ರತಾಪ್, ಸುರೇಶ್ ಕುಮಾರ್, ದೊಡ್ಡಯ್ಯ, ಎನ್.ಡಿ.ಸೋಮಶೇಖರ್, ಸುಂದರ್, ಪ್ರಸನ್ನ, ಶಿಕ್ಷಕ ಎಚ್. ಸಿ. ಬಸವರಾಜ್, ದ್ವಿತೀಯ ದರ್ಜೆ ಸಹಾಯಕ ಚಂದ್ರಶೇಖರ್ ಇತರರು ಇದ್ದರು.







