ಮಡಿಕೇರಿ ಅ.11 : ಪೊಡನೋಳನ ಕುಟುಂಬಸ್ಥರಿಂದ ಮಾಜಿ ಸೈನಿಕರಾದ ಪೊಡನೋಳನ ದಿನೇಶ್ ಹಾಗೂ ಪೊಡನೋಳನ ಶ್ರೀನಿವಾಸ್ ಅವರನ್ನು ಸನ್ಮಾನಿಸಲಾಯಿತು.
ಪೊಡನೋಳನ ಕುಟುಂಬಸ್ಥರ ಐನ್ ಮನೆಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಕುಟುಂಬದ ಹಿರಿಯರು ಶಾಲು ಹೊದಿಸಿ ಸನ್ಮಾನಿಸಿ, ಗೌರವಿಸಿದರು.
ಕುಟುಂಬದ ಪ್ರಮುಖರು ಮಾತನಾಡಿ, ಕೋಪಟ್ಟಿ ಗ್ರಾಮದ ಪೊಡನೋಳನ ದಿನೇಶ್ ಕುಂದಚೇರಿ ಗ್ರಾ.ಪಂ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, 18 ವರ್ಷಗಳ ಕಾಲ ತಮ್ಮನ್ನು ದೇಶ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ನಿವೃತ್ತರಾದ ನಂತರ ಅನೇಕ ಸಂಘ, ಸಂಸ್ಥೆಗಳು ಸೇರಿದಂತೆ ಪಂಚಾಯಿತಿ ಅಧ್ಯಕ್ಷರಾಗಿ ಉತ್ತಮ ಜನಸೇವೆ ಹಾಗೂ ಅಭಿವೃದ್ಧಿ ಕಾರ್ಯಗಳನ್ನು ಮಾಡಿ ಹೆಸರುವಾಸಿಯಾಗಿದ್ದಾರೆ.
ಕೋಪಟ್ಟಿ ಗ್ರಾಮದ ಪೊಡನೋಳನ ಶ್ರೀನಿವಾಸ್ ಅವರು ಚೇರಂಬಾಣೆ ವಿ.ಎಸ್.ಎಸ್.ಎನ್ ಬ್ಯಾಂಕ್ ಉಪಾಧ್ಯಕ್ಷರಾಗಿ 2ನೇ ಬಾರಿಗೆ ಆಯ್ಕೆಯಾಗಿದ್ದು, ಇವರು ಸಹ 18 ವರ್ಷಗಳ ಕಾಲ ದೇಶ ಸೇವೆಯಲ್ಲಿ ತೊಡಗಿಸಿಕೊಂಡಿರುತ್ತಾರೆ. ಅಲ್ಲದೇ ವಿವಿಧ ಸಂಘ, ಸಂಸ್ಥೆಯಲ್ಲಿ ಗುರುತಿಸಿಕೊಂಡು ಅಭಿವೃದ್ಧಿ ಕಾರ್ಯಗಳಲ್ಲಿ ತಮ್ಮ ಛಾಪನ್ನು ಮೂಡಿಸಿದ್ದಾರೆ. ಇವರು ಕೋಪಟ್ಟಿ ಗ್ರಾಮದ ಮಹಾವಿಷ್ಣು ದೇವಾಲಯದ ಉಸ್ತುವಾರಿ ಹಾಗೂ ಪೊಡನೊಳನ ಐನ್ ಮನೆಯಲ್ಲಿ ನಿರ್ಮಾಣದ ಹೊಣೆ ಹೊತ್ತಿದ್ದರು. ಚೇರಂಬಾಣೆ ಗೌಡ ಸಮಾಜದ ನಿರ್ಮಾಣದ ಕೆಲಸ ಕಾರ್ಯಗಳಲ್ಲಿಯೂ ಶ್ರಮ ವಹಿಸಿದ್ದಾರೆ. ಈ ನಿಟ್ಟಿನಲ್ಲಿ ಕುಟುಂಬದ ಇಬ್ಬರನ್ನು ಸನ್ಮಾನಿಸಿ ಗೌರವಿಸಲಾಯಿತು ಎಂದರು.
ಮುಂದಿನ ದಿನಗಳಲ್ಲಿ ಇಬ್ಬರು ಮತ್ತಷ್ಟು ಉತ್ತಮ ಅಭಿವೃದ್ಧಿ ಕಾರ್ಯಗಳನ್ನು ನಡೆಸುವಂತಾಗಲಿ ಎಂದು ಹಾರೈಸಿದರು.
ಈ ಸಂದರ್ಭ ಕುಟುಂಬದ ಹಿರಿಯರು, ಮಕ್ಕಳು ಹಾಜರಿದ್ದರು.








