ಮಡಿಕೇರಿ ಅ.11 : ಪಡಿತರ ಚೀಟಿ ತಿದ್ದುಪಡಿ ಮತ್ತು ಹೆಸರು ಸೇರ್ಪಡೆಗಾಗಿ ಸರ್ಕಾರ ಅ.10 ರವರೆಗೆ ಕಾಲಾವಕಾಶ ನೀಡಿತ್ತಾದರೂ ಸರ್ವರ್ ಸಮಸ್ಯೆಯಿಂದ ಹಲವರು ಈ ಅವಕಾಶದಿಂದ ವಂಚಿತರಾಗಿದ್ದಾರೆ. ಆದ್ದರಿಂದ ಅರ್ಜಿದಾರರ ಹಿತದೃಷ್ಟಿಯಿಂದ ದಿನ ವಿಸ್ತರಣೆ ಮಾಡಬೇಕೆಂದು ನಗರಸಭಾ ಮಾಜಿ ಉಪಾಧ್ಯಕ್ಷೆ ಲೀಲಾ ಶೇಷಮ್ಮ ಒತ್ತಾಯಿಸಿದ್ದಾರೆ.
ಮಡಿಕೇರಿ ತಾಲ್ಲೂಕು ಕಚೇರಿಗೆ ಭೇಟಿ ನೀಡಿದ್ದ ಅವರು ಸರ್ವರ್ ಸಮಸ್ಯೆ ಕುರಿತು ಸಾಲುಗಟ್ಟಿ ನಿಂತಿದ್ದ ಅರ್ಜಿದಾರರೊಂದಿಗೆ ಚರ್ಚಿಸಿದರು. ಸರ್ಕಾರ ಅ.10 ರವರೆಗೆ ಪಡಿತರ ಚೀಟಿ ತಿದ್ದುಪಡಿ ಮತ್ತು ಹೆಸರು ಸೇರ್ಪಡೆಗೆ ಅವಕಾಶ ನೀಡಿರುವುದಾಗಿ ಘೋಷಣೆ ಮಾಡಿತೇ ಹೊರತು ಸರ್ವರ್ ಸಮಸ್ಯೆಯನ್ನು ಬಗೆಹರಿಸಿಲ್ಲ. ಪ್ರತಿದಿನ ತಾಲ್ಲೂಕು ಕಚೇರಿಗೆ ಬರುತ್ತಿರುವ ಅರ್ಜಿದಾರರು ದಿನವಿಡೀ ಸಾಲುಗಟ್ಟಿ ನಿಲ್ಲಬೇಕಾದ ಅನಿವಾರ್ಯತೆ ಎದುರಾಗಿದೆ. ಹಲವರು ಅರ್ಜಿ ವಿಲೇವಾರಿಯಾಗದೆ ಮರಳಿದ್ದಾರೆ. ಪಡಿತರ ಚೀಟಿ ಇಲ್ಲದೆ ಅರ್ಹ ಫಲಾನುಭವಿಗಳು ಗೃಹಲಕ್ಷ್ಮಿ ಸೇರಿದಂತೆ ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ ಎಂದು ಲೀಲಾ ಶೇಷಮ್ಮ ಅಸಮಾಧಾನ ವ್ಯಕ್ತಪಡಿಸಿದರು.
ತಾಂತ್ರಿಕ ವ್ಯವಸ್ಥೆಗಳನ್ನು ಮೇಲ್ದರ್ಜೆಗೇರಿಸುತ್ತಿಲ್ಲ. ಸರ್ವರ್ ಕೈಕೊಟ್ಟ ಪರಿಣಾಮ ನೂರಾರು ಅರ್ಜಿದಾರರ ಪಡಿತರ ಚೀಟಿ ತಿದ್ದುಪಡಿಯಾಗಿಲ್ಲ. ಆದ್ದರಿಂದ ಸರ್ಕಾರ ದಿನ ವಿಸ್ತರಣೆ ಮಾಡಿ ಎರಡು ವಾರಗಳ ಕಾಲಾವಕಾಶ ನೀಡುವ ಮೂಲಕ ಅರ್ಜಿದಾರರಿಗೆ ನ್ಯಾಯ ಒದಗಿಸಬೇಕು. ಹೊಸ ಪಡಿತರ ಚೀಟಿ ಮಾಡಿಸುವವರಿಗೆ ಅವಕಾಶ ಕಲ್ಪಿಸಬೇಕು ಮತ್ತು ಸರ್ವರ್ ವ್ಯವಸ್ಥೆಯನ್ನು ಮೇಲ್ದರ್ಜೆಗೇರಿಸಬೇಕೆಂದು ಲೀಲಾ ಶೇಷಮ್ಮ ಒತ್ತಾಯಿಸಿದರು.








